Man returns after 29 years ಸತ್ತಿದ್ದಾನೆಂದು ಕುಟುಂಬ ಭಾವಿಸಿದ್ದ 79 ವರ್ಷದ ವ್ಯಕ್ತಿ 29 ವರ್ಷಗಳ ನಂತರ ಪಶ್ಚಿಮ ಬಂಗಾಳದಿಂದ ತನ್ನ ಹುಟ್ಟೂರಾದ ಮುಜಫರ್‌ನಗರಕ್ಕೆ ಮರಳಿದ್ದಾರೆ. ಎಸ್‌ಐಆರ್ ಪ್ರಕ್ರಿಯೆಗಾಗಿ ದಾಖಲೆಗಳನ್ನು ಸಂಗ್ರಹಿಸಲು ಷರೀಫ್ ಅಹ್ಮದ್ ಬಂದಿದ್ದರು.
ಸಾವು-ಬದುಕಿನ ನಡುವಿನ ಅಂತರವನ್ನೇ ಅಳಿಸಿ ಹಾಕುವಂತಹ ಘಟನೆಯೊಂದು ಮುಜಫರ್‌ನಗರದಲ್ಲಿ ನಡೆದಿದೆ. ಸತ್ತಿದ್ದಾನೆಂದು ಭಾವಿಸಿ ಅಂತಿಮವಾಗಿ ಮರೆತೇ ಬಿಟ್ಟಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ಮೂರು ದಶಕಗಳ ನಂತರ ಊರಿಗೆ ಮರಳಿದ್ದಾರೆ. ಸಿನಿಮಾ ಕಥೆಯನ್ನೂ ಮೀರಿಸುವಂತಿದೆ ಸತ್ತ ವ್ಯಕ್ತಿ ಮತ್ತೆ ಎದ್ದು ಬಂದ ಕತೆ!
1997ರಿಂದ ನಾಪತ್ತೆಯಾಗಿದ್ದ ಷರೀಫ್ ಅಹ್ಮದ್
ಮುಜಫರ್‌ನಗರ ಜಿಲ್ಲೆಯ ಖತೌಲಿಯ ನಿವಾಸಿಯಾದ 79 ವರ್ಷದ ಷರೀಫ್ ಅಹ್ಮದ್, ಮೊದಲ ಪತ್ನಿಯ ನಿಧನದ ನಂತರ ಎರಡನೇ ಮದುವೆಯಾಗಿ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಆದರೆ 1997ರ ನಂತರ ಅವರ ಬಗ್ಗೆ ಕುಟುಂಬಕ್ಕೆ ಯಾವುದೇ ಸುಳಿವು ಇರಲಿಲ್ಲ. ಪಶ್ಚಿಮ ಬಂಗಾಳಕ್ಕೆ ಹೋದವರು ಅಲ್ಲಿಯೇ ನೆಲೆಸಿದ್ದರೇ ಅಥವಾ ಮರಣ ಹೊಂದಿದ್ದರೇ ಎಂಬ ಬಗ್ಗೆ ಮನೆಯವರಿಗೆ ಯಾವ ಮಾಹಿತಿಯೂ ಇರಲಿಲ್ಲ.
ಸತ್ತನೆಂದು ಮರೆತೇ ಬಿಟ್ಟಿದ್ದ ಕುಟುಂಬ
ಷರೀಫ್ ಅವರ ಅಳಿಯ ವಸೀಮ್ ಅಹ್ಮದ್ ಹೇಳುವಂತೆ, ಕುಟುಂಬದವರು ವರ್ಷಗಳ ಕಾಲ ಅವರನ್ನು ಹುಡುಕಲು ಸತತ ಪ್ರಯತ್ನ ನಡೆಸಿದ್ದರು. ಎರಡನೇ ಪತ್ನಿ ನೀಡಿದ್ದ ವಿಳಾಸವನ್ನು ಹಿಡಿದು ಪಶ್ಚಿಮ ಬಂಗಾಳಕ್ಕೂ ಹೋಗಿದ್ದರು. ಆದರೆ ಅಲ್ಲಿ ಯಾವುದೇ ಸುಳಿವು ಸಿಗದೆ ನಿರಾಸೆಯಿಂದ ಹಿಂದಿರುಗಿದ್ದರು. ದಶಕಗಳ ಕಾಲ ಮಾಹಿತಿ ಸಿಗದ ಕಾರಣ, ಅವರ ನಾಲ್ವರು ಹೆಣ್ಣುಮಕ್ಕಳು ತಮ್ಮ ತಂದೆ ಮೃತಪಟ್ಟಿದ್ದಾರೆಂದೇ ಭಾವಿಸಿ ಅವರ ಮೇಲಿನ ಆಸೆಯನ್ನೇ ಕೈಬಿಟ್ಟಿದ್ದರು.
ದಾಖಲೆಗಳಿಗಾಗಿ ಬಂದವನಿಗೆ ಸಿಕ್ಕಿತು ಕುಟುಂಬದ ನಂಟು!
ಯಾವಾಗ ಅತಂತ್ರ ಸ್ಥಿತಿಯಲ್ಲಿದ್ದವನ ದಾಖಲಾತಿ ಸಂಬಂಧಿಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾಯಿತೋ, ಆಗ ಅನಿವಾರ್ಯವಾಗಿ ಷರೀಫ್ ತಮ್ಮ ಹುಟ್ಟೂರಿಗೆ ಬರಬೇಕಾಯಿತು. ಡಿಸೆಂಬರ್ 29 ರಂದು ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಅವರು ಖತೌಲಿಗೆ ಹಿಂತಿರುಗಿದಾಗ, ಇಡೀ ಗ್ರಾಮವೇ ಅಚ್ಚರಿಯಿಂದ ಅವರನ್ನು ನೋಡಿದೆ. ದಾಖಲೆಗಳಿಗಾಗಿ ಬಂದೆ, ಆದರೆ ನನ್ನ ಕುಟುಂಬವೇ ನನಗೆ ಸಿಕ್ಕಿತು ಎಂದು ಭಾವುಕರಾಗಿ ಷರೀಫ್ ಹೇಳಿದ್ದಾರೆ.
ಸಂತೋಷದ ನಡುವೆಯೂ ಕಾಡಿದ ಅಗಲಿಕೆಯ ನೋವು
30 ವರ್ಷಗಳ ನಂತರ ಮನೆಗೆ ಮರಳಿದ ಷರೀಫ್‌ಗೆ ಕೆಲವು ಕಹಿ ಸುದ್ದಿಗಳು ಕಾದಿದ್ದವು. ಅವರು ಊರಿಗೆ ಬರುವಷ್ಟರಲ್ಲಿ ಅವರ ತಂದೆ ಮತ್ತು ಸಹೋದರ ಸೇರಿದಂತೆ ಕುಟುಂಬದ ಹಲವು ಸದಸ್ಯರು ಮರಣ ಹೊಂದಿದ್ದರು. ಆದರೂ, ತಮ್ಮ ತಂದೆಯನ್ನು ಮತ್ತೆ ನೋಡಿದ ಹೆಣ್ಣುಮಕ್ಕಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ಇದು ಮರುಜನ್ಮದಂತೆ ಕಂಡುಬಂತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ದಾಖಲೆಗಳ ಜೊತೆಗೆ ನೆನಪುಗಳನ್ನು ಹೊತ್ತು ಹೋದ ಷರೀಫ್
ತಮ್ಮ ಹುಟ್ಟೂರಿನಲ್ಲಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ ನಂತರ, ಷರೀಫ್ ಅಹ್ಮದ್ ಅವರು ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಎರಡನೇ ಕುಟುಂಬದ ಬಳಿಗೆ ಮರಳಿದರು. 30 ವರ್ಷಗಳ ನಿಗೂಢ ಮೌನವನ್ನು ಮುರಿದು, ಕೇವಲ ದಾಖಲೆಗಳಿಗಾಗಿ ಆರಂಭವಾದ ಈ ಪ್ರಯಾಣವು ಒಂದು ಸುಂದರ ಕೌಟುಂಬಿಕ ಮಿಲನಕ್ಕೆ ಸಾಕ್ಷಿಯಾಯಿತು.


