man hits friends pyre in Uttar Pradesh ಬಾಲ್ಯದ ಸ್ನೇಹಿತನಿಂದ 50 ಸಾವಿರ ರೂಪಾಯಿ ಸಾಲ ಪಡೆದ ವ್ಯಕ್ತಿಯೊಬ್ಬ, ಅದನ್ನು ಹಿಂತಿರುಗಿಸದೆ ಸಾವನ್ನಪ್ಪಿದ್ದಾನೆ. ಇದರಿಂದ ಕೋಪಗೊಂಡ ಸಾಲ ನೀಡಿದ ಸ್ನೇಹಿತ, ಮೃತನ ಅಂತ್ಯಕ್ರಿಯೆ ವೇಳೆ ಆತನ ಚಿತೆಗೆ ಬಡಿಗೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ನವದೆಹಲಿ (ಸೆ.27): ಬಾಲ್ಯದ ಗೆಳೆಯ ಅಂದುಕೊಂಡು ಕಷ್ಟಕಾಲದಲ್ಲಿ 50 ಸಾವಿರ ಹಣವನ್ನು ವ್ಯಕ್ತಿ ಸಾಲವಾಗಿ ನೀಡಿದ್ದ. ಅದೆಷ್ಟೇ ವರ್ಷವಾದರೂ ಈ ಹಣವನ್ನು ಗೆಳೆಯ ವಾಪಾಸ್‌ ನೀಡಲೇ ಇಲ್ಲ. ಕೊನೆಗೆ ಹಣ ವಾಪಾಸ್‌ ನೀಡದೇ ಬಾಲ್ಯದ ಗೆಳೆಯ ಸಾವು ಕಂಡಾಗ ಆತನ ಚಿತೆಗೆ ಸಿಟ್ಟಿನಲ್ಲಿ ಕೋಲಿನಿಂದ ಹೊಡೆದು ಆತನ ಸ್ನೇಹಿತ ಸಿಟ್ಟು ತೀರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಚಿಕ್ಕ ಹಳ್ಳಿಯಲ್ಲಿ ನಡೆದಿದೆ. ಚಿತೆಗೆ ಆತನ ಸ್ನೇಹಿತನೇ ಕೋಲನಿಂದ ಭಾರೀ ಪ್ರಮಾಣದಲ್ಲಿ ಹೊಡೆಯುತ್ತಿರುವುದನ್ನು ನೋಡಿ ಗ್ರಾಮಸ್ಥರು ಅಚ್ಚರಿ ಪಟ್ಟಿದ್ದಾರೆ. ಚಿತೆಯಲ್ಲಿ ಬಾಲ್ಯದ ಗೆಳೆಯ ಮೃತದೇಹ ಉರಿಯುತ್ತಿರುವಾಗಲೇ, ಸಾಲದ ಹಣವನ್ನು ವಾಪಾಸ್‌ ನೀಡದ ಸಿಟ್ಟಿನಲ್ಲಿ ಬಡಿಗೆಯಲ್ಲಿ ವ್ಯಕ್ತಿ ಹಿಗ್ಗಾಮುಗ್ಗಾ ಬಾರಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಗ್ರಾಮದ ಸ್ಮಶಾನದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೃತನ ಪತ್ನಿ ಮತ್ತು ಮಕ್ಕಳು ಚಿತೆಯ ಬಳಿ ನಿಂತಿದ್ದಾಗೇ ಈ ಘಟನೆ ನಡೆದಿದೆ. ಚಿತೆಯ ಬೆಂಕಿ ಏರುತ್ತಿದ್ದಾಗಲೇ ಆತನ ಆತ್ಮೀಯ ಸ್ನೇಹಿತ ತನ್ನ ಸಿಟ್ಟನ್ನು ತೋಡಿಕೊಂಡಿದ್ದಾನೆ ಎಂದು ದೃಶ್ಯಗಳು ತೋರಿಸಿವೆ. ಚಿತೆ ಉರಿಯುವಾಗ ಬಡಿಗೆಯೊಂದಿಗೆ ಅದರ ಸಮೀಪ ಬರುವ ಆತ, ಯಾರ ಹತ್ತಿರವೂ ನೋಡದೇ ಚಿತೆಗೆ ಹಿಗ್ಗಾಮುಗ್ಗಾ ಬಾರಿಸಲು ಆರಂಭಿಸಿದ್ದ.

50 ಸಾವಿರ ಸಾಲ ಪಡೆದಿದ್ದ ಸ್ನೇಹಿತ

ವರದಿಗಳ ಪ್ರಕಾರ, ಮೃತ ವ್ಯಕ್ತಿ ಆ ವ್ಯಕ್ತಿಯಿಂದ 50,000 ರೂ. ಸಾಲ ಪಡೆದಿದ್ದ. ಆದರೆ, ಸಾಲವನ್ನು ವಾಪಾಸ್‌ ನೀಡದೇ ಸಾವು ಕಂಡಿದ್ದ. ಇದರಿಂದ ಸಿಟ್ಟಾಗಿದ್ದ ವ್ಯಕ್ತಿ, ಆತನ ಚಿತೆಗೆ ಬಡಿಗೆಯಿಂದ ಸಾಕಷ್ಟು ಏಟು ಬಾರಿಸಿದ್ದಾನೆ. ಈ ವೇಳೆ ಚಿತೆಯ ಕಿಡಿಗಳು ಹಾರುತ್ತಿದ್ದರೆ, ಉರಿಯುತ್ತಿದ್ದ ಮರದ ತುಂಡುಗಳು ಚೆಲ್ಲಾಪಿಲ್ಲಿಯಾಗಿದ್ದವು. ಇದನ್ನು ಕಂಡು ಗ್ರಾಮಸ್ಥರು ಕೂಡ ಗಾಬರಿಗೊಂಡಿದ್ದಾರೆ. ಒಬ್ಬ ವ್ಯಕ್ತಿ ಈ ಕೃತ್ಯವನ್ನು ಸೆರೆಹಿಡಿದು ವಾಟ್ಸಾಪ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಇದು ಇನ್‌ಸ್ಟಾಗ್ರಾಮ್‌ ಹಾಗೂ ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆ ಗಳಿಸಿದೆ.

ಒಟ್ಟಿಗೆ ಕೃಷಿ ಮಾಡುತ್ತಿದ್ದ ಗೆಳೆಯರು

ಇಬ್ಬರು ವ್ಯಕ್ತಿಗಳು ಒಂದೇ ಹಳ್ಳಿಯವರಾಗಿದ್ದು ಬಾಲ್ಯದ ಸ್ನೇಹಿತರು ಎಂದು ಗ್ರಾಮಸ್ಥರು ಹೇಳಿದ್ದಾರೆ. ಇಬ್ಬರೂ ಒಟ್ಟಿಗೆ ಕೃಷಿ ಕೂಡ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ, ಸಾವು ಕಂಡಿರುವ ವ್ಯಕ್ತಿ ತನ್ನ ಬೆಳೆಯನ್ನು ಮಾರಿ ಸಾಲ ಮರುಪಾವತಿಸುವುದಾಗಿ ಭರವಸೆ ನೀಡಿ 50 ಸಾವಿರ ಹಣವನ್ನು ಸಾಲ ಪಡೆದಿದ್ದ.

ಆದರೆ, ಸಾಲಗಾರ ಅನಾರೋಗ್ಯದಿಂದ ಹಠಾತ್ ಸಾವನ್ನಪ್ಪಿದ್ದರಿಂದ ಸಾಲ ಮರುಪಾವತಿಯಾಗದೆ, ಸಾಲಗಾರನ ಕೋಪ ಇನ್ನಷ್ಟು ಹೆಚ್ಚಾಯಿತು. ಮೃತ ಸ್ನೇಿತ ಉದ್ದೇಶಪೂರ್ವಕವಾಗಿ ಹಣವನ್ನು ತಡೆಹಿಡಿದಿದ್ದಾರೆ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ. ಸಾಲವನ್ನು ಮರುಪಾವತಿಸುವಂತೆ ಈ ಹಿಂದೆ ತನ್ನ ಸ್ನೇಹಿತನ ಮೇಲೆ ಒತ್ತಡ ಹೇರಿದ್ದ ಎಂದು ಗ್ರಾಮಸ್ಥರು ಹೇಳಿದ್ದಾರೆ, ಆದರೆ ಅಂತ್ಯಕ್ರಿಯೆಯ ಸಮಯದಲ್ಲಿ ಇಷ್ಟೊಂದು ಹಿಂಸಾತ್ಮಕ ಕೃತ್ಯವನ್ನು ಯಾರೂ ನಿರೀಕ್ಷಿಸಿರಲಿಲ್ಲ.

View post on Instagram