ಮುಂಬೈನಲ್ಲಿ ಮಳೆಯಿಂದ ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಹಾಯಾಗಿ ಮಲಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಳೆ ಸ್ವಲ್ಪ ಬಂದರೆ ಚೆಂದ ತುಂಬಾ ಬಂದರೆ ಅನಾಹುತ, ಅದರಲ್ಲೂ ಮಹಾನಗರಗಳಲ್ಲಿ ಸಣ್ಣ ಮಳೆಯೂ ಅವಾಂತರ ಸೃಷ್ಟಿಸುತ್ತದೆ. ಚರಂಡಿಗಳು ಕಸಕಡ್ಡಿಗಳಿಂದ ತುಂಬಿ ಬಂದ್ ಆಗಿರುವುದರಿಂದ ಚರಂಡಿಯ ನೀರೆಲ್ಲಾ ರಸ್ತೆ ಮೇಲೆ ಹರಿದು ವಾಹನಗಳು ತೇಲಲು ಮುಳುಗಲು ಆರಂಭಿಸುತ್ತವೆ. ಹೀಗೆಯೇ ಮುಂಬೈನಲ್ಲಿ ಮಳೆಯಿಂದ ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಹಾಯಾಗಿ ಮಲಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ತುಂಬಾ ತುಂಬಿರುವ ಕೊಳಕು ನೀರಿನಲ್ಲಿ ಶರ್ಟ್ ಕೂಡ ಧರಿಸದ ವ್ಯಕ್ತಿಯೋರ್ವ ಹಾಯಾಗಿ ಮಲಗಿದ್ದಾನೆ. ಆತನ ಪಕ್ಕದಲ್ಲೇ ಬಸ್ (Bus) ಕಾರುಗಳು (Car) ಆತನ ಮೇಲೆ ನೀರು ರಟ್ಟಿಸಿಕೊಂಡು ಓಡಾಡುವುದು ಕಾಣಿಸುತ್ತದೆ. ಆದರೆ ಇದ್ಯಾವುದಕ್ಕೂ ಕೇರೇ ಎನ್ನದ ವ್ಯಕ್ತಿ ಹಾಯಾಗಿ ಮಲಗಿ ಪೋಸ್ ಕೊಟ್ಟಿದ್ದಾನೆ.ನಿಲ್ಲದ ಧಾರಾಕಾರ ಮಾನ್ಯೂನ್ ಮಳೆಯಿಂದಾಗಿ ಮುಂಬೈನಲ್ಲಿ ಜೂನ್ 9 ಅಂದರೆ ಇಂದಿನವರೆಗೆ ಆರೆಂಜ್ ಆಲರ್ಟ್ ಘೋಷಣೆ ಮಾಡಲಾಗಿದೆ. ಎಲ್ಲ ವರ್ಷಗಳಂತೆ ಈ ವರ್ಷವೂ ನಗರದ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಇದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಜೊತೆಗೆ ಉಬರ್(Uber) ಓಲಾ (Ola) ಮುಂತಾದ ಕ್ಯಾಬ್ ಆಪ್‌ಗಳಲ್ಲಿ ದರ ಗಗನಕ್ಕೇರಿತ್ತು. ಪರಿಣಾಮ ಮುಂಬೈ ಜನರ ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದ್ದರೆ, ಈ ವ್ಯಕ್ತಿ ಮಾತ್ರ ಜಗದ ಚಿಂತೆಯೆಲ್ಲವನ್ನು ಮರೆತು ಬೀಚ್‌ಗಳಲ್ಲಿ ವಿಶ್ರಮಿಸಿದಂತೆ ತುಂಬಿ ಹರಿಯುತ್ತಿರುವ ರಸ್ತೆಯಲ್ಲಿ ಮಲಗಿದ್ದ.
ಇದನ್ನು ಓದಿ: ಕಂಗಾಲಾಗಿರುವ ಕರ್ನಾಟಕದಲ್ಲಿ ಭಾರಿ ಮಳೆ ಮುನ್ಸೂಚನೆ, ಸುರಕ್ಷಿತ ಸ್ಥಳಕ್ಕೆ ತೆರಳಲು ಜನರಿಗೆ ಮನವಿ
ವಿಕ್ರಾಂತ್ ಜೋಷಿ ಎಂಬುವವರು ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ (FaceBook) ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋದಲ್ಲಿ ನೀರಿನಿಂದ ತುಂಬಿರುವ ರಸ್ತೆಯಲ್ಲಿ ವ್ಯಕ್ತಿ ಹಾಯಾಗಿ ಮಲಗಿರುವುದನ್ನು ಕಾಣಬಹುದು. ಮುಂದೆ ಸಾಗುವ ವಾಹನಗಳು ಈತನ ಮೇಲೆ ನೀರೆರಚಿಕೊಂಡು ಸಾಗುತ್ತಿದ್ದರೂ ಆತ ಕ್ಯಾರೇ ಅನ್ನುತ್ತಿಲ್ಲ. ಆದರೆ ಮುಂಬೈನ ಯಾವ ಪ್ರದೇಶವಿದು ಎಂಬುದು ಖಚಿತವಾಗಿಲ್ಲ.
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ವ್ಯಕ್ತಿ ಮಲದ್ ಅನ್ನು ಮಾಲ್ಡೀವ್ಸ್ ರೀತಿ ಭಾವಿಸುವಂತೆ ಮಾಡಿದ್ದಕ್ಕೆ ಬೃಹತ್ ಮುಂಬೈ ಮಹಾನಗರ ಪಾಲಿಕೆಗೆ ಧನ್ಯವಾದಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಏಳು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ ಬೃಹತ್ ಮುಂಬೈ ಮಹಾನಗರ (BMC) ಪಾಲಿಕೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನು ಓದಿ: ಮಲೆನಾಡಲ್ಲಿ ವ್ಯಾಪಕ ಮಳೆ: ಟಿಬಿ ಡ್ಯಾಂಗೆ ಒಂದೇ ದಿನ 5 ಟಿಎಂಸಿ ನೀರು..!
ಮುಂಬೈನ ಪ್ರತ್ಯೇಕ ಸ್ಥಳಗಳಲ್ಲಿ ಅಧಿಕದಿಂದ ಅತೀ ಅಧಿಕ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಗುರುವಾರ ತಿಳಿಸಿತ್ತು. ಮುಂಬೈ ನಗರ ಮತ್ತು ಅದರ ಉಪನಗರಗಳು ಭಾರೀ ಮಳೆಗೆ ತತ್ತರಿಸಿದ್ದು, ಗಂಟೆಗೆ 40 ರಿಂದ 50 ಕಿಮೀ ವರೆಗೆ ಬಲವಾದ ಗಾಳಿಯು ಬೀಸುವ ಸಾಧ್ಯತೆಯಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಸಂಭವಿಸಿದ ಹಾನಿ ಮತ್ತು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆಯುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳ ಜತೆ ಶುಕ್ರವಾರ (ಇಂದು) ವಿಡಿಯೋ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಸಂವಾದ ನಡೆಯಲಿದೆ. ಮಳೆಯಿಂದ ಹಾನಿಗೊಳಗಾಗಿರುವ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿಇಒಗಳು, ಸಂಬಂಧಪಟ್ಟಸಚಿವರು, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಇತರೆ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.