ಮಲೆನಾಡಲ್ಲಿ ವ್ಯಾಪಕ ಮಳೆ: ಟಿಬಿ ಡ್ಯಾಂಗೆ ಒಂದೇ ದಿನ 5 ಟಿಎಂಸಿ ನೀರು..!
* ಭಾರೀ ಮಳೆಯಾಗುತ್ತಿರುವ ಒಳಹರಿವು ಭಾರಿ ಹೆಚ್ಚಳ
* ಇದು ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಹರಿದುಬಂದ ಅತ್ಯಧಿಕ ಪ್ರಮಾಣದ ನೀರು
* ನೀರಿನ ಶೇಕರಣಾ ಮಟ್ಟ 105 ಟಿಎಂಸಿಗಳಿದ್ದು, ಈಗ ಜಲಾಶಯ ಅರ್ಧದಷ್ಟು ಭರ್ತಿ
ಮುನಿರಾಬಾದ್(ಜು.07): ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಭದ್ರಾ ಜಲಾಶಯಕ್ಕೆ ಬುಧವಾರ ಸುಮಾರು 5 ಟಿಎಂಸಿ(60 ಸಾವಿರಕ್ಕೂ ಅಧಿಕ ಕ್ಯು.) ಎಷ್ಟು ನೀರು ಬಂದಿದೆ.
ಇದು ಜುಲೈ ತಿಂಗಳಲ್ಲಿ ಜಲಾಶಯಕ್ಕೆ ಹರಿದುಬಂದ ಅತ್ಯಧಿಕ ಪ್ರಮಾಣದ ನೀರಾಗಿದೆ. ಬುಧವಾರ ಬೆಳಗ್ಗೆ ಜಲಾಶಯಕ್ಕೆ 34075 ಕ್ಯುಸೆಕ್ ನೀರು ಹರಿದುಬಂದಿತ್ತು. ಆದರೆ ಕ್ರಮೇಣವಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸಂಜೆ 5 ಗಂಟೆಗೆ ಜಲಾಶಯಕ್ಕೆ ಸುಮಾರು 60,000 ಕ್ಯುಸೆಕ್ ನೀರು ಹರಿದುಬಂದಿದೆ.
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ 34,374 ಕ್ಯುಸೆಕ್ ನೀರು
ಬುಧವಾರ ಜಲಾಶಯದ ನೀರಿನ ಮಟ್ಟ 1619 ಅಡಿಗೆ ತಲುಪಿದ್ದು, 55 ಟಿಎಂಸಿ ಅಷ್ಟು ನೀರು ಶೇಖರಣೆಯಾಗಿದೆ. ನೀರಿನ ಶೇಕರಣಾ ಮಟ್ಟ 105 ಟಿಎಂಸಿಗಳಿದ್ದು, ಈಗ ಜಲಾಶಯ ಅರ್ಧದಷ್ಟು ಭರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇದೇ ರೀತಿಯಲ್ಲಿ ಇದ್ದರೆ ತುಂಗಭದ್ರಾ ಜಲಾಶಯ ಒಂದು ವಾರದಲ್ಲಿ ಭರ್ತಿಯಾಗಲಿದೆ ಎಂದು ತುಂಗಭದ್ರಾ ಮಂಡಳಿ ಮೂಲಗಳಿಂದ ‘ಕನ್ನಡಪ್ರಭ’ಕ್ಕೆ ಮಾಹಿತಿ ಲಭ್ಯವಾಗಿದೆ.
ಕಳೆದ ವರ್ಷ ಇದೇ ದಿನದಂದು ಜಲಾಶಯದಲ್ಲಿ 1609 ಅಡಿ ನೀರು ಇತ್ತು ಹಾಗೂ ಜಲಾಶಯದ ಒಳಹರಿವು ಕೇವಲ 2083 ಕ್ಯುಸೆಕ್ ಇತ್ತು ಹಾಗೂ 34 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 21 ಟಿಎಂಸಿ ಎಷ್ಟು ಅಧಿಕ ನೀರು ಸಂಗ್ರಹವಾಗಿದೆ. ಇದು ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಸಂತಸ ಮೂಡಿಸಿದೆ.