ಹೀಗೆ ಹೊಸದಾಗಿ ಸಿಮ್ ಖರೀದಿಸುವವರಿಗೆ ಅವರ ನೆಚ್ಚಿನ ಕ್ರಿಕೆಟಿಗರೋ ಅಥವಾ ಸಿನಿಮಾ ತಾರೆಯರ ಹಳೆಯ ನಂಬರೋ ಸಿಕ್ಕಿದರೆ ಹೇಗಿರುತ್ತದೆ. ಬಹಳ ಮಜವಾಗಿರುತ್ತದೆ ನೋಡಿ. ಅದಕ್ಕೊಂದು ಉದಾಹರಣೆ ಈ ಘಟನೆ.
ಕೆಲವರು ತಮ್ಮ ಫೋನ್ ನಂಬರ್‌ಗಳನ್ನು ಆಗಾಗ ಬದಲಾಯಿಸುತ್ತಾರೆ. ಕೆಲವರು ದೀರ್ಘಕಾಲ ಒಂದೇ ರೀತಿಯ ಫೋನ್ ನಂಬರ್ ಬಳಸುತ್ತಾರೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ದೂರವಾಣಿ ಸಂಖ್ಯೆಗಳನ್ನು ಬದಲಾಯಿಸುವುದು ಸಾಮಾನ್ಯ. ಇದರ ಜೊತೆಗೆ ಕೆಲವೊಮ್ಮೆ ಒಂದು ಫೋನ್ ನಂಬರ್ ಅನ್ನು ಬಹಳ ಕಾಲ ಬಳಸದೇ ಇದ್ದಾಗ ಆ ನಂಬರ್ ತನ್ನಿಂತಾನೇ ನಿಷ್ಕ್ರಿಯವಾಗಿ ಹೋಗುತ್ತದೆ. ಹಾಗೂ ಕೆಲವೊಮ್ಮೆ ಆ ನಿಷ್ಕ್ರಿಯಗೊಂಡ ನಂಬರ್‌ಗಳನ್ನು ಟೆಲಿಕಾಂ ಸಂಸ್ಥೆಗಳು ತನ್ನ ಬೇರೆ ಗ್ರಾಹಕರಿಗೆ ನೀಡುತ್ತದೆ. ಆದರೆ ಆ ಸಿಮ್‌ನ ಹಳೆ ಗ್ರಾಹಕರ ಪರಿಚಯಸ್ಥರಲ್ಲಿ ಅದೇ ಹಳೆಯ ನಂಬರ್ ಸೇವಾಗಿರುತ್ತದೆ. ಅವರು ತಮ್ಮ ಪರಿಚಯಸ್ಥ ಎಂದು ಅದೇ ನಂಬರ್‌ಗೆ ಕರೆ ಮಾಡಿ ನಂತರ ಸಿಮ್ ಬೇರೆಯವರ ಪಾಲಾಗಿರುವ ವಿಚಾರ ತಿಳಿದು ಸುಮ್ಮನಾಗುತ್ತಾರೆ.
ಹೀಗೆ ಹೊಸದಾಗಿ ಸಿಮ್ ಖರೀದಿಸುವವರಿಗೆ ಅವರ ನೆಚ್ಚಿನ ಕ್ರಿಕೆಟಿಗರೋ ಅಥವಾ ಸಿನಿಮಾ ತಾರೆಯರ ಹಳೆಯ ನಂಬರೋ ಸಿಕ್ಕಿದರೆ ಹೇಗಿರುತ್ತದೆ. ಬಹಳ ಮಜವಾಗಿರುತ್ತದೆ ನೋಡಿ. ಅದೇ ರೀತಿ ಇಲ್ಲೊಂದು ಕಡೆ ಹೊಸದಾಗಿ ಸಿಮ್ ಖರೀದಿಸಿದ ಯುವಕನಿಗೆ ಖ್ಯಾತ ಕ್ರಿಕೆಟಿಗನ ಹಳೆಯ ಮೊಬೈಲ್ ಫೋನ್ ನಂಬರ್ ಸಿಕ್ಕಿದ್ದು, ಆತನಿಗೆ ಕ್ರಿಕೆಟರ್ ವಿರಾಟ್ ಕೊಹ್ಲಿ, ಎಬಿಡಿಯಿಂದ ಕರೆಗಳು ಬಂದಿವೆಯಂತೆ ಇಂತಹ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಹೌದು ಆರ್‌ಸಿಬಿ ತಂಡದ ಕ್ಯಾಪ್ಟನ್ ರಜತ್ ಪಟೇದಾರ್ ಅವರ ಹಳೆಯ ಫೋನ್ ನಂಬರೊಂದು ಛತ್ತೀಸ್‌ಗಢದ ಯುವ ತರುಣನಿಗೆ ಸಿಕ್ಕಿದ್ದು, ಆತನಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಎಬಿಡಿ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ರಜತ್ ಪಾಟಿದಾರ್ ಹಳೆ ನಂಬರ್ ಪಡೆದ ಛತ್ತೀಸಗಢದ ಮನೀಷ್
ರಜತ್ ಪಾಟೇದಾರ್ ಅವರ ಹಳೆಯ ದೂರವಾಣಿ ಸಂಖ್ಯೆ ಕಳೆದ 90 ದಿನಗಳಿಂದ ಬಳಕೆಯಲ್ಲಿ ಇರಲಿಲ್ಲ, ಹೀಗಾಗಿ ಟೆಲಿಕಾಂ ಸಂಸ್ಥೆಯವರು ಈ ಸಂಖ್ಯೆ ನಿಷ್ಕ್ರಿಯಗೊಂಡಿದೆ ಎಂದು ತಿಳಿದು ಅದನ್ನು ಬೇರೆಯವರಿಗೆ ನೀಡಿದ್ದರು. ಈ ಸಂಖ್ಯೆಯನ್ನು ಛತ್ತೀಸ್‌ಗಢದ ಗರಿಯಾಬಾದ್‌ನ ನಿವಾಸಿಯಾದ ಮನೀಶ್ ಎಂಬ ಯುವ ತರುಣನಿಗೆ ಸಿಕ್ಕಿದ್ದು, ಇದನ್ನು ಅವರು ಜಿಯೋ ಸಿಮ್ ಮೂಲಕ ಜೂನ್ ತಿಂಗಳಲ್ಲಿ ಅಕ್ಟಿವ್ ಮಾಡಿಕೊಂಡಿದ್ದರು.
ವಿರಾಟ್ ಕೊಹ್ಲಿ, ಎಬಿಡಿಯಿಂದ ಮನೀಶ್‌ಗೆ ಕರೆ
ಆ ಸಂಖ್ಯೆಯನ್ನು ಸಕ್ರಿಯಗೊಳಿಸಿದ ನಂತರ, ಮನೀಶ್ ಮತ್ತು ಅವರ ಸ್ನೇಹಿತ ಖೇಮರಾಜ್ ಈ ನಂಬರ್‌ನ ವಾಟ್ಸಾಪ್ ಪ್ರೊಫೈಲ್‌ನಲ್ಲಿ ರಜತ್ ಪಾಟಿದಾರ್ ಅವರ ಫೋಟೋ ಇನ್ನೂ ಇರುವುದನ್ನು ಗಮನಿಸಿದ್ದರು. ಬರೀ ಇಷ್ಟೇ ಅಲ್ಲ, ಇನ್ನು ವಿಶೇಷ ಎಂದರೆ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಸೇರಿದಂತೆ ಪ್ರಸಿದ್ಧ ಕ್ರಿಕೆಟಿಗರಿಂದ ಅವರಿಗೆ ಕರೆಗಳು ಬಂದವು, ಅವರು ರಜತ್ ಪಾಟಿದಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು.
ನಾನು ರಜತ್ ಪಾಟಿದಾರ್ ಎಂದರೆ ನಾನು ಧೋನಿ ಎಂದ ಮನೀಶ್..!
ಆದರೆ ಆ ನಂಬರ್‌ನ ಹಿಂದಿನ ಮಾಲೀಕರ ಬಗ್ಗೆ ತಿಳಿಯದ ಈ ಹುಡುಗರು ಆಶ್ಚರ್ಯಗೊಂಡಿದ್ದರು. ನಂತರ, ಪಾಟಿದಾರ್ ಅವರು ಮನೀಶ್ ಅವರನ್ನು ನೇರವಾಗಿ ಸಂಪರ್ಕಿಸಿ ಈ ಸಂಖ್ಯೆಯನ್ನು ತನಗೆ ಮರಳಿ ನೀಡುವಂತೆ ಕೇಳಿದ್ದಾರೆ. ತರಬೇತುದಾರರು, ತಂಡದ ಸದಸ್ಯರು ಮತ್ತು ಬಹುತೇಕರ ಸಂಪರ್ಕಕ್ಕೆ ಈ ಸಂಖ್ಯೆ ತನಗೆ ಬಹಳ ಮುಖ್ಯ ಎಂದು ಹುಡುಗರಿಗೆ ಪಾಟೀದಾರ್ ಅವರು ಹೇಳಿದರು. ಆದರೂ, ಮನೀಶ್ ಮತ್ತು ಖೇಮರಾಜ್ ಅವರಿಗೆ ಮಾತ್ರ ಇದು ನಿಜವಾಗಿಯೂ ಪಾಟಿದಾರ್ ಎಂದು ನಂಬಲಾಗಲಿಲ್ಲ. ಹೀಗಾಗಿ ಅತ್ತ ಕಡೆ ನಾನು ರಜತ್ ಪಾಟಿದಾರ್ ಎಂದರೆ ಇವರು, ಇವರನ್ಯಾರೋ ಮಂಗ ಮಾಡ್ತಿದ್ದಾರೆ ಎಂದು ಭಾವಿಸಿ ತಾನು ಎಂಎಸ್ ಧೋನಿ ಎಂದು ಹೇಳಿ ಉತ್ತರಿಸಿದಲ್ಲದೇ ರಜತ್ ಪಾಟಿದಾರ್ ವಿನಂತಿಯನ್ನು ನಿರಾಕರಿಸಿದ್ದಾರೆ. ನಂತರ ಪಾಟಿದಾರ್ ಈ ಹುಡುಗರಿಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪೊಲೀಸರ ಮೊರೆ ಹೋದ ರಜತ್ ಪಾಟಿದಾರ್
ಇದಾದ ಹತ್ತು ನಿಮಿಷಗಳಲ್ಲಿ, ಸ್ಥಳೀಯ ಪೊಲೀಸರು ಮನೀಶ್ ಮನೆಗೆ ಬಂದಿದ್ದು, ನಂತರ ಹುಡುಗರು ಸಿಮ್ ಕಾರ್ಡ್ ಅನ್ನು ಹಿಂತಿರುಗಿಸಿದ್ದಾರೆ. ಖೇಮರಾಜ್ ಈ ಅನುಭವವನ್ನು ತಾವೆಂದು ಮರೆಯಲಾಗದು ಎಂದು ಹೇಳಿದ್ದಾರೆ. ತಪ್ಪು ಸಂಖ್ಯೆಯ ಕಾರಣದಿಂದಾಗಿ ನಾನು ಕೊಹ್ಲಿಯೊಂದಿಗೆ ಮಾತನಾಡುವಂತಾಯ್ತು. ನನ್ನ ಜೀವನದ ಗುರಿ ಪೂರ್ಣಗೊಂಡಿದೆ ಎಂದು ಖೇಮರಾಜ್ ಹೇಳಿದ್ದಾರೆ.
ಈ ಘಟನೆ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು ಹಲವರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಹೊಸ ಸಿಮ್ ಖರೀದಿಸಿದ ನಂತರ ವಿರಾಟ್ ಮತ್ತು ಎಬಿಡಿಯಿಂದ ಕರೆಗಳು ಬರುವುದನ್ನು ಕಲ್ಪಿಸಿಕೊಳ್ಳಿ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇದೆಂತಹ ವಿಚಿತ್ರ ತಿರುವು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.ಪಾಟೀದಾರ್ ಅವರ ದೂರಿನ ನಂತರ ಆ ವ್ಯಕ್ತಿ ಸರಿಯಾದ ಕೆಲಸವನ್ನು ಮಾಡಿ ಅದನ್ನು ಹಿಂತಿರುಗಿಸಿದ್ದಕ್ಕೆ ಸಂತೋಷವಾಗಿದೆ. ಇದು ನಿಜವಾಗಿಯೂ ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಗೊಂದಲ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
