ಚಲಿಸುತ್ತಿದ್ದ ಕಾರಿನ ಮೇಲೆ ಪಟಾಕಿ ಹಾರಿಸುತ್ತಿದ್ದವನ ಬಂಧನ: ವಿಡಿಯೋ ವೈರಲ್
ಕಿಡಿಗೇಡಿಗಳು ಯಾರೋ ಕಾರಿನ ಹಿಂಭಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಇಟ್ಟಿದ್ದು, ನಂತರ ಕಾರನ್ನು ಜನನಿಬಿಡ ರಸ್ತೆಯಲ್ಲಿ ಚಲಾಯಿಸಿದ್ದಾರೆ. ಇದರ ವಿಡಿಯೋ ಈಗ ವೈರಲ್ ಆಗಿದೆ.
ನವದೆಹಲಿ: ದೀಪಾವಳಿ ಮುಗಿದಿದೆ. ಆದರೆ ಪಟಾಕಿ ಸದ್ದು, ಪಟಾಕಿಯೊಂದಿಗೆ ಕಿಡಿಗೇಡಿಗಳ ಕಿತಾಪತಿ ಇನ್ನು ಮುಗಿದಿಲ್ಲ. ಪಟಾಕಿ ಎಷ್ಟು ಮಜಾವೋ ಅಷ್ಟೇ ಅಪಾಯಕಾರಿ, ವಾಹನಗಳಿರುವ ಸ್ಥಳಗಳಲ್ಲಿ ಪೆಟ್ರೋಲ್ ಡಿಸೇಲ್ ಬಂಕ್‌ಗಳಿರುವ ಜಾಗಗಳಲ್ಲಿ, ತೈಲೋತ್ಪನ್ನಗಳಿರುವ ಜಾಗ ಸೇರಿದಂತೆ ವೇಗವಾಗಿ ಬೆಂಕಿ ತಗುಲಿಕೊಳ್ಳಬಲ್ಲ ಸ್ಥಳಗಳಲ್ಲಿ ಪಟಾಕಿ ಹೊಡೆಯುವುದಕ್ಕೆ ನಿಷೇಧವಿದೆ. ಹೀಗಿರುವಾಗಿ ಕಿಡಿಗೇಡಿಗಳು ಯಾರೋ ಕಾರಿನ ಹಿಂಭಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಇಟ್ಟಿದ್ದು, ನಂತರ ಕಾರನ್ನು ಜನನಿಬಿಡ ರಸ್ತೆಯಲ್ಲಿ ಚಲಾಯಿಸಿದ್ದಾರೆ. ಈ ಕಾರಿನ ಹಿಂದೆಯೇ ಸಾಕಷ್ಟು ವಾಹನಗಳು ಬರುತ್ತಿದ್ದು, ಭಯಗೊಂಡ ಆ ವಾಹನಗಳ ಸಿಬ್ಬಂದಿ ತಮ್ಮ ವಾಹನವನ್ನು ಪಟಾಕಿ ಸಿಡಿಯುವ ಕಾರಿಗಿಂತ ತುಸು ಹೆಚ್ಚು ಅಂತರದಲ್ಲಿ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾರಿನ ಹಿಂದೆ ಪಟಾಕಿ ಕಟ್ಟಿ ಹಾರಿಸುತ್ತಿರುವ ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗುರುಗ್ರಾಮ್(Gurugram) ಸೈಬರ್ ಹಬ್ (Cyberhub) ಸಮೀಪ ಜನನಿಬಿಡ ಪ್ರದೇಶದ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಕಾರಿನ ಹಿಂಭಾಗದ ಮೇಲಿನ ಜಾಗದಲ್ಲಿ ಪಟಾಕಿ ಇರಿಸಿ ಬೆಂಕಿ ಕೊಟ್ಟು ರಸ್ತೆಯುದ್ದಕ್ಕೂ ಚಾಲಕ ಕಾರು ಓಡಿಸಿದ್ದು, ಕಾರು ರಸ್ತೆಯಲ್ಲಿ ಸಾಗುತ್ತಿರಬೇಕಾದರೆ ಒಂದೊಂದೇ ಪಟಾಕಿ ಆ ಕಾರಿನ ಮೇಲಿನಿಂದ ಸಿಡಿದು ಮೇಲೆ ಹಾರುತ್ತಿದ್ದವು. ಡಿಎಲ್‌ಎಫ್ ಹಂತ ಮೂರರತ್ತ ಸಂಚರಿಸುತ್ತಿದ್ದ ಕಪ್ಪು ಬಣ್ಣದ ಕಾರಿನ (Car Boot) ಹಿಂಭಾಗದಲ್ಲಿ ಇನ್ನು ಹಲವು ಕಾರುಗಳು ಬರುತ್ತಿದ್ದು, ಅವುಗಳ ಚಾಲಕರು ಕಾರಿನ ಮೇಲೆ ಪಟಾಕಿ ಹೊಡೆಯುವುದನ್ನು ನೋಡಿ ಆತಂಕಗೊಂಡು, ಆ ಕಾರಿನಿಂದ ಅಂತರ ಕಾಯ್ದುಕೊಂಡು ವಾಹನ ಚಲಾಯಿಸುತ್ತಿದ್ದರು. ಪಟಾಕಿ ಸಿಡಿಯುತ್ತಿದ್ದ ಕಾರಿನ ಹಿಂದೆ ಇದ್ದ ವಾಹನ ಸವಾರರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ(Social Media) ಹಾಕಿಕೊಂಡಿದ್ದು, ವೈರಲ್ ಆಗಿದೆ.
ಈ ವಿಡಿಯೋ ಹಾಗೂ ಆ ಸ್ಥಳದಲ್ಲಿ ಇರಿಸಿದ ಸಿಸಿಟಿವಿ ವಿಡಿಯೋ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಈ ಪಟಾಕಿ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆ ಕಾರಿನ ಚಾಲಕನನ್ನು ಗುರುತಿಸಿ ಕಸ್ಟಡಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ವೇಳೆ ಕಾರು ಚಾಲಕ ತಾನು ಈ ಕಾರನ್ನು ಇತ್ತೀಚೆಗಷ್ಟೇ ಬೇರೆಯವರಿಗೆ ಮಾರಿದ್ದಾಗಿ ಅವಲೊತ್ತುಕೊಂಡಿದ್ದಾನೆ.
ದೀಪಾವಳಿಗೆ ಪಟಾಕಿ ಹಚ್ಚಿದ್ರೆ ಕೇಜ್ರಿವಾಲ್‌ಗೆ ಉರಿ: ಆಪ್ ವಿರುದ್ಧ ಬಿಜೆಪಿ ನಾಯಕರ ಕಿಡಿ!
ವಾಯು ಮಾಲಿನ್ಯದ ಕಾರಣಕ್ಕೆ ಹರಿಯಾಣ ಹಾಗೂ ದೆಹಲಿ ಸರ್ಕಾರ ಪಟಾಕಿ ಹಾರಾಟಕ್ಕೆ ನಿಷೇಧ ಹೇರಿತ್ತು. ಆದಾಗ್ಯೂ ಜನ ಆ ಸ್ಥಳಗಳಲ್ಲಿ ಪಟಾಕಿ ಹಾರಿಸುವುದನ್ನೇನು ನಿಲ್ಲಿಸಿರಲಿಲ್ಲ. ಈ ಮಧ್ಯೆ ಹೀಗೆ ರಸ್ತೆಯಲ್ಲಿ ಚಲಿಸುತ್ತಿರುವ ವಾಹನದಲ್ಲಿ ಪಟಾಕಿ ಹಾರಿಸಿ ತನ್ನೊಂದಿಗೂ ಇತರರ ಜೀವವನ್ನು ಅಪಾಯಕ್ಕೆ ತಳ್ಳಿದವನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಚಲಿಸುತ್ತಿದ್ದ ಕಾರಿನಲ್ಲಿ ದೀಪಾವಳಿ ಪಟಾಕಿ; ಮಾಲೀಕನ ವಿರುದ್ಧ ಕೇಸ್!