ಮೋದಿ, ಗೌರ್ನರನ್ನೇ ಕಾಯಿಸಿದ ದೀದಿ: ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ!
* ಅರ್ಧ ತಾಸು ತಡವಾಗಿ ಬಂದು ಅರ್ಧಕ್ಕೇ ನಿರ್ಗಮನ: ವಿವಾದ
* ಮೋದಿ, ಗೌರ್ನರನ್ನೇ ಕಾಯಿಸಿದ ದೀದಿ
* ಬಂಗಾಳಕ್ಕೆ ಹೋದ ಪ್ರಧಾನಿಗೆ ಅವಮಾನ: ಬಿಜೆಪಿಗರ ಆಕ್ರೋಶ
ಕೋಲ್ಕತಾ/ನವದೆಹಲಿ(ಮೇ.29): ಯಾಸ್ ಚಂಡಮಾರುತದಿಂದ ಉಂಟಾದ ಸಮಸ್ಯೆಯ ಅಧ್ಯಯನಕ್ಕೆ ದೆಹಲಿಯಿಂದ ಬಂದು ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅರ್ಧ ತಾಸು ಕಾಯಿಸಿದ ಘಟನೆ ಶುಕ್ರವಾರ ನಡೆದಿದೆ. ಅಷ್ಟುಮಾತ್ರವಲ್ಲದೆ ಸಭೆಯಲ್ಲಿ ಪೂರ್ತಿಯಾಗಿ ಭಾಗಿಯಾಗದೆ ಅರ್ಧಕ್ಕೆ ಎದ್ದು ಹೋಗುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
ಮಮತಾ ಅವರ ಈ ನಡೆಯನ್ನು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಇದು ಸಾಂವಿಧಾನಿಕ ಮೌಲ್ಯಗಳ ಹತ್ಯೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣಿಸಿದ್ದರೆ, ಸಾರ್ವಜನಿಕರ ಹಿತಾಸಕ್ತಿಗಿಂತ ದುರಂಹಕಾರವನ್ನೇ ಮುಂದೆ ಮಾಡಿದ್ದಕ್ಕೆ ಸಾಕ್ಷಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ.
ಯಾಸ್ ಚಂಡಮಾರುತ; 1,000 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಪ್ರಧಾನಿ ಮೋದಿ!
ಸಭೆಗೆ ಅರ್ಧ ಗಂಟೆ ವಿಳಂಬ:
ಚಂಡಮಾರುತ ಪರಿಸ್ಥಿತಿಯ ಪರಿಶೀಲನೆಗಾಗಿ ಕೋಲ್ಕತಾಕ್ಕೆ ಆಗಮಿಸಿದ್ದ ಮೋದಿ ಸಭೆ ಆಯೋಜಿಸಿದ್ದರು. ಇದರಲ್ಲಿ ಕೇಂದ್ರದ ಅಧಿಕಾರಿಗಳು, ಬಂಗಾಳದ ರಾಜ್ಯಪಾಲ ಜಗದೀಪ್ ಧನಖಡ್ ಭಾಗಿಯಾಗಿದ್ದರು. ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಾ ಸಭೆಯಲ್ಲಿ ಭಾಗಿಯಾಗಬೇಕಿತ್ತು.
ಆದರೆ ಇತ್ತೀಚಿನ ಚುನಾವಣಾ ಸಮಯದ ದ್ವೇಷವನ್ನು ಮುಂದುವರೆಸುವಂತೆ ಕಂಡ ಮಮತಾ, ಮೋದಿಯನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೂ ತೆರಳಲಿಲ್ಲ. ಬಳಿಕ ಸಭೆಗೂ 30 ನಿಮಿಷ ವಿಳಂಬವಾಗಿ ಆಗಮಿಸಿದರು. ಹೀಗಾಗಿ ಮೋದಿ ಮತ್ತು ಧನಖಡ್ ಕಾಯುವಂತೆ ಆಯಿತು. ಬಳಿಕ ದೀದಿ ಆಗಮಿಸಿದರಾದರೂ, ಕೇವಲ 15 ನಿಮಿಷವಷ್ಟೇ ಸಭೆಯಲ್ಲಿ ಕುಳಿತು, ಚಂಡಮಾರುತದಿಂದ ರಾಜ್ಯದಲ್ಲಿ ಆಗಿರುವ ಹಾನಿಯ ವರದಿ ಮತ್ತು 20000 ಕೋಟಿ ರು. ನೆರವು ನೀಡುವಂತೆ ಬೇಡಿಕೆ ಸಲ್ಲಿಸಿ, ಅಧಿಕಾರಿಗಳ ಜೊತೆ ಸಭೆಯಿಂದ ನಿರ್ಗಮಿಸಿದರು. ಆದರೆ ಸ್ವತಃ ಪ್ರಧಾನಿ, ರಾಜ್ಯಪಾಲರು ಭಾಗಿಯಾಗಿರುವ ಸಭೆಯಿಂದ ಹೀಗೆ ಮುಖ್ಯಮಂತ್ರಿ ಹೊರನಡೆದಿದ್ದು ತೀವ್ರ ಟೀಕೆಗೆ ಗುರಿಯಾಗಿದೆ.
ಯಾಸ್ ಚಂಡಮಾರುತ, ಯಾಕಪ್ಪಾ ಹೊರಗೆ ಬಂದೆ ಅಂತ ಕೇಳಿದ ರಿಪೋರ್ಟರ್..! ಈತ ಕೊಟ್ಟ ಆನ್ಸರ್ ವೈರಲ್
ಬಿಜೆಪಿ ಕೆಂಡಾಮಂಡಲ:
ರಾಜ್ಯದ ಸಮಸ್ಯೆ ಆಲಿಸಲು ಬಂದಿದ್ದ ಪ್ರಧಾನಿ ಜೊತೆಗಿನ ಮಮತಾ ವರ್ತನೆ ಅತ್ಯಂತ ನೋವಿನ ಸಂಗತಿ. ಸಾಂವಿಧಾನಿಕ ಕರ್ತವ್ಯ, ಸಾರ್ವಜನಿಕ ಸೇವೆಗಿಂತ, ರಾಜಕೀಯ ಭಿನ್ನಾಭಿಪ್ರಾಯಕ್ಕೇ ಹೆಚ್ಚಿನ ಮಹತ್ವ ನೀಡಿದ್ದಕ್ಕೆ ಒಂದು ಉದಾಹರಣೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೂಲ ಸ್ಪೂರ್ತಿಗೆ ಧಕ್ಕೆ ತರುವಂಥದ್ದು ಎಂದು ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಟೀಕಿಸಿದ್ದಾರೆ. ಇನ್ನು ಇದು ಭಾರತದ ಸಂಪದ್ಭರಿತ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುಡುಗಿದ್ದಾರೆ.