* 2024ರ ಚುನಾವಣೆಗೆ ಈಗಿಂದಲೇ ತಯಾರಿ* ಬಿಜೆಪಿ ವಿರುದ್ಧ ಒಗ್ಗಟ್ಟಿಗೆ ದೀದಿ, ಸ್ಟಾಲಿನ್‌ ಕರೆ

ಕೋಲ್ಕತಾ/ಚೆನ್ನೈ(ಫೆ.03): 2024ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ವಿಪಕ್ಷಗಳ ರಂಗ ರಚನೆಗೆ ತಯಾರಿ ಆರಂಭವಾಗಿದೆ. ಬಿಜೆಪಿ ವಿರುದ್ಧ ವಿಪಕ್ಷಗಳು ಒಗ್ಗಟ್ಟಾಗಬೇಕು ಎಂದು ಬುಧವಾರ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹಾಗೂ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್‌ ಅವರು ಪ್ರತಿಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಟಿಎಂಸಿ ಅಧ್ಯಕ್ಷೆಯಾಗಿ ಪುನರಾಯ್ಕೆಯಾದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, 2024 ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷ, ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು.

37 ವಿಪಕ್ಷಗಳಿಗೆ ಪತ್ರ ಬರೆದಿರುವ ಸ್ಟಾಲಿನ್‌, ದೇಶದಲ್ಲಿ ಬಹುಸಂಸ್ಕೃತಿ ಹಾಗೂ ಕೋಮುಸಾಮರಸ್ಯಕ್ಕೆ ಧಕ್ಕೆ ಇದೆ. ತುಳಿತಕ್ಕೆ ಒಳಗಾದವರ ಪರವಾಗಿ ಎಲ್ಲ ವಿಪಕ್ಷಗಳೂ ಒಂದಾಗಬೇಕು ಎಂದು ಕಾಂಗ್ರೆಸ್‌, ವೈರಿ ಪಕ್ಷ ಎಐಎಡಿಎಂಕೆ, ಆರ್‌ಜೆಡಿ ಹಾಗೂ ಎಡರಂಗ ಸೇರಿ 37 ಪಕ್ಷಗಳಿಗೆ ಮನವಿ ಮಾಡಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ರಾವ್‌ ಕೂಡ ಬಿಜೆಪಿ ವಿರೋಧಿಗಳಾದ ಶಿವಸೇನೆ ಸೇರಿ ಹಲವು ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ.