ದೀದಿ ರಾಜ್ಯದಲ್ಲಿ ಮುಕ್ತವಾಯ್ತು ಕಾಂಗ್ರೆಸ್: 'ಕೈ' ಏಕೈಕ ಶಾಸಕ ಟಿಎಂಸಿಗೆ ಸೇರ್ಪಡೆ
ಬೈರೊನ್ ಬಿಸ್ವಾಸ್ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದು, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಟಿಎಂಸಿ ಎದುರಾಳಿ ದೇಬಾಶಿಶ್ ಬ್ಯಾನರ್ಜಿ ಅವರ ವಿರುದ್ಧ 22 ಸಾವಿರ ಮತಗಳ ಅಂತದಲ್ಲಿ ಜಯಗಳಿಸಿದ್ದರು. ಈಗ ಅವರೂ ಸಹ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಕೋಲ್ಕತಾ (ಮೇ 30, 2023): ಪಶ್ಚಿಮ ಬಂಗಾಳದ ಏಕೈಕ ಕಾಂಗ್ರೆಸ್ ಶಾಸಕ ಬೈರೊನ್ ಬಿಸ್ವಾಸ್ ಅವರು ಸೋಮವಾರ ಕಾಂಗ್ರೆಸ್ ತೊರೆದು ಆಡಳಿತಾರೂಢ ಟಿಎಂಸಿ ಸೇರಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಕ್ತ ಬಂಗಾಳ ಮಾಡಿದ್ದಾರೆ.
ಬೈರೊನ್ ಬಿಸ್ವಾಸ್ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದು, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಟಿಎಂಸಿ ಎದುರಾಳಿ ದೇಬಾಶಿಶ್ ಬ್ಯಾನರ್ಜಿ ಅವರ ವಿರುದ್ಧ 22 ಸಾವಿರ ಮತಗಳ ಅಂತದಲ್ಲಿ ಜಯಗಳಿಸಿದ್ದರು. 294 ಸ್ಥಾನಬಲದ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ 222 ಸ್ಥಾನ ಹೊಂದಿದ್ದರೆ, ವಿಪಕ್ಷ ಬಿಜೆಪಿ 70 ಸ್ಥಾನ ಹೊಂದಿದೆ.
ಇದನ್ನು ಓದಿ: ಭ್ರಷ್ಟಾಚಾರ ಹಿನ್ನೆಲೆ 36 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ರದ್ದು: ಹೈಕೋರ್ಟ್ ಆದೇಶ
ಕಳೆದ ಚುನಾವಣೆಯಲ್ಲೂ ಸಹ ಕಾಂಗ್ರೆಸ್ ಗೆದ್ದಿರಲಿಲ್ಲ, ಬೈರೊನ್ ಬಿಸ್ವಾಸ್ ಉಪಚುನಾವಣೆಯಲ್ಲಿ ಗೆದ್ದ ಏಕೈಕ ಕಾಂಗ್ರೆಸ್ ಶಾಸಕರಾಗಿದ್ದರು. ಮಾಜಿ ಕಾಂಗ್ರೆಸ್ ನಾಯಕ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ರಾಜ್ಯದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಮಾತ್ರ ಹೋರಾಟ ಮಾಡಬಹುದು ಎಂದು ಭಾವಿಸಿದ್ದರಿಂದ ಬೈರೊನ್ ಬಿಸ್ವಾಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದು ಹೇಳಿದ್ದಾರೆ. "ಬಂಗಾಳದಲ್ಲಿ ಬಿಜೆಪಿ ವಿರುದ್ಧ ಹೋರಾಡುವ ಏಕೈಕ ಶಕ್ತಿ ಟಿಎಂಸಿ ಎಂದು ಭಾವಿಸಿದ್ದರಿಂದ ಬೈರೊನ್ ಬಿಸ್ವಾಸ್ ನಮ್ಮೊಂದಿಗೆ ಸೇರಿಕೊಂಡರು" ಎಂದು ಅಭಿಷೇಕ್ ಬ್ಯಾನರ್ಜಿ ಹೇಳಿದರು.
ಅಲ್ಲದೆ, "ಇಂದು, ಅಭಿಷೇಕ್ ಬ್ಯಾನರ್ಜಿಯವರ ಸಮ್ಮುಖದಲ್ಲಿ ನಡೆಯುತ್ತಿರುವ JonoSanjogYatra ಸಮಯದಲ್ಲಿ, ಸಾಗರದಿಘಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕ ಬೈರೊನ್ ಬಿಸ್ವಾಸ್ ನಮ್ಮೊಂದಿಗೆ ಸೇರಿಕೊಂಡರು. ನಾವು ಅವರನ್ನು ತೃಣಮೂಲ ಕಾಂಗ್ರೆಸ್ ಕುಟುಂಬಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ! ಬಿಜೆಪಿಯ ವಿಭಜಕ ಮತ್ತು ತಾರತಮ್ಯದ ರಾಜಕೀಯದ ವಿರುದ್ಧ ಹೋರಾಡುವ ನಿಮ್ಮ ಸಂಕಲ್ಪವನ್ನು ಬಲಪಡಿಸಲು, ನೀವು ಸರಿಯಾದ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಒಟ್ಟಿಗೆ, ನಾವು ಗೆಲ್ಲುತ್ತೇವೆ!" ಎಂದು ಟಿಎಂಸಿ ಪಕ್ಷ ತನ್ನ ಸಾಮಾಜಿಕ ಜಾಲತಾಣದ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಬಂಗಾಳದಲ್ಲಿ ಬಿಜೆಪಿಗೆ 35 ಸ್ಥಾನ ಕೊಡಿ; ನಂತರ ಟಿಎಂಸಿ ಸರ್ಕಾರ ಉಳಿಯಲ್ಲ: ಅಮಿತ್ ಶಾ
ಇದನ್ನೂ ಓದಿ: ನಾನು ಅಮಿತ್ ಶಾ ಗೆ ಕರೆ ಮಾಡಿರುವುದು ಸಾಬೀತಾದ್ರೆ ರಾಜೀನಾಮೆ ಕೊಡ್ತೇನೆ ಎಂದು ದೀದಿ ಹೇಳಿದ್ಯಾಕೆ?