ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲನ್ನು 'ಪಿತೂರಿ' ಎಂದು ಕರೆದಿರುವ ಮಮತಾ ಬ್ಯಾನರ್ಜಿ, ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕಾನೂನು ಸಮರ ಸಾರುವ ಸುಳಿವು ನೀಡಿದ್ದಾರೆ.
ಕೋಲ್ಕತ್ತಾ (ಮೇ.5): 'ನಾವು ಹುಲಿಗಳಂತೆ ಹೋರಾಡಿದ್ದೇವೆ ಮತ್ತು ಬಲಿಷ್ಠವಾಗಿ ಮರಳುತ್ತೇವೆ. ಆದರೆ ಈ ಸರ್ಕಾರದ ನೇರ ಹಸ್ತಕ್ಷೇಪವು ಆಳವಾದ ಕಳವಳಕ್ಕೆ ಕಾರಣವಾಗಿದೆ' ಎಂದು ಪಶ್ಚಿಮ ಬಂಗಾಳದ ನಿರ್ಗಮಿತ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯ ಸೋಲಿಗೆ 'ಪಿತೂರಿ' ಕಾರಣ ಎಂದು ಆರೋಪಿಸಿದ್ದು, ರಾಜೀನಾಮೆ ನೀಡುವ ಸಾಧ್ಯತೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಚುನಾವಣಾ ಫಲಿತಾಂಶವು ಜನರ ಜನಾದೇಶವಲ್ಲ, ಬದಲಾಗಿ ವ್ಯವಸ್ಥಿತವಾಗಿ ನಡೆದ ಸಂಚು ಎಂದು ಮಮತಾ ದೂರಿದ್ದಾರೆ. 'ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ನಾವು ಸೋತಿರುವುದು ಸಾರ್ವಜನಿಕ ತೀರ್ಪಿನಿಂದಲ್ಲ, ಬದಲಾಗಿ ಪಿತೂರಿಯಿಂದ' ಎಂದು ಅವರು ಗುಡುಗಿದ್ದಾರೆ. ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಆರೋಪಿಸಿದ ಅವರು, ಬಿಜೆಪಿ ಕೇಂದ್ರ ಪಡೆಗಳನ್ನು ಬಳಸಿಕೊಂಡು ಚುನಾವಣೆಯನ್ನು 'ಬಲವಂತವಾಗಿ' ಅಧಿಕಾರ ವಶಪಡಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗದ ವಿರುದ್ಧ ಕಾನೂನು ಸಮರ?
ತಮ್ಮ ಹೋರಾಟ ಕೇವಲ ಬಿಜೆಪಿಯ ವಿರುದ್ಧವಲ್ಲ, ಭಾರತೀಯ ಚುನಾವಣಾ ಆಯೋಗದ (ECI) ವಿರುದ್ಧವೂ ಆಗಿದೆ ಎಂದು ಮಮತಾ ತಿಳಿಸಿದ್ದಾರೆ. 'ನಾವು ಹೋರಾಟ ನಡೆಸುತ್ತಿದ್ದೇವೆ, ತಿರುಗೇಟು ನೀಡುತ್ತೇವೆ. ಆದರೆ ನಮ್ಮ ಕಾರ್ಯತಂತ್ರವು ರಹಸ್ಯವಾಗಿದ್ದು, ಅದನ್ನು ಈಗಲೇ ಬಹಿರಂಗಪಡಿಸುವುದಿಲ್ಲ' ಎಂದಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಯಾವ ರೀತಿಯ ಕ್ರಮ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದಿದ್ದಾರೆ. ಪಕ್ಷದ ಕೆಲವು ಕಾರ್ಯಕರ್ತರು ಭಯದಿಂದ ಬಿಜೆಪಿಗೆ ಸೇರುತ್ತಿರುವ ಬಗ್ಗೆ ಮಾಹಿತಿ ಇದೆ ಎಂದು ಮಮತಾ ಹೇಳಿದ್ದಾರೆ. "ಬೆದರಿಕೆ ಮತ್ತು ಕಿರುಕುಳದ ಕಾರಣದಿಂದಾಗಿ ನನ್ನ ಪಕ್ಷದ ಕಾರ್ಯಕರ್ತರು ತಮ್ಮ ಸುರಕ್ಷತೆಗಾಗಿ ಬಿಜೆಪಿಗೆ ಸೇರಿದರೆ ನನಗೆ ಅಭ್ಯಂತರವಿಲ್ಲ," ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ಇಂಡಿಯಾ (INDIA) ಒಕ್ಕೂಟದ ನಾಯಕರಿಗೆ ಧನ್ಯವಾದ
ಸಂಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತ 'ಇಂಡಿಯಾ' ಮೈತ್ರಿಕೂಟದ ನಾಯಕರಿಗೆ ಮಮತಾ ಕೃತಜ್ಞತೆ ಸಲ್ಲಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಹೇಮಂತ್ ಸೊರೇನ್, ತೇಜಸ್ವಿ ಯಾದವ್ ಸೇರಿದಂತೆ ಹಲವರು ದೂರವಾಣಿ ಕರೆ ಮಾಡಿ ಧೈರ್ಯ ತುಂಬಿದ್ದಾರೆ ಎಂದು ಅವರು ತಿಳಿಸಿದರು. ಅಖಿಲೇಶ್ ಯಾದವ್ ಅವರು ನಾಳೆ ಮಮತಾ ಅವರನ್ನು ಭೇಟಿಯಾಗಲಿದ್ದಾರೆ. 'ಈಗ ನನ್ನ ಗುರಿ ಸ್ಪಷ್ಟವಾಗಿದೆ. ನಾನೊಬ್ಬ ಮುಕ್ತ ಹಕ್ಕಿ. ಉಳಿದ ನಾಯಕರೊಂದಿಗೆ ಮುಂದಿನ ಹೆಜ್ಜೆ ಏನು ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ' ಎಂದಿದ್ದಾರೆ.
ಬಿಜೆಪಿಗೆ ಎಚ್ಚರಿಕೆ: 'ಅಧಿಕಾರ ಶಾಶ್ವತವಲ್ಲ'
ಬಿಜೆಪಿಗೆ ಎಚ್ಚರಿಕೆ ನೀಡಿದ ಮಮತಾ, "ಅಧಿಕಾರ ಎಂಬುದು ಕಾಯಂ ಅಲ್ಲ. ಒಮ್ಮೆ ಅಧಿಕಾರದಿಂದ ಹೊರಬಂದ ಮೇಲೆ ಇತಿಹಾಸ ಮರುಕಳಿಸಬಹುದು," ಎಂದಿದ್ದಾರೆ. ತಾವು ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ. ಮನ್ಮೋಹನ್ ಸಿಂಗ್ ಅವರ ಸರ್ಕಾರಗಳನ್ನು ನೋಡಿದ್ದೇನೆ, ಆದರೆ ಇಂತಹ "ಅ*ತ್ಯಾಚಾರಗಳನ್ನು" ಹಿಂದೆಂದೂ ಕಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

