ಕೋಲ್ಕತ್ತ(ಮಾ.08): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ದೀದಿ ಸ್ಕೂಟಿ ನಂದಿಗ್ರಾಮದಲ್ಲಿ ಪತನವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿನ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಮೋದಿ, ಇತ್ತೀಚೆಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರೋಧಿ ಪ್ರತಿಭಟನೆಯಲ್ಲಿ ಮಮತಾ ಅವರಿದ್ದ ಸ್ಕೂಟರ್‌ ಬ್ಯಾಲೆನ್ಸ್‌ ತಪ್ಪಿದ್ದನ್ನು ಉಲ್ಲೇಖಿಸಿ, ‘ಕೆಲ ದಿನಗಳ ಹಿಂದೆ ದೀದಿ ಸ್ಕೂಟಿ ಓಡಿಸಿದಾಗ ಅವರ ಸುರಕ್ಷತೆಗಾಗಿ ನಾವೆಲ್ಲಾ ಪ್ರಾರ್ಥಿಸಿದ್ದೆವು. ಅದೃಷ್ಟವಶಾತ್‌ ಅವರು ಬೀಳಲಿಲ್ಲ.

ಒಂದು ವೇಳೆ ಅವರೇನಾದರೂ ಬಿದ್ದಿದ್ದರೆ, ರಾಜ್ಯದಲ್ಲಿ ಸ್ಕೂಟಿ ಉತ್ಪಾದಿಸಿದವರು ಮಮತಾ ಶತ್ರುವಾಗಬೇಕಿತ್ತು. ಒಂದು ವೇಳೆ ಅದೇನಾದರೂ ತಮಿಳುನಾಡಿನಲ್ಲಿ ಉತ್ಪಾದನೆಯಾಗಿದ್ದರೆ, ಅವರು ತಮಿಳುನಾಡನ್ನೇ ತಮ್ಮ ಶತ್ರು ಎನ್ನುತ್ತಿದ್ದರು. ಅಚ್ಚರಿಯ ವಿಷಯವೆಂದರೆ ಭವಾನಿಪುರದ ಬದಲು ಅವರ ಸ್ಕೂಟಿ ನಂದಿಗ್ರಾಮದತ್ತ ತಿರುವು ಪಡೆದುಕೊಂಡಿದೆ. ನಾನು ಯಾರಿಗೂ ನೋವುಂಟು ಮಾಡಲು ಇಷ್ಟಪಡಲ್ಲ. ಆದರೆ ದೀದಿಯ ಸ್ಕೂಟಿ ಬೇಕುಬೇಕೆಂದು ನಂದಿ ಗ್ರಾಮದಲ್ಲಿ ಬಿದ್ದರೆ ನಾನೇನು ಮಾಡಲಿ?’ ಎಂದು ಕುಟುಕಿದ್ದಾರೆ.