ನವದೆಹಲಿ(ಏ.13): ಕೇಂದ್ರೀಯ ಪಡೆಗಳ ವಿರುದ್ಧ ಘೇರಾವ್‌ ಹಾಕುವಂತೆ ಹಾಗೂ ಧರ್ಮದ ಆಧಾರದ ಮೇಲೆ ಮತ ಹಾಕುವಂತೆ ಮತದಾರರನ್ನು ಪ್ರೇರೇಪಿಸಿದ ಕಾರಣಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ಪ್ರಚಾರಕ್ಕೆ ಚುನಾವಣಾ ಆಯೋಗ 24 ಗಂಟೆಗಳ ನಿಷೇಧ ಹೇರಿದೆ.

ಸೋಮವಾರ ರಾತ್ರಿ 8 ಗಂಟೆಯಿಂದ ಮಂಗಳವಾರ ರಾತ್ರಿ 8 ಗಂಟೆಯವರೆಗೆ ನಿಷೇಧ ಅನ್ವಯ ಆಗಲಿದೆ. ಇದೇ ವೇಳೆ ಚುನಾವಣಾ ಆಯೋಗದ ಕ್ರಮ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ದಿನ ಎಂದು ಕಿಡಿ ಕಾರಿರುವ ಟಿಎಂಸಿ ಸಂಸದ ಡೆರೆಕ್‌ ಒ ಬ್ರಿಯಾನ್‌, ಚುನಾವಣಾ ಆಯೋಗ ಬಿಜೆಪಿಯ ಅಣತಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮಮತಾ ಪ್ರತಿಭಟನೆ:

ಈ ಮಧ್ಯೆ ಚುನಾವಣಾ ಆಯೋಗದ ನಿರ್ಧಾರ ಖಂಡಿಸಿ, ಕೋಲ್ಕತಾದಲ್ಲಿ ಗಾಂಧಿ ಪ್ರತಿಮೆಯ ಎದುರು ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಪ್ರತಿಭಟನೆ ನಡೆಸುವುದಾಗಿ ಮಮತಾ ಘೋಷಿಸಿದ್ದಾರೆ.

ಮಮತಾ ಹೇಳಿದ್ದೇನು?

ಏ.3ರಂದು ತಾರಕೇಶ್ವರದಲ್ಲಿ ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ್ದ ಮಮತಾ, ‘ಬಿಜೆಪಿ ಮಾತು ಕೇಳಿ ನೀವು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಬೇಡಿ ಎಂದು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಏ.7ರಂದು ಕೂಚ್‌ ಬೆಹಾರ್‌ನಲ್ಲಿ ಮಾತನಾಡಿದ್ದ ಮಮತಾ, ಒಂದು ವೇಳೆ ಸಿಎಪಿಎಫ್‌ ಪಡೆ ತೊಂದರೆ ನೀಡಿದರೆ ಮಹಿಳೆಯರ ಒಂದು ಗುಂಪು ಅವರ ಮೇಲೆ ಮುಗಿ ಬೀಳಬೇಕು. ಇನ್ನೊಂದು ಗುಂಪು ಮತಚಲಾಯಿಸಬೇಕು ಎಂದು ಕರೆ ನೀಡಿದ್ದರು.