ಮೋದಿಜೀ ನಿಮ್ಗೆ ನಂದೊಂದೇ ಕ್ಷೇತ್ರ ಸಿಕ್ಕಿರೋದಾ, ಸಂಸತ್ತಿನಲ್ಲಿ ಖರ್ಗೆ ಪ್ರಶ್ನೆ!
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಇಂದು ಬಹಳ ಹೊತ್ತು ಮಾತನಾಡಿದರು. ಈ ವೇಳೆ ಸಾಕಷ್ಟು ಮೋಜಿನ ಸನ್ನಿವೇಶಗಳು ನಡೆದವು. ಒಮ್ಮೆ ರಾಜ್ಯಸಭೆ ಸಭಾಪತಿ ಹಾಗೂ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಬಗ್ಗೆ ಮಾತನಾಡಿದರೆ, ಇನ್ನೊಮ್ಮೆ ಸ್ವತಃ ಮೋದಿ ಕುರಿತಾಗಿಯೇ ಮಾತನಾಡಿದರು.
ನವದೆಹಲಿ (ಫೆ.8): ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅದಾನಿ ವಿಚಾರವಾಗಿ ಪ್ರತಿಪಕ್ಷಗಳು ಸರ್ಕಾರವನ್ನು ಟೀಕೆ ಮಾಡಿ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದರೂ, ಮೋಜಿನ ಕ್ಷಣಗಳು ಕೂಡ ಸದನದಲ್ಲಿ ದಾಖಲಾದವು. ಎಲ್ಲರೂ ಸಂಸತ್ ಅಧಿವೇಶನದಲ್ಲಿ ಬ್ಯುಸಿ ಇದ್ದರೆ, ಮೋದಿ ನನ್ನ ಲೋಕಸಭೆ ಕ್ಷೇತ್ರಕ್ಕೆ ಹೋಗಿ ಚುನಾವಣಾ ಪ್ರಚಾರ ಮಾಡುತ್ತಿರುವ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ತಮಾಷೆಯಾಗಿಯೇ ಆರೋಪ ಮಾಡಿದರು. ಇನ್ನೊಂದು ಹಂತದಲ್ಲಂತೂ ಜಗದೀಪ್ ಧನ್‌ಕರ್ ವಕೀಲಿ ವೃತ್ತಿ ಮಾಡುವ ಸಮಯದಲ್ಲಿ ನೋಟುಗಳನ್ನು ಎಣಿಸೋಕೆ ಮಷಿನ್ ತಂದಿಟ್ಟುಕೊಂಡಿದ್ದರು ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲಿತು. ಸ್ವತಃ ಪ್ರಧಾನಿ ಮೋದಿ, ಸಭಾಪತಿ ಜಗದೀಪ್ ಧನ್‌ಕರ್ ಕೂಡ ಮಲ್ಲಿಕಾರ್ಜುನ್ ಖರ್ಗೆ ಅವರ ಮಾತಿಗೆ ನಕ್ಕು ಸಮಾಧಾನ ಪಟ್ಟುಕೊಂಡರು.
'ಅಭಿವೃದ್ಧಿ, ಸರ್ಕಾರ ಹಾಗೂ ಸಂಸತ್ ಅಧಿವೇಶನ ನಡೆಯುವ ಸಮಯದಲ್ಲಿ ಪ್ರಧಾನಿ ಸಾಹೇಬರು ಹೆಚ್ಚಿನ ಸಮಯವನ್ನು ಇಲ್ಲಿಯೇ ಗಮನ ನೀಡಿದರೆ ಒಳ್ಳೆಯದು.ಆದರೆ, ಪ್ರಧಾನಿ ಅವರು ಎಲ್ಲಾ ಬಾರಿ ಚುನಾವಣೆಯ ಮೂಡ್‌ನಲ್ಲಿಯೇ ಇರುತ್ತಾರೆ. ಈಗ್ಲೇ ನೋಡಿ, ಇಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದೆ. ಆದ್ರೆ ಮೋದಿ ನನ್ನ ಲೋಕಸಭಾ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ. ಅಲ್ಲಿ ಸುಮಾರು ಸುತ್ತು ಹಾಕಿ ಬಂದಿದ್ದಾರೆ. ನಾನು ಅವರಿಗೆ ಹೇಳೋದೊಂದೆ. ನನಗೆ ಇರೋದು ಅದೊಂದೇ ಕ್ಷೇತ್ರ. ಆ ಕ್ಷೇತ್ರವೇ ನಿಮ್ಮ ಕಣ್ಣಿಗೆ ಬಿದ್ದಿರೋದೇಕೆ? ಅದಲ್ಲದೆ, ಈ ಕ್ಷೇತ್ರದಲ್ಲಿ ಅವರು ಎರಡು ಸಭೆಗಳನ್ನು ಮಾಡಿದ್ದಾರೆ ' ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳುತ್ತಿದ್ದಂತೆ ಇಡೀ ಸದನ ನಗೆಗಡಲಲ್ಲಿ ತೇಲಿತು. ಸ್ವತಃ ಪ್ರಧಾನಿ ಮೋದಿ ಕೂಡ ಖರ್ಗೆ ಮಾತಿಗೆ ಮನಸಾರೆ ನಕ್ಕುಬಿಟ್ಟರು.
ಇದಕ್ಕೆ ಧನ್‌ಕರ್, ಇದು ನಿಜಕ್ಕೂ ತನಿಖೆ ಮಾಡಬೇಕಾದ ವಿಚಾರ ಎಂದಾಗ, ಖರ್ಗೆ ನೀವು ನನಗೆ ಮಾತನಾಡಲು ಬಿಡಿ ಎಂದರು. ನನ್ನ ಮಾತಿಗೆ ಮೋದಿ ನಕ್ಕಿದ್ದಾರೆ. ಪ್ರಧಾನಿ ಮೋದಿ ನಗುತ್ತಿರೋದು ಇದೇ ಮೊದಲು. ನೀವು ಅವರಿಗೆ ನಗೋಕು ಬಿಡ್ತಿಲ್ಲ ಎಂದು ಹೇಳಿದಾಗ ಸದನದಲ್ಲಿ ಮತ್ತೊಮ್ಮೆ ಹಾಸ್ಯದ ಹೊನಲು ಹರಿಯಿತು.
ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!
ಧನ್‌ಕರ್ ನೋಟು ಎಣಿಸೋಕೆ ಮಷಿನ್ ಇಟ್ಟಿದ್ದರು: ಇನ್ನೊಂದು ಸಂದರ್ಭದಲ್ಲಿ ಜಗದೀಪ್ ಧನ್‌ಕುರ್ ಕುರಿತು ಮಾತನಾಡುತ್ತಾ, ನೀವು ಸಂವಿಧಾನವನ್ನು ಬಹಳ ತಿಳಿದುಕೊಂಡಿದ್ದೀರಿ. ತುಂಬಾ ಪ್ರಸಿದ್ಧ ವಕೀಲರು ನೀವು. ನೀವೇ ನನಗೆ ಹಿಂದೊಮ್ಮೆ ಒಂದು ವಿಚಾರ ಹೇಳಿದ್ದೀರಿ. ಅದು ನನಗೆ ಇಲ್ಲಿ ಹೇಳಬೇಕೋ ಬೇಡವೋ ಎನ್ನುವುದು ಗೊತ್ತಿಲ್ಲ. ಹೇಳಿದ್ರೂ ಏನೂ ಸಮಸ್ಯೆ ಆಗೋದಿಲ್ಲ' ಎಂದು ಖರ್ಗೆ ಹೇಳಿದಾಗ, ನಾನೂ ಕೂಡ ಕೆಲವೊಂದು ವಿಚಾರ ಹೇಳಿದಾಗ ನಿಮಗೆ ಸರಿ ಅನಿಸೋದಿಲ್ಲ ಎಂದು ನಗುತ್ತಲೇ ಧನ್‌ಕರ್ ಹೇಳಿದರು.
ಪೆಟ್ರೋಲ್ ಬಾಂಬ್‌ಗೆ 'ನಮೋ' ಟಕ್ಕರ್: 50 ರೂ.ಗೆ ಸಿಗುತ್ತೆ ಲೀಟರ್ ಪೆಟ್ರೋಲ್ ?
ನೀವು ವಕೀಲರಾಗಿದ್ದ ಸಮಯದ ಆರಂಭದಲ್ಲಿ ನೀವೇ ಹೇಳಿದ್ದೀರಿ, ಹಣವನ್ನು ಕೈಯಲ್ಲಿ ಎಣಿಕೆ ಮಾಡುತ್ತಿದ್ದೆ ಎಂದು. ಇದು ನಿಜ ತಾನೆ. ಆದರೆ, ಇವರ ವಕೀಲಿಕೆ ಪ್ರಸಿದ್ಧವಾದ ಬಳಿಕ, ನೋಟು ಎಣಿಸೋಕೆ ಮಷಿನ್ ಅನ್ನು ಖರೀದಿ ಮಾಡುತ್ತಿದ್ದೆ ಎಂದು ಹೇಳಿದ್ದರು ಎಂದು ಖರ್ಗೆ ಹೇಳಿದಾಗ ತಕ್ಷಣವೇ ಉತ್ತರಿಸಿದ ಧನ್‌ಕರ್ 'ಇಲ್ಲ ಇಲ್ಲ ನಾನು ಹಾಗೆ ಹೇಳಿಯೇ ಇಲ್ಲ' ಎಂದು ನಗುತ್ತಲೇ ಹೇಳಿದರು. 'ನಿಜ ಸರ್ ನೀವು ಹೀಗೆ ಹೇಳಿದ್ರಿ. ಸದನದ ಮುಂದೆ ನೀವು ಸುಳ್ಳು ಹೇಳಬೇಡಿ' ಎಂದು ಖರ್ಗೆ ಮತ್ತೊಮ್ಮೆ ಹೇಳಿದಾಗ, ಧನ್‌ಕರ್ ಅವರು, ನೀವು ಹೇಳುತ್ತಿರುವ ರೀತಿ ನೋಡಿದರೆ, ನನ್ನ ಮೇಲೆಯೇ ಜೆಪಿಸಿ ತನಿಖೆ ಮಾಡಿಸುವ ಹಾಗೆ ಕಾಣುತ್ತಿದೆ' ಎಂದರು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲಿಯೇ ಕುಳಿತಿದ್ದ ಪೀಯುಷ್ ಗೋಯೆಲ್ ಕೂಡ ನಗಲು ಆರಂಭಿಸಿದರು. 'ನಿಮ್ಮ ಶ್ರಮ ಹಾಗೂ ನಿಮ್ಮ ವಕೀಲಿಕೆ ಅದ್ಭುತವಾಗಿತ್ತು. ಅದಕ್ಕಾಗಿ ಜನ ನಿಮ್ಮನ್ನೇ ಬಯಸಿ ಬಯಸಿ ಬಂದು ಹಣ ನೀಡುತ್ತಿದ್ದರು. ಒಂದು ಕೇಸ್‌ಅನ್ನು ಇವರು ಮಾತ್ರ ಗೆದ್ದುಕೊಡಲು ಸಾಧ್ಯ ಎನ್ನುತ್ತಿದ್ದರು. ಜನರು ಹಣ ಕೊಡುತ್ತಲೇ ಹೋದರು.ನಿಮಗಂತೂ ಎಣಿಸೋಕೆ ಸಮಯ ಇರಲಿಲ್ಲ. ನೀವು ಮೇಡಮ್‌ಗೆ ಮಷಿನ್‌ನಲ್ಲಿ ಹಣ ಎಣಿಸು ಎಂದು ಹೇಳಿದ್ರಿ' ಎಂದು ಖರ್ಗೆ ಮತ್ತೊಮ್ಮೆ ಹೇಳಿದರು.