ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಿದ ಜಾಕೆಟ್ ಧರಿಸಿ ಸಂಸತ್ತಿಗೆ ಬಂದ ಪ್ರಧಾನಿ ಮೋದಿ!
ಪ್ರಧಾನಿ ಮೋದಿಗೆ ಕರ್ನಾಟಕ ಪ್ರವಾಸದ ವೇಳೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿ ಅವರಿಗೆ ಪ್ಲಾಸ್ಟಿಕ್ ಬಾಟಲಿ ತ್ಯಾಜ್ಯದಿಂದ ತಯಾರಿಸಲಾದ ಜಾಕೆಟ್‌ಅನ್ನು ಉಡುಗೊರೆಯಾಗಿ ನೀಡಿದ್ದರು. ಬುಧವಾರ ಸಂಸತ್ತಿಗೆ ಪ್ರಧಾನಿ ಮೋದಿ ಇದೇ ಜಾಕೆಟ್‌ಅನ್ನು ಧರಿಸಿ ಆಗಮಿಸಿದ್ದರು.
ನವದೆಹಲಿ (ಫೆ.8): ಗೌತಮ್ ಅದಾನಿ ಪ್ರಕರಣದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿವೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳಿಗೆ ಉತ್ತರ ನೀಡಲಿದ್ದಾರೆ. ನಾಳೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ನೀಡಲಿದ್ದಾರೆ. ಗೌತಮ್ ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳು ನಿರಂತರವಾಗಿ ಆಡಳಿತ ಪಕ್ಷದ ಮೇಲೆ ದಾಳಿ ನಡೆಸುತ್ತಿವೆ. ಫೆಬ್ರವರಿ 7 ರಂದು ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೋದಿ ಸರ್ಕಾರದ ವಿರುದ್ಧ ತೀವ್ರ ಆರೋಪ ಮಾಡಿದ್ದರು. ಇದರ ನಡುವೆ ಬುಧವಾರ ಸಂಸತ್ತಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಬಹಳ ವಿಶೇಷವಾಗಿ ಕಂಡರು. ರಾಜ್ಯಸಭೆಯಲ್ಲಿ ಬಜೆಟ್ ಕುರಿತಾದ ಚರ್ಚೆಯ ವೇಳೆ ಸದನದಲ್ಲಿ ಹಾಜರಿದ್ದ ಪ್ರಧಾನಿ ಮೋದಿ, ಪ್ಲಾಸ್ಟಿಕ್ ಬಾಟಲಿಯ ತ್ಯಾಜ್ಯದಿಂದ ತಯಾರಿಸಲಾದ ಜಾಕೆಟ್‌ಅನ್ನು ಧರಿಸಿ ಬಂದಿದ್ದರು. ಸೋಮವಾರ ಕರ್ನಾಟಕಕ್ಕೆ ಇಂಡಿಯಾ ಎನರ್ಜಿ ವೀಕ್ ಉದ್ಘಾಟನೆಗಾಗಿ ಬಂದಿದ್ದ ಪ್ರಧಾನಿ ಮೋದಿಗೆ ದೇಶದ ಅತೀದೊಡ್ಡ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಇದನ್ನು ಉಡುಗೊರೆಯಾಗಿ ನೀಡಿತ್ತು. ಇದೇ ಜಾಕೆಟ್‌ಅನ್ನು ಧರಿಸಿ ಮೋದಿ ಸಂಸತ್ತಿನಲ್ಲಿ ಕುಳಿತುಕೊಂಡಿದ್ದರು.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ದಲಿತರು, ಅಲ್ಪಸಂಖ್ಯಾತರ ವಿಚಾರಗಳ ಬಗ್ಗೆ ಮಾತನಾಡಿದರು. ಆಡಳಿತ ಪಕ್ಷದ ಸಂಸದರು ಹಾಗೂ ಸಚಿವರು ಕೇವಲ ಹಿಂದು-ಮುಸ್ಲಿಂ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಹಾಗಿದ್ದರೆ, ದೇಶದಲ್ಲಿ ಚರ್ಚೆ ಮಾಡಲು ಬೇರೆ ವಿಚಾರಗಳೇ ಇಲ್ಲವೇ. ಇನ್ನೊಂದೆಡೆ ದೇವಸ್ಥಾನಗಳಿಗೆ ಹೋಗುವ ದಲಿತರನ್ನು ಕೊಲ್ಲಲಾಗುತ್ತಿದೆ. ಅವರ ಸಮಸ್ಯೆಗಳನ್ನು ಸರ್ಕಾರ ಆಲಿಸುತ್ತಿಲ್ಲ ಎಂದು ಹೇಳಿದರು. ರಾಷ್ಟ್ರಪತಿಯವರ ಭಾಷಣದ ಬಗ್ಗೆ ಚರ್ಚೆ ಮಾಡಿದ ಅವರು, ಸಾಕಷ್ಟು ಸಂಸದರು ಹಾಗೂ ಸಚಿವರು ದಲಿತರ ಮನೆಗೆ ಹೋಗಿ ಊಟ ಮಾಡಿ ಫೋಟೋ ತೆಗೆದುಕೊಳ್ಳುತ್ತಾರೆ. ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ ಎಂದು ಫೋಟೋ ತೆಗೆದು ತೋರಿಸುತ್ತಾರೆ ಎಂದು ಹೇಳಿದರು.
ರಾಹುಲ್ ಗಾಂಧಿಯ ಬಳಿಕ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕೂಡ ಪ್ರಧಾನಿ ಮೋದಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಇಂದು ಎಲ್ಲೆಡೆ ದ್ವೇಷ ಹರಡುತ್ತಿದೆ. ಸ್ವತಃ ಆಡಳಿತ ಪಕ್ಷದ ಸಂಸದರು ಹಾಗೂ ಸಚಿವರೇ ಇಂಥ ದ್ವೇಷವನ್ನು ಹರಡುತ್ತಿದ್ದಾರೆ. ಇಷ್ಟೆಲ್ಲಾ ಅವರ ಎದುರೇ ನಡೆಯುತ್ತಿದ್ದರೂ ಪ್ರಧಾನಿ ಮಂತ್ರಿ ಸುಮ್ಮನೆ ಕುಳಿತಿರೋದೇಕೆ? ನೀವು ಎಲ್ಲರಿಗೂ ಹೆದರಿಸ್ತೀರಿ, ಆದರೆ ದ್ವೇಷವನ್ನು ಹರಡುವ ಇಂಥ ವ್ಯಕ್ತಿಗಳಿಗೆ ನೀವು ಗದರೋದಿಲ್ಲವೇಕೆ. ನೀವು ಶಾಂತ ಬಾಬಾನ ರೀತಿ ಕುಳಿತಿದ್ದೀರಿ. ಆ ಕಾರಣಕ್ಕಾಗಿ ಈ ವಿಚಾರ ಇಂದು ಇಷ್ಟು ದೊಡ್ಡದಾಗಿದೆ ಎಂದು ಆರೋಪಿಸಿದ್ದಾರೆ.
ಅದಾನಿ ಕೇಸ್ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ನಾವು ಬಯಸಿದ್ದೇವೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಪೀಯುಷ್ ಗೋಯಲ್, ಯಾವುದೇ ಕಂಪನಿಗಳ ಮೇಲಿನ ಆರೋಪ ಸಾಬೀತಾದಲ್ಲಿ ಮಾತ್ರವೇ ಜಂಟಿ ಸಂಸದೀಯ ಸಮಿತಿಯನ್ನು ರಚಿಸಲಾಗುತ್ತದೆ. ಅದಲ್ಲದೆ, ಯಾವುದೇ ಸರ್ಕಾರವೇ ಆರೋಪಿ ಸ್ಥಾನದಲ್ಲಿ ನಿಂತಾಗ ಅಥವಾ ಸರ್ಕಾರದಿಂದಲೇ ಕಂಪನಿ ವಿರುದ್ಧ ಆರೋಪ ಮಾಡಿದಾಗ ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಯಾವುದೇ ಖಾಸಗಿ ವ್ಯಕ್ತಿಯ ವಿರುದ್ಧ ಈ ತನಿಖೆಯನ್ನು ಮಾಡಲಾಗುವುದಿಲ್ಲ ಎಂದು ತಿಳಿಸಿದರು.
ವಿಶ್ವ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮೋದಿಗೆ ನಂ. 1 ಸ್ಥಾನ: ಬೈಡೆನ್, ಮ್ಯಾಕ್ರನ್, ಸುನಕ್‌ರನ್ನೂ ಹಿಂದಿಕ್ಕಿದ ಪ್ರಧಾನಿ..!
ಇನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಅವರ ಭಾಷಣಕ್ಕೆ ಟೀಕೆ ಮಾಡಿದ ಬಿಜೆಪಿ ಸಂಸದೆ ಹಾಗೂ ನಟಿ ಹೇಮಾ ಮಾಲಿನಿ, ಸದನದಲ್ಲಿ ಇಂಥ ಘಟನೆಗಳು ಆಗಬಾರದು. ಇಲ್ಲಿರುವ ಎಲ್ಲಾ ಗೌರವಾನ್ವಿತರು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಭಾವುಕರಾಗುವ ಅಗತ್ಯವಿಲ್ಲ. ಕೆಲವೊಬ್ಬರು ತೀರಾ ಕೆರಳಿದಂತೆ ಕಾಣುತ್ತದೆ ಎಂದು ಟಿಎಂಪಿ ಸಂಸದೆಗೆ ತಿವಿದಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ಮೂಲ ದಾಖಲೆ ಸಲ್ಲಿಸಲು ಕೇಂದ್ರಕ್ಕೆ ನೋಟಿಸ್!
ಜನವರಿ 24 ರಂದು, ಅಮೇರಿಕನ್ ಸಂಶೋಧನಾ ಸಂಸ್ಥೆಯು ಹಿಂಡೆನ್‌ಬರ್ಗ್ ವರದಿಯನ್ನು ಪ್ರಕಟಿಸಿದ ನಂತರ, ಅದಾನಿ ಗ್ರೂಪ್‌ನ ಷೇರುಗಳು ನಿರಂತರವಾಗಿ ಕುಸಿತ ಕಂಡಿವೆ. ಇದಾದ ನಂತರ ಪ್ರತಿಪಕ್ಷಗಳು ಅದಾನಿ ಮತ್ತು ಮೋದಿ ನಡುವಿನ ಸಂಬಂಧದ ಬಗ್ಗೆ ಆರೋಪಗಳನ್ನು ಮಾಡಲಾರಂಭಿಸಿದವು. ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಪ್ರತಿಪಕ್ಷಗಳು ಹಠ ಹಿಡಿದಿವೆ. ಫೆಬ್ರವರಿ 6 ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಆಂದೋಲನವನ್ನು ಸಹ ಆಯೋಜಿಸಿತ್ತು.