2013ರ ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟ ಪ್ರಕರಣದ ಶಂಕಿತ ಉಗ್ರ ಅಬೂಬಕ್ಕರ್ ಸಿದ್ದಿಕಿಯನ್ನು 30 ವರ್ಷಗಳ ನಂತರ ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ. 

ಚೆನ್ನೈ: 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ಶಂಕಿತ ಉಗ್ರ ಅಬೂಬಕ್ಕರ್ ಸಿದ್ದಿಕಿಯನ್ನು ತಮಿಳುನಾಡು ಪೊಲೀಸರ ಉಗ್ರ ನಿಗ್ರಹ ತಂಡ ಆಂಧ್ರ ಪ್ರದೇಶದಲ್ಲಿ ಬಂಧಿಸಿದೆ. ಅಬೂಬಕ್ಕರ್ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಕಳೆದ 30 ವರ್ಷದಿಂದ ತಲೆ ಮರೆಸಿಕೊಂಡಿದ್ದನು. ಬಾಂಬ್ ತಯಾರಿಯಲ್ಲಿ ತಜ್ಞನಾಗಿದ್ದ ಈತ 1995ರಿಂದಲೇ ತಲೆಮರೆಸಿಕೊಂಡಿದ್ದ ಹಾಗೂ ಅಂದಿನಿಂದಲೇ ಮಲ್ಲೇಶ್ವರ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ವಿಧ್ವಂಸಕ ಕೃತ್ಯ ಎಸಗಿದ್ದ.

ಶಂಕಿತ ಉಗ್ರ ಅಬೂಬಕ್ಕರ್ ಸಿದ್ದಿಕಿ ಪತ್ತೆಗಾಗಿ ಪೊಲೀಸರು 5 ಲಕ್ಷ ರು. ಇನಾಮು ಘೋಷಿಸಿದ್ದರು. ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಸಿದ್ದಿಕಿ ಇರುವಿಕೆಯ ಖಚಿತ ಮಾಹಿತಿಯನ್ನು ಆಧರಿಸಿದ ತಮಿಳುನಾಡು ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಸಿದ್ದಿಕಿ ಸಹಚರ ಮೊಹಮದ್ ಅಲಿ ಎಂಬಾತನನ್ನು ಸಹ ಬಂಧಿಸಿದ್ದಾರೆ.

ಏನೇನು ಪ್ರಕರಣಗಳು?

2013ರ ಏ.17ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದ ಸ್ಫೋಟದಲ್ಲಿ 16 ಮಂದಿ ಗಾಯಗೊಂಡಿದ್ದರು. ಇದಕ್ಕೂ ಮುನ್ನ 2011ರಲ್ಲಿ ಬಿಜೆಪಿಯ ಮುತ್ಸದ್ದಿ ಎಲ್.ಕೆ.ಅಡ್ವಾಣಿ ಅವರ ರಥಯಾತ್ರೆ ಮದುರೈನಲ್ಲಿ ಮೂಲಕ ಸಾಗುವಾಗ ಮಾರ್ಗದಲ್ಲಿ 'ಪೈಪ್ ಬಾಂಬ್' ಇರಿಸಿ ಸ್ಫೋಟಕ್ಕೆ ಸಂಚು ರೂಪಿಸಲಾಗಿತ್ತು. ಇದರಲ್ಲಿ ಸಿದ್ದಿಕಿ ಪಾತ್ರವಿದೆ ಎಂದು ಆರೋಪಿಸಲಾಗಿತ್ತು.

ಈತ 1995ರಲ್ಲಿ ಚೆನ್ನೈನ ಹಿಂದೂ ಮುನ್ನಣಿ ಕಚೇರಿ ಎದುರು ನಡೆದ ಸ್ಪೋಟದ ರೂವಾರಿಯಾಗಿದ್ದನು. ಅದೇ ವರ್ಷ ಹಿಂದೂ ಕಾರ್ಯಕರ್ತ ಟಿ. ಮುತ್ತುಕೃಷ್ಣನ್ ಅವರ ಕೊಲೆಗೆ ಸಂಬಂಧಿಸಿದ ಸ್ಪೋಟದಲ್ಲಿಯೂ ಭಾಗಿಯಾಗಿದ್ದನು. 1999ರಲ್ಲಿ ಚೆನ್ನೈನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ 7 ಕಡೆ ಬಾಂಬ್ ಇರಿಸಿದ ಪ್ರಕರಣದಲ್ಲಿ ಸಿದ್ದಿಕ್ಕಿ ಪ್ರಮುಖ ಪಾತ್ರ ವಹಿಸಿದ್ದ. ಇದಲ್ಲದೆ ಕೊಯಮತ್ತೂರು, ತಿರುಚಿರಾಪಳ್ಳಿ ಹಾಗೂ ಕೇರಳದಲ್ಲಿ ಬಾಂಬ್ ಇಟ್ಟ ಆರೋಪವೂ ಈತನ ಮೇಲಿದೆ ಎಂದು ಹೇಳಲಾಗಿದೆ.

ತಮಿಳ್ನಾಡು ಲಾಕಪ್‌ ಡೆತ್: 5 ಪೊಲೀಸರ ಬಂಧನ

ಚೆನ್ನೈ: ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತುರುಪ್ಪುವನಂನ ದೇಗುಲವೊಂದರ ಭದ್ರತಾ ಸಿಬ್ಬಂದಿ ಬಿ. ಅಜಿತ್ ಕುಮಾರ್ (27) ಪೊಲೀಸ್ ದೌರ್ಜನ್ಯದಿಂದಾಗಿ, ಪೊಲೀಸ್‌ ವಶದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪ್ರಕರಣ ಸಂಬಂಧ 6 ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್‌ ಮಾಡಲಾಗಿದ್ದು, 5 ಪೊಲೀಸರನ್ನು ಬಂಧಿಸಲಾಗಿದೆ. ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿ ಆಶಿಷ್ ರಾವತ್‌ರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ.ಪ್ರಕರಣದ ಬಗ್ಗೆ ತೀವ್ರ ಕಿಡಿಕಾರಿರುವ ಹೈಕೋರ್ಟ್‌, ‘ಪೊಲೀಸರಿಗೆ ಅಧಿಕಾರದ ಅಮಲೇರಿ ಇಂಥ ಕೃತ್ಯ ಎಸಗುತ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆದೇಶಿಸಿದೆ. ಆದರೆ ವಿಪಕ್ಷಗಳ ಒತ್ತಾಯದ ಮೇರೆಗೆ ಸಿಎಂ ಎಂ.ಕೆ. ಸ್ಟಾಲಿನ್‌ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?

ಅಜಿತ್ ಕುಮಾರ್ ಶಿವಗಂಗಾ ಜಿಲ್ಲೆಯ ತುರುಪ್ಪುವನಂನ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಆವಾರದಲ್ಲಿ ನಿಲ್ಲಿಸಿದ್ದ ಭಕ್ತರೊಬ್ಬರ ಕಾರ್‌ನಲ್ಲಿದ್ದ ಚಿನ್ನ ಕಳುವಾದ ಆರೋಪದಲ್ಲಿ ಜೂ.27ರಂದು ಅವರನ್ನು ಬಂಧಿಸಲಾಗಿತ್ತು.ವಿಚಾರಣೆ ಬಳಿಕ ಬಿಡುಗಡೆ ಮಾಡಿ, ಮರುದಿನ ಪುನಃ ಬಂಧಿಸಲಾಗಿತ್ತು. ಆಗ ಪೊಲೀಸರು ನಡೆಸಿದ ಹಲ್ಲೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಸಾರ್ವಜನಿಕ ಆಕ್ರೋಶ ಭುಗಿಲೆದ್ದ ಬೆನ್ನಲ್ಲೆ, ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶಿಸಿತ್ತು.

ಭಾರಿ ದೌರ್ಜನ್ಯ:ಮೃತ ಅಜಿತ್ ಗುದದ್ವಾರದ ಬಳಿ ಲಾಠಿ ಪ್ರಹಾರ ನಡೆಸಲಾಗಿದೆ. ತಲೆ ಸೇರಿ ದೇಹದ ವಿವಿಧೆಡೆ 30ರಿಂದ 40 ಗಾಯದ ಗುರುತುಗಳಿವೆ. ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದು, ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.