ಅಣ್ಣಾ ಫ್ಲೈಟ್ ಬುಕಿಂಗ್ ಪುನರ್ ಆರಂಭಿಸಿ, ಭಾರತೀಯ ಕಂಪನಿಗಳಿಗೆ ಮಾಲ್ಡೀವ್ಸ್ ಮನವಿ!
ಭಾರತ ಹಾಗೂ ಮೋದಿ ವಿರುದ್ಧ ಹೇಳಿಕೆ ನೀಡಿದ ಮಾಲ್ಡೀವ್ಸ್ ಇದೀಗ ಮಂಡಿಯೂರಿದೆ. ಭಾರತದ ಮುಂದೆ ಕೈಚಾಚಿ ಬೇಡುವ ಪರಿಸ್ಥಿತಿಗೆ ಬಂದಿದೆ. ಈಸ್ ಮೈ ಟ್ರಿಪ್ ಸೇರಿದಂತೆ ಹಲವು ಹಾಲಿಡೇ ಪ್ಯಾಕೇಜ್ ಬುಕಿಂಗ್ ಸಂಸ್ಥೆಗಳು ಮಾಲ್ಡೀವ್ಸ್ ಬುಕಿಂಗ್ ರದ್ದು ಮಾಡಿತ್ತು. ಇದೀಗ ಮಾಲ್ಡೀವ್ಸ್ ಪ್ರವಾಸೋದ್ಯಮ ಅಸೋಸಿಯೇಶನ್, ಫ್ಲೈಟ್ ಬುಕಿಂಗ್ ಪುನರ್ ಆರಂಭಿಸುವಂತೆ ಮನವಿ ಮಾಡಿದೆ.
ಮಾಲ್ಡೀವ್ಸ್(ಜ.10) ಒಂದೇ ವಾರದಲ್ಲಿ ಮಾಲ್ಡೀವ್ಸ್ ಪರಿಸ್ಥಿತಿ ಬದಲಾಗಿದೆ. ಪ್ರಧಾನಿ ಮೋದಿ ಹಾಗೂ ಭಾರತೀಯರ ನಿಂದಿಸಿದ ಬೆನ್ನಲ್ಲೇ ಮಾಲ್ಡೀವ್ಸ್ ಪ್ರವಾಸೋದ್ಯಮ ಪಾತಾಳಕ್ಕೆ ಕುಸಿದಿದೆ. ಭಾರತೀಯರು ಸ್ವಯಂ ಪ್ರೇರಿತರಾಗಿ ಮಾಲ್ಡೀವ್ಸ್ ಪ್ರವಾಸ ರದ್ದು ಮಾಡುತ್ತಿದ್ದಾರೆ. ಇತ್ತ ಈಸ್ ಮೈ ಟ್ರಿಪ್ ಸೇರಿದಂತೆ ಹಲವು ಹಾಲಿಡೇ ಪ್ಯಾಕೇಜ್ ಟೂರ್ ಸೇವೆ ಒದಗಿಸುವ ಸಂಸ್ಥೆಗಳು ಮಾಲ್ಡೀವ್ಸ್ ಬುಕಿಂಗ್ಸ್ ರದ್ದು ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲ್ಡೀವ್ಸ್‌ಗೆ ಯಾವುದೇ ಬುಕಿಂಗ್ ಸ್ವೀಕರಿಸುತ್ತಿಲ್ಲ. ಇದು ಮಾಲ್ಡೀವ್ಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೀಗ ಈಸ್ ಮೈ ಟ್ರಿಪ್ ಬಳಿ ಮಾಲ್ಡೀವ್ಸ್ ಪ್ರವಾಸೋದ್ಯಮ ಅಸೋಸಿಯೇಶನ್ ಪರಿಪರಿಯಾಗಿ ಮನವಿ ಮಾಡಿದೆ. ಫ್ಲೈಟ್ ಬುಕಿಂಗ್ ಪುನರ್ ಆರಂಭಿಸುವಂತೆ ಭಾರತೀಯ ಸಂಸ್ಥೆಗಳನ್ನು ಅಂಗಲಾಚಿದೆ
ಭಾರತ ಹಾಗೂ ಮೋದಿ ನಿಂದಿಸಿದ ಬೆನ್ನಲ್ಲೇ ಈಸ್ ಮೈ ಟ್ರಿಪ್ ಹಾಲಿಡೇ ಪ್ಯಾಕೇಜ್ ಟೂರ್ ಮಹತ್ವದ ಘೋಷಣೆ ಮಾಡಿತ್ತು. ಈಸ್ ಮೈ ಟ್ರಿಪ್ ಭಾರತದ ಕಂಪನಿಯಾಗಿದೆ. ಭಾರತೀಯರು, ಗೌರವಾನ್ವಿತ ಪ್ರಧಾನಿಯನ್ನು ನಿಂದಿಸಿದ ಮಾಲ್ಡೀವ್ಸ್ ಹೇಳಿಕೆಯನ್ನು ಖಂಡಿಸುವ ಸಲುವಾಗಿ ಮಾಲ್ಡೀವ್ಸ್ ಪ್ರವಾಸದ ಎಲ್ಲಾ ವಿಮಾನ ಬುಕಿಂಗ್ ರದ್ದು ಮಾಡಿತು. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿ ಬಿಗಾಡಾಯಿಸುತ್ತಿರುವ ಕಾರಣ ಮಾಲ್ಡೀವ್ಸ್ ಆಸೋಸಿಯೇಶನ್ ಆಫ್ ಟೂರ್ ಅಂಡ್ ಟ್ರಾವೆಲ್ ಆಪರೇಟರ್ಸ್(MATATO) ಇದೀಗ ಭಾರತದ ಬಳಿ ಕೈಮುಗಿದು ಬೇಡಿಕೊಂಡಿದೆ.
ನವ ಜೋಡಿಗಳ ಹನಿಮೂನ್ ಸ್ವರ್ಗವಾಗಿರುವ ಮಾಲ್ಡೀವ್ಸ್‌ನಲ್ಲಿ ಗರಿಷ್ಠ ಡಿವೋರ್ಸ್ ಕೇಸ್!
ಮಾಲ್ಡೀವ್ಸ್ ಪ್ರವಾಸಕ್ಕೆ ಬರುವ ಪ್ರವಾಸಿಗರಲ್ಲಿ ಭಾರತೀಯರೇ ಹೆಚ್ಚು. ಭಾರತದಲ್ಲಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾವು ಉತ್ಯುತ್ತಮ ಆತಿಥ್ಯ ನೀಡಿದ್ದೇವೆ. ಮುಂದೆಯೂ ಇದೇ ರೀತಿಯ ಆತಿಥ್ಯ ನೀಡುತ್ತೇವೆ. ರಾಜಕೀಯ ಕಾರಣಗಳಿಂದ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮಾಲ್ಡೀವ್ಸ್‌ಗೆ ಫ್ಲೈಟ್ ಬುಕಿಂಗ್ ಕ್ಯಾನ್ಸಲ್, ಬುಕಿಂಗ್ ಸ್ವೀಕರಿಸದೇ ಇರುವ ನಿರ್ಧಾರಗಳು ಮತ್ತಷ್ಟು ಹೊಡೆತ ನೀಡಲಿದೆ. ಭಾರತದ ಜೊತೆಗೆ ಮಾಲ್ಡೀವ್ಸ್ ಅವಿನಾಭವ ಸಂಬಂಧ ಹೊಂದಿದೆ. ಮೂರನೇ ಎರಡಷ್ಟು ಜಿಡಿಪಿ ಪ್ರವಾಸೋದ್ಯಮದಿಂದಲೇ ಬರುತ್ತಿದೆ. 44,000 ಮಾಲ್ಡೀವ್ಸ್ ನಾಗರೀಕರು ಇದೇ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದರೆ ಮಾಲ್ಡೀವ್ಸ್ ಆರ್ಥಿಕತೆ ನೆಲಕಚ್ಚಲಿದೆ. ಈಸ್ ಮೈ ಟ್ರಿಪ್ ಶೀಘ್ರದಲ್ಲೇ ಫ್ಲೈಟ್ ಬುಕಿಂಗ್ ಪುನರ್ ಆರಂಭಿಸಬೇಕು ಎಂದು MATATO ಮನವಿ ಮಾಡಿದೆ.
ಈಸ್ ಮೈ ಟ್ರಿಪ್ ಸಿಇಒ ಕಂಪನಿಯ ಸಿಇಒ ನಿಶಾಂತ್ ಪಿಟ್ಟಿ, ‘ಲಕ್ಷದ್ವೀಪದ ಸಮುದ್ರ ಮತ್ತು ಸಮುದ್ರ ತೀರ ಮಾಲ್ಡೀವ್ಸ್‌ನಷ್ಟೇ ಸುಂದರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಬಳಿಕ ಲಕ್ಷದ್ವೀಪ ಪ್ರವಾಸ ಕೈಗೊಳ್ಳಲು ಈಸ್ ಮೈ ಟ್ರಿಪ್ ವಿಶೇಷ ಆಫರ್‌ಗಳನ್ನು ನೀಡುತ್ತಿದೆ. ಮಾಲ್ಡೀವ್ಸ್ ಪ್ರವಾಸವನ್ನು ರದ್ದು ಮಾಡಿ, ನಮ್ಮದೇ ದೇಶದಲ್ಲಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಿ. ಭಾರತದ ಸಾರ್ವಭೌಮತೆಯ ಜೊತೆ ನಿಲ್ಲಲು ಈಸ್ ಮೈ ಟ್ರಿಪ್ ಮಾಲ್ಡೀವ್ಸ್‌ಗೆ ಹೋಗುವ ಎಲ್ಲಾ ವಿಮಾನಗಳ ಬುಕ್ಕಿಂಗ್‌ಗಳನ್ನು ರದ್ದು ಮಾಡಿದೆ’ ಎಂದು ಘೋಷಿಸಿದ್ದರು.
ಉಡುಪಿಯ ತ್ರಾಸಿ ಬೀಚ್ ಫೋಟೋ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ಸೆಹ್ವಾಗ್!