ಭಾರತ ಜತೆ ಮತ್ತೆ ಮಾಲ್ಡೀವ್ಸ್ ದೋಸ್ತಿ, ಇಂಡಿಯಾಗೆ ಹಾನಿ ಮಾಡುವಂತಹ ಕೆಲಸ ಮಾಡಲ್ಲ: ಮುಯಿಜು
ಮುಯಿಜು ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಇಂದಿನ ನಮ್ಮ ಮಾತುಕತೆಯ ಸಮಯದಲ್ಲಿ, ನಾವು ಆರ್ಥಿಕ ಸಂಪರ್ಕಗಳು, ದೂರಸಂಪರ್ಕ, ಸಾಂಸ್ಕೃತಿಕ ಸಂಪರ್ಕ ಮತ್ತು ಹವಾಮಾನ ಬದಲಾವಣೆ, ಜಲ ಸಂಪನ್ಮೂಲಗಳು, ಕೃಷಿ, ಮೀನುಗಾರಿಕೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಸುಧಾರಿಸುವ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ ಎಂದ ನರೇಂದ್ರ ಮೋದಿ
ನವದೆಹಲಿ(ಅ.08): ಪ್ರವಾಸೋದ್ಯಮ ಹಾಗೂ ಸೇನಾ ಸಹಕಾರ ಸಂಬಂಧ ಭಾರತದ ಜತೆ ವಿನಾಕಾರಣ ಕಿತ್ತಾಡಿಕೊಂಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ಈಗ ತಮ್ಮ ನಿಲುವು ಬದಲಿಸಿ ತಣ್ಣಗಾಗಿದ್ದಾರೆ. ‘ಮಾಲ್ಡೀವ್ಸ್ ಮೊದಲು ಎಂಬ ನಮ್ಮ ನೀತಿ ಯಾವುದೇ ಕಾರಣಕ್ಕೂ ಭಾರತದೊಂದಿಗೆ ನಾವು ಹೊಂದಿರುವ ಸುದೀರ್ಘ ಸಂಬಂಧಕ್ಕೆ ಅದರಲ್ಲೂ ವಿಶೇಷವಾಗಿ ಭಾರತದ ಭದ್ರತೆಗೆ ಹಾನಿ ಮಾಡುವಂಥ ಯಾವುದೇ ಕ್ರಮಗಳಿಗೂ ಅವಕಾಶ ನೀಡುವುದಿಲ್ಲ’ ಎಂದು ಅವರು ಭರವಸೆ ನೀಡಿದ್ದಾರೆ.
ಜೊತೆಗೆ ‘ಭಾರತವು ಮಾಲ್ಡೀವ್ಸ್ ಸಾಮಾಜಿಕ-ಆರ್ಥಿಕ ವಲಯದ ಪ್ರಮುಖ ಮೌಲ್ಯಯುತ ಪಾಲುದಾರ. ಮಾಲ್ಡೀವ್ಸ್‌ಗೆ ಇಷ್ಟು ವರ್ಷ ಉದಾರ ಸಹಾಯ ಮಾಡಿದ ಭಾರತ ಹಾಗೂ ಭಾರತೀಯರಿಗೆ ಧನ್ಯವಾದಗಳು. ಮಾಲ್ಡೀವ್ಸ್‌ಗೆ ಭಾರತೀಯ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಬರಬೇಕು’ ಎಂದು ಕೋರಿದ್ದಾರೆ.
ಶೇಕ್ ಹ್ಯಾಂಡ್ ಮಾಡುವುದೂ ಹರಾಮ್? ಕೈ ಮುಂದೆ ಮಾಡಿದ ರಾಜಕುಮಾರನಿಂದ ಬಿಸಿಬಿಸಿ ಚರ್ಚೆ ಶುರು!
ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಮುಯಿಜು ಬಗ್ಗೆ ಹೊಂದಿದ್ದ ಕಠೋರ ನಿಲುವು ಬದಲಿಸಿ ‘ಅಧ್ಯಕ್ಷ ಮುಯಿಜು ಅವರ ಭಾರತ ಭೇಟಿಯು ನಮ್ಮ ಬಾಂಧವ್ಯಕ್ಕೆ ಮತ್ತೊಂದು ಅಧ್ಯಾಯ ತೆರೆದಿದೆ’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
5 ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ಮುಯಿಜು ಅವರು ದಿಲ್ಲಿಯಲ್ಲಿ ಪ್ರಧಾನಿ ಮೋದಿ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ನಂತರ ಮೋದಿ ಹಾಗೂ ಮುಯಿಜು ಜಂಟಿ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದರು.
‘ಭಾರತವು ಮಾಲ್ಡೀವ್ಸ್‌ನ ಇಂಧನ, ಆರೋಗ್ಯ, ಡಿಜಿಟಲ್ ಹಾಗೂ ಹಣಕಾಸು ವಿಷಯಗಳ ಪ್ರಮುಖ ಪಾಲುದಾರ’ ಎಂದ ಮುಯಿಜು, ‘ಭಾರತವು ಮಾಲ್ಡೀವ್ಸ್‌ನ ಅತಿದೊಡ್ಡ ಪ್ರವಾಸೋದ್ಯಮ ಮೂಲವಾಗಿದೆ. ಭಾರತದ ಭದ್ರತೆಗೆ ಹಾನಿ ಮಾಡುವಂಥ ಯಾವುದೇ ಕ್ರಮಗಳನ್ನು ನಾವು ಕೈಗೊಳ್ಳುವುದಿಲ್ಲ’ ಎಂದರು. ಈ ಮೂಲಕ ಭಾರತದ ಪ್ರವಾಸಿಗರ ಬಗ್ಗೆ ಈ ಹಿಂದೆ ತಾಳಿದ್ದ ದ್ವೇಷ ಭಾವನೆಯನ್ನು ದೂರ ಮಾಡಲು ಯತ್ನಿಸಿದರು ಹಾಗೂ ಭಾರತದ ವೈರಿ ಚೀನಾ ಜತೆ ಸೇರಿ ಭಾರತಕ್ಕೆ ಅಹಿತಕರ ಆಗುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಭರವಸೆ ನೀಡಿದರು.
ಇನ್ನು ನರೇಂದ್ರ ಮೋದಿ ಮಾತನಾಡಿ, ‘ಮುಯಿಜು ಅವರನ್ನು ಭಾರತಕ್ಕೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಇಂದಿನ ನಮ್ಮ ಮಾತುಕತೆಯ ಸಮಯದಲ್ಲಿ, ನಾವು ಆರ್ಥಿಕ ಸಂಪರ್ಕಗಳು, ದೂರಸಂಪರ್ಕ, ಸಾಂಸ್ಕೃತಿಕ ಸಂಪರ್ಕ ಮತ್ತು ಹವಾಮಾನ ಬದಲಾವಣೆ, ಜಲ ಸಂಪನ್ಮೂಲಗಳು, ಕೃಷಿ, ಮೀನುಗಾರಿಕೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಸಹಕಾರವನ್ನು ಸುಧಾರಿಸುವ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ’ ಎಂದರು.
ಹಳಸಿತ್ತು ಸಂಬಂಧ:
ಕಳೆದ ಮಾರ್ಚ್‌ನಲ್ಲಿ ನಡೆದ ಮಾಲ್ಡೀವ್ಸ್ ಸಂಸದೀಯ ಚುನಾವಣೆ ವೇಳೆ ಮುಯಿಜು ಭಾರತ ವಿರೋಧಿ ನಿಲುವು ಪ್ರದರ್ಶಿಸಿದ್ದರು. ಗೆದ್ದ ಮೇಲೆ ತಮ್ಮ ದೇಶದಲ್ಲಿನ ಭಾರತೀಯ ಯೋಧರಿಗೆ ದೇಶ ತೊರೆಯಲು ಗಡುವು ನೀಡಿದ್ದರು. ಚೀನಾ ಜೊತೆಗೆ ಮತ್ತಷ್ಟು ಸ್ನೇಹದ ಹಸ್ತಚಾಚಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪವನ್ನು ಪ್ರವಾಸಿ ತಾಣ ಮಾಡಲು ಮುಂದಾದಾಗ ಕಂಗೆಟ್ಟಿದ್ದ, ಮುಯಿಜು ಹಾಗೂ ಅವರ ಬೆಂಬಲಿಗರು ಭಾರತ ವಿರೋಧಿ ಹೇಳಿಕೆ ನೀಡಿ ಉಭಯ ದೇಶಗಳ ಸಂಬಂಧ ಹಳಸಲು ಕಾರಣರಾಗಿದ್ದರು.
ಪ್ರಪಂಚದ ಅತ್ಯಂತ ಶಕ್ತಿಶಾಲಿ ಟಾಪ್-10 ರಾಷ್ಟ್ರಗಳು: ಭಾರತಕ್ಕೆ ಎಷ್ಟನೇ ಸ್ಥಾನ?
ಮಾಲ್ಡೀವ್ಸ್ ಭೇಟಿಗೆ ಪ್ರಧಾನಿ ಸಮ್ಮತಿ
ನವದೆಹಲಿ: 5 ದಿನದ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಇವರ ಆಹ್ವಾನವನ್ನು ಪ್ರಧಾನಿ ಮೋದಿ ಅವರು ಸಮ್ಮತಿಸಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್‌ಗಳ ಬಳಕೆಗೆ ಚಾಲನೆ
ನವದೆಹಲಿ: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಮಾಲ್ಡೀವ್ಸ್‌ನಲ್ಲಿ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಲಾಯಿತು. ಭಾರತದ ಪ್ರವಾಸಿಗರನ್ನೇ ಮಾಲ್ಡೀವ್ಸ್ ನೆಚ್ಚಿದ್ದು, ಭಾರತದಲ್ಲಿ ನೀಡಲಾಗಿರುವ ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳನ್ನು ಭಾರತೀಯರು ಮಾಲ್ಡೀವ್ಸ್‌ನಲ್ಲಿ ಇನ್ನು ಬಳಸಿ ನಗದು ರಹಿತ ವಹಿವಾಟು ನಡೆಸಬಹುದಾಗಿದೆ.