ಕೇರಳದಿಂದ ಮಗಳನ್ನು ನೋಡಲು ಸೌದಿಗೆ ಬಂದಿದ್ದ ಮಲಯಾಳಿ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಬ್ದುಲ್ ಸಲಾಂ (66) ಎಂಬುವವರು ಜುಬೈಲ್‌ನಲ್ಲಿ ನಿಧನರಾಗಿದ್ದು, ಅಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

ಸಾವು ಯಾರಿಗೆ ಯಾವಾಗ ಎಲ್ಲಿ ಬರೆದಿದೆ ಎಂದು ಯಾರೂ ಹೇಳಲಾಗದು. ಈಗ ನೋಡಿದ ವ್ಯಕ್ತಿ ಮರುಕ್ಷಣ ಇರುವುದಿಲ್ಲ, ಈಗಂತೂ ಹೃದಯಾಘಾತದ ಕಾರಣದಿಂದ ಅನೇಕ ಯುವಕರು ಯುವತಿಯರು ಮಧ್ಯವಯಸ್ಕರು ನಿಂತಲ್ಲಿ ಕೂತಲ್ಲೇ ಹೃದಯಾಘಾತಕ್ಕೀಡಾಗಿ ಸಾವಿನ ಮನೆ ಸೇರಿದಂತಹ ನೂರಾರು ಘಟನೆಗಳು ನಡೆದಿವೆ. ವಿವಾಹ ವಾರ್ಷಿಕೋತ್ಸವದ ದಿನ ಪತ್ನಿಯ ಜೊತೆ ನೃತ್ಯ ಮಾಡುತ್ತಿದ್ದಾಗಲೇ ಉದ್ಯಮಿಯೊಬ್ಬರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. 

ಹೀಗಿರುವಾಗ ಈಗ ಮಗಳನ್ನು ನೋಡಲು ಕೇರಳದಿಂದ ಸೌದಿಗೆ ಬಂದಿದ್ದ ಮಲಯಾಳಿ ವ್ಯಕ್ತಿಯೊಬ್ಬರು ಅಲ್ಲೇ ಸಾವನ್ನಪ್ಪಿದ್ದಾರೆ. ಕೇರಳದ ಆಲಪ್ಪುಳ ಮಣ್ಣಂಚೇರಿ ನಿವಾಸಿ ಅಬ್ದುಲ್ ಸಲಾಂ (66) ಮೃತಪಟ್ಟವರು. ಮುಂಜಾನೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ನಂತರ ಉಸಿರಾಟದ ತೊಂದರೆಯಿಂದಾಗಿ ಅವರು ಪ್ರಜ್ಞಾಹೀನರಾದರೂ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. 

ಕಳೆದ ಫೆಬ್ರವರಿಯಲ್ಲಿ ಅವರು ಹೆಂಡತಿಯೊಂದಿಗೆ ಉಮ್ರ್ ವೀಸಾದಲ್ಲಿ(ಮೆಕ್ಕಾ ಯಾತ್ರೆಯ ವೀಸಾ) ಜುಬೈಲ್‌ನಲ್ಲಿರುವ ಮಗಳು ಅನ್ಸಿಲಾ ಮನೆಗೆ ಬಂದಿದ್ದರು. ಮುಂದಿನ ವಾರ ಅಬ್ದುಲ್ ಸಲಾಂ ಅವರು ಕೇರಳದ ಆಲಪ್ಪುಳದಲ್ಲಿರುವ ತಮ್ಮ ಮನೆಗೆ ವಾಪಸಾಗುವವರಿದ್ದರು. ಆದರೆ ವಿಧಿ ಬೇರೆಯೇ ಬರೆದಿತ್ತು. ಸೌದಿಯಲ್ಲೇ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಅಲ್ಲೇ ನಡೆಸಲು ಅವರ ಕುಟುಂಬದವರು ತೀರ್ಮಾನಿಸಿದ್ದಾರೆ. 

ವಕ್ಫ್‌ ತಿದ್ದುಪಡಿ ಮಸೂದೆ ಅಂಗೀಕಾರ; ಕೇರಳದಲ್ಲಿ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಜನರು ಬಿಜೆಪಿ ಸೇರ್ಪಡೆ

ಪ್ರಸ್ತುತ ಅಬ್ದುಲ್ ಸಲಾಂ ಮೃತದೇಹವನ್ನು ಜುಬೈಲ್‌ನ ಜನರಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಅಧಿಕೃತ ಪ್ರಕ್ರಿಯೆಗಳ ನಂತರ ಸೌದಿಯಲ್ಲೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಈ ಪ್ರಕ್ರಿಯೆಗಳ ನೇತೃತ್ವ ವಹಿಸುತ್ತಿರುವ ಪ್ರವಾಸಿ ವೆಲ್ಫೇರ್ ಜುಬೈಲ್ ಜನಸೇವಾ ವಿಭಾಗದ ಸಂಚಾಲಕ ಸಲೀಂ ಅಲಪ್ಪುಳ ತಿಳಿಸಿದ್ದಾರೆ. ಮೃತ ಅಬ್ದುಲ್ ಸಲಾಂ ಮಕ್ಕಳಾದ ಅನ್ಸಿಲಾ, ಮುಹಮ್ಮದ್ ಅನ್ಸಾರಿ, ಮುಹಮ್ಮದ್ ಅಫ್ಸಲ್, ಹಸೀನಾ. ಅಳಿಯ: ಮಣ್ಣಂಚೇರಿ ಹಂಸ ಎಂಬುವವರನ್ನು ಅಗಲಿದ್ದಾರೆ. 

ಸೇಂಟ್ ಮೇರಿಸ್‌ ಚರ್ಚ್‌ಗೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ: ವಕ್ಫ್ ಮಸೂದೆ ಬಗ್ಗೆ ಹೇಳಿದ್ದೇನು?