* ಮೊದಲ ದಿನ ಸ್ಪೀಕರ್ ಚುನಾವಣೆ* ಬಿಜೆಪಿಯ ನಾರ್ವೇಕರ್ ವಿರುದ್ಧ ಶಿವಸೇನೆ ಅಭ್ಯರ್ಥಿ ಸಾಲ್ವಿ ಕಣಕ್ಕೆ* ಶಿವಸೇನೆಯ ಅಭ್ಯರ್ಥಿಗೆ ಮತ ಹಾಕುವಂತೆ ವಿಪ್ ಜಾರಿ* ಶಿಂಧೆ ಬಣ ಏನು ಮಾಡುತ್ತದೆ ಎಂಬ ಕುತೂಹಲ
ಮುಂಬೈ(ಜು.03): ನೂತನ ಮುಖ್ಯಮಂತ್ರಿ, ಶಿವಸೇನೆ ಬಂಡಾಯ ನಾಯಕ ಏಕನಾಥ ಶಿಂಧೆ ಅವರು ವಿಶ್ವಾಸಮತ ಸಾಬೀತುಪಡಿಸಬೇಕಿರುವ 2 ದಿನಗಳ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಭಾನುವಾರ ಆರಂಭವಾಗಲಿದೆ. ಮೊದಲ ದಿನ ಸ್ಪೀಕರ್ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರತಿಯಾಗಿ ಶಿವಸೇನೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಹೀಗಾಗಿ ಮೊದಲ ದಿನವೇ ಶಿಂಧೆ-ಬಿಕೆಪಿ ಕೂಟ ಹಾಘೂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ನಡುವೆ ಮತ್ತೊಂದು ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.
ಶಾಸಕ ರಾಹುಲ್ ನರ್ವೇಕರ್ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದೆ. ರಾಜನ್ ಸಾಲ್ವಿ ಅವರನ್ನು ಶಿವಸೇನೆ ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಬಂಡಾಯ ಎದ್ದಿರುವ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಿವಸೇನೆ ಸಲ್ಲಿಸಿದ್ದ ಮನವಿ ಸುಪ್ರೀಂ ಕೋರ್ಚ್‌ನಲ್ಲಿ ವಿಚಾರಣೆ ಹಂತದಲಿರುವಾಗಲೇ, ಸ್ಪೀಕರ್ ಚುನಾವಣೆಯಲ್ಲಿ ಶಿವಸೇನೆಯ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಶಿವಸೇನೆಯ ಬಂಡಾಯ ಶಾಸಕರು ಸೇರಿದಂತೆ ಎಲ್ಲರಿಗೂ ಶಿವಸೇನೆ ವಿಪ್ ಜಾರಿ ಮಾಡಿದೆ.
ಬಂಡಾಯ ಶಾಸಕರು ಬಿಜೆಪಿ ಬೆಂಬಲದಿಂದ ಸರ್ಕಾರ ರಚನೆ ಮಾಡಿರುವುದರಿಂದ ಬಿಜೆಪಿ ನೇಮಕ ಮಾಡಿರುವ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಶಿವಸೇನೆ ಹೊರಡಿಸಿರುವ ವಿಪ್‌ಗೆ ಬಂಡಾಯ ಶಾಸಕರಾದ ಏಕನಾಥ ಶಿಂಧೆ ಬಣ ಏನು ಮಾಡುತ್ತದೆ ಎಂಬುದು ಕುತೂಹಲವಾಗಿದೆ.
ಗೋವಾದಿಂದ ಮುಂಬೈಗೆ ಬಂದ ಬಂಡಾಯ ಸೇನಾ ಶಾಸಕರು
ಭಾನುವಾರ ಮಹಾರಾಷ್ಟ್ರದಲ್ಲಿ ವಿಧಾನಸಭೆಯ ಅಧಿವೇಶನ ಆರಂಭವಾಗುವುದರಿಂದ ಅದರಲ್ಲಿ ಭಾಗಿಯಾಗಲು ಗೋವಾದಲ್ಲಿದ್ದ ಬಂಡಾಯ ಶಾಸಕರು ವಿಮಾನದ ಮೂಲಕ ಶನಿವಾರ ಮುಂಬೈಗೆ ಬಂದಿಳಿದಿದ್ದಾರೆ. ಗುವಾಹಟಿಯಿಂದ ಗೋವಾಗೆ ಬಂದಿದ್ದ ಬಂಡಾಯ ಶಾಸಕರು ತಮ್ಮ ನಾಯಕ ಏಕನಾಥ ಶಿಂಧೆ ಜೊತೆಗೆ ಡೋನಾ ಪೌಲಾ ಹೋಟೆಲ್‌ನಿಂದ ಐಶಾರಾಮಿ ಬಸ್‌ಗಳಲ್ಲಿ ವಿಮಾನ ನಿಲ್ದಾಣ ತಲುಪಿ, ಅಲ್ಲಿಂದ ಮುಂಬೈಗೆ ಪ್ರಯಾಣಿಸಿದ್ದಾರೆ. ಬಂಡಾಯ ಶಾಸಕರು ಮುಂಬೈಗೆ ಆಗಮಿಸುತ್ತಿರುವುದರಿಂದ ಅಹಿತಕರ ಘಟನೆಗಳನ್ನು ತಡೆಯಲು ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ.
