Asianet Suvarna News Asianet Suvarna News

ಡೆಲ್ಟಾ ಪ್ಲಸ್: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ!

* ಡೆಲ್ಟಾ+: ಮಹಾರಾಷ್ಟ್ರದಲ್ಲಿ ಮತ್ತೆ ಬಿಗಿ ನಿರ್ಬಂಧ ಜಾರಿ

* 6 ಜಿಲ್ಲೆಯಲ್ಲಿ ರೂಪಾಂತರಿ ಪತ್ತೆ, ಮಹಿಳೆ ಸಾವು

* ಇನ್ನು ನಿತ್ಯ ಸಂಜೆ 4 ಗಂಟೆಗೆ ಮಹಾರಾಷ್ಟ್ರ ಬಂದ್‌

Maharashtra tightens Covid curbs amid rising Delta Plus cases pod
Author
Bangalore, First Published Jun 26, 2021, 7:38 AM IST

ಮುಂಬೈ(ಜೂ.26): ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ಮಾರಕ ಡೆಲ್ಟಾಪ್ಲಸ್‌ ಕೊರೋನಾ ರೂಪಾಂತರಿ ತಳಿ ಪತ್ತೆಯಾಗಿದೆ. ಅದೇ ವೇಳೆ, ರತ್ನಗಿರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಶುಕ್ರವಾರ ಡೆಲ್ಟಾಪ್ಲಸ್‌ ರೂಪಾಂತರಿ ವೈರಸ್‌ನಿಂದ ಸಾವನ್ನಪ್ಪಿದ್ದು, ಇದು ರಾಜ್ಯದಲ್ಲಿ ಈ ವೈರಸ್‌ಗೆ ಮೊದಲ ಬಲಿಯಾಗಿದೆ. ಅದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ, ರಾಜ್ಯದಲ್ಲಿ ಅನ್‌ಲಾಕ್‌ ಪ್ರಕ್ರಿಯೆಗೆ ಬ್ರೇಕ್‌ ಹಾಕಿ, ರಾಜ್ಯಾದ್ಯಂತ ಮತ್ತೆ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ.

2ನೇ ಅಲೆ ಇಳಿಕೆಯಾದ ನಂತರ 5 ಹಂತದಲ್ಲಿ ಅನ್‌ಲಾಕ್‌ ಪ್ರಕ್ರಿಯೆಯನ್ನು ಸರ್ಕಾರ ಜಾರಿಗೊಳಿಸಿತ್ತು. ಆದರೆ, ಡೆಲ್ಟಾಪ್ಲಸ್‌ ವೈರಸ್‌ ಹರಡುವುದನ್ನು ತಡೆಯಲು ಈಗ ರಾಜ್ಯದಲ್ಲಿ ಏಕರೂಪದ ನಿರ್ಬಂಧಗಳನ್ನು ಜಾರಿಗೊಳಿಸಿದ್ದು, ಇಡೀ ರಾಜ್ಯ ಸಂಜೆ 4 ಗಂಟೆಗೆ ಬಂದ್‌ ಆಗಲಿದೆ. ಅದರನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳು ಸೀಮಿತ ಲಾಕ್ಡೌನ್‌ ಪ್ರಕ್ರಿಯೆಗೆ ಒಳಪಡಲಿವೆ. ಪಾಸಿಟಿವಿಟಿ ಪ್ರಮಾಣ ಎಷ್ಟೇ ಕಡಿಮೆ ಇದ್ದರೂ, ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ ಎಷ್ಟೇ ಖಾಲಿ ಇದ್ದರೂ ಎಲ್ಲಾ ಪ್ರದೇಶಗಳು 3ನೇ ಹಂತದ ಲಾಕ್ಡೌನ್‌ಗೆ ಒಳಪಡಲಿದೆ. ಮುಂದಿನ ಆದೇಶದವರೆಗೂ ಇದೇ ನಿಯಮಗಳು ಜಾರಿಯಲ್ಲಿರಲಿವೆ ಎಂದು ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಈ ಆದೇಶದ ಅನ್ವಯ, ಎಲ್ಲಾ ಆಡಳಿತಾತ್ಮಕ ಘಟಕಗಳು 3ನೇ ಹಂತದ ನಿಯಂತ್ರಣಕ್ಕೆ ಒಳಪಟ್ಟಿರಲಿವೆ. ಮಾಲ್‌, ಸಾರ್ವಜನಿಕ ಪ್ರದೇಶಗಳನ್ನು ತೆರೆಯಲು ನಿರ್ಧರಿಸಿದ್ದ ಹಳೆಯ ಆದೇಶ ರದ್ದಾಗಲಿದೆ. ಅಂಗಡಿ ಮುಂಗಟ್ಟುಗಳು, ಸಾರ್ವಜನಿಕ ಸ್ಥಳಗಳು ವಾರದ ಎಲ್ಲಾ ದಿನ ಸಂಜೆ 4 ಗಂಟೆಗೆ ಮುಚ್ಚಲಿವೆ. ಅತ್ಯಗತ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ವಾರಾಂತ್ಯ ಹೊರತುಪಡಿಸಿ ಉಳಿದ ದಿನ ಸಂಜೆಯ 4 ಗಂಟೆಯವರೆಗೆ ಕಾರ್ಯಾಚರಣೆ ನಡೆಸಬಹುದು. ರೆಸ್ಟೋರೆಂಟ್‌ಗಳು ಸಂಜೆ 4 ಗಂಟೆಯವರೆಗೆ ಶೇ.50ರಷ್ಟುಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬಹುದು. ಬಳಿಕ ಕೇವಲ ಪಾರ್ಸೆಲ್‌ ನೀಡಬಹುದು ಎಂದು ಸರ್ಕಾರ ಮಾಹಿತಿ ನೀಡಿದೆ.

ಜೊತೆಗೆ ಇನ್ನು ಮುಂದೆ ವಾರಾಂತ್ಯದ ಪಾಸಿಟಿವಿಟಿ ದರ ಪರಿಗಣನೆಗೆ ಕೇವಲ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಮಾತ್ರವೇ ಪರಿಗಣಿಸಲಾಗುವುದು, ಆ್ಯಂಟಿಜೆನ್‌ ಪರೀಕ್ಷೆಯ ವರದಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಗುರುವಾರ 9844 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, 197 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 60 ಲಕ್ಷಕ್ಕೆ ಮತ್ತು ಸಾವಿನ ಸಂಖ್ಯೆ 1.19 ಲಕ್ಷಕ್ಕೆ ಮುಟ್ಟಿದೆ. ಇನ್ನು 20ಕ್ಕೂ ಹೆಚ್ಚು ಜನರಲ್ಲಿ ಡೆಲ್ಟಾಪ್ಲಸ್‌ ವೈರಸ್‌ ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ.

3ನೇ ಹಂತ ಎಂದರೇನು?

ಜಿಲ್ಲೆ, ಮುನಿಸಿಪಲ್‌ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ವಾರಾಂತ್ಯದ ಪಾಸಿಟಿವಿಟಿ ದರ ಶೇ.5-10ರೊಳಗೆ ಇರುತ್ತದೆಯೋ, ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಬೆಡ್‌ ಶೇ.40ರಷ್ಟುಮಾತ್ರ ಭರ್ತಿಯಾಗಿರುತ್ತದೆಯೋ ಅಂಥ ಪ್ರದೇಶಗಳನ್ನು 3ನೇ ಹಂತದ ಪ್ರದೇಶಗಳೆಂದು ಗುರುತಿಸಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಅತ್ಯಗತ್ಯ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆ ಸಂಜೆ 4ಕ್ಕೆ ಬಂದ್‌ ಆಗುತ್ತವೆ. 1 ಮತ್ತು 2 ಹಂತದಲ್ಲಿ ಇನ್ನಷ್ಟುರಿಯಾಯಿತಿಗಳು ಲಭ್ಯವಿದ್ದವು.

Follow Us:
Download App:
  • android
  • ios