ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಹನುಮಾನ್ ದೇವಸ್ಥಾನದಲ್ಲಿ ನಿರ್ಮಾಣ ಹಂತದ ಮೇಲ್ಛಾವಣಿ ಕುಸಿದು 6 ಭಕ್ತರು ಸಾವನ್ನಪ್ಪಿದ್ದಾರೆ. ಪ್ರಸಾದ ಸ್ವೀಕರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮುಂಬೈ: ಮಹಾರಾಷ್ಟ್ರದ ಪರಭಣಿ ಜಿಲ್ಲೆಯ ಆಂಜನೇಯನ ದೇವಸ್ಥಾನದಲ್ಲಿ ದೊಡ್ಡ ದುರಂತವೊಂದು ಸಂಭವಿಸಿದೆ. ಪರಭಣಿ ಜಿಲ್ಲೆಯ ಯಶವಾಡಿ ಗ್ರಾಮದಲ್ಲಿ ನಿರ್ಮಾಣ ಹಂತದ ಹನುಮಾನ್ ದೇವಸ್ಥಾನದ ಮೇಲ್ಛಾವಣಿ ಕುಸಿದು 6 ಭಕ್ತರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ದೇವಸ್ಥಾನದ ಮುಂದೆ ಸಭಾಮಂಟಪ ನಿರ್ಮಾಣದ ಕೆಲಸ ನಡೆಯುತ್ತಿತ್ತು. ಇದೇ ಸಮಯದಲ್ಲಿ, ಇದ್ದಕ್ಕಿದ್ದಂತೆ ದೇವಸ್ಥಾನದ ಮೇಲ್ಛಾವಣಿ ಕುಸಿದುಬಿದ್ದಿದೆ. ಭಕ್ತರು ಪ್ರಸಾದ ಸ್ವೀಕರಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಅವರೆಲ್ಲರೂ ಅವಶೇಷಗಳಡಿ ಸಿಲುಕಿಕೊಂಡರು. ಈ ಎಲ್ಲಾ ದೃಶ್ಯಗಳು ಗರ್ಭಗುಡಿ ಮುಂಭಾಗ ಅಳವಡಿಸಲಾಗಿದ್ದ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದ ಸ್ಥಳೀಯರು
ಮೇಲ್ಛಾವಣಿ ಕುಸಿಯುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಜನರ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಅಲ್ಲಿನ ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದರು. ಯಾಕಂದ್ರೆ, ಹತ್ತಾರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ, ಪೊಲೀಸರು ಮತ್ತು ಸ್ಥಳೀಯ ಆಡಳಿತದ ತಂಡ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಸದ್ಯ, ಅವಶೇಷಗಳಡಿಯಿಂದ 6 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಗಾಯಗೊಂಡ 10 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಘಟನೆ ನಡೆದಾಗ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಆ ಭಯಾನಕ ಕ್ಷಣವನ್ನು ವಿವರಿಸಿದ್ದಾರೆ. 'ದೇವಸ್ಥಾನದ ಮುಂದೆ ಸಭಾ ಮಂಟಪದ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮಳೆ ಮತ್ತು ತೇವಾಂಶದಿಂದಾಗಿ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿದುಬಿತ್ತು. ಕೆಲವರ ಮೇಲೆ ಸಿಮೆಂಟ್ ಕಲ್ಲುಗಳು ಬಿದ್ದರೆ, ಇನ್ನು ಕೆಲವರ ಮೇಲೆ ಕಬ್ಬಿಣದ ರಾಡ್‌ಗಳು ಬಿದ್ದವು. ನೋಡನೋಡುತ್ತಿದ್ದಂತೆ ಎಲ್ಲೆಡೆ ಗೊಂದಲದ ವಾತಾವರಣ ನಿರ್ಮಾಣವಾಯಿತು' ಎಂದು ಹೇಳಿದ್ದಾರೆ.
ದೇವಸ್ಥಾನದಲ್ಲಿದ್ದ ಮತ್ತೊಬ್ಬ ಯುವಕ, 'ಅನಾಹುತ ಎಷ್ಟು ಭಯಾನಕವಾಗಿತ್ತು ಅಂದ್ರೆ, ಏನಾಯ್ತು ಅಂತ ಜನರಿಗೆ ಅರ್ಥವಾಗಲಿಲ್ಲ. ಶನಿವಾರ ಆಗಿದ್ದರಿಂದ ದೇವಸ್ಥಾನದಲ್ಲಿ ಕೀರ್ತನೆ ಮತ್ತು ಮಹಾಪ್ರಸಾದ ವಿತರಣೆ ಇತ್ತು. ಹೀಗಾಗಿ, ಭಾರಿ ಜನಸಂದಣಿ ಇತ್ತು. ಜನರು ಪ್ರಸಾದಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗ, ಅವರ ಮೇಲೆಯೇ ಮೇಲ್ಛಾವಣಿ ಕುಸಿದುಬಿತ್ತು' ಎಂದು ತಿಳಿಸಿದರು.


