ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ; ಡಿಸಿಎಂ ಅಜಿತ್ ಪವಾರ್ ಬಣದ ನಾಯಕರು ಘರ್ ವಾಪ್ಸಿ!
ವಿಧಾನಸಭಾ ಚುನಾವಣೆಗೂ ಮುನ್ನವೇ ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿದೆ. ಚುನಾವಣೆಗೂ ಮುನ್ನವೇ ಅಜಿತ್ ಪವಾರ್ ಬಣಕ್ಕೆ ಬಿಗ್ ಶಾಕ್ ಎದುರಾಗಿದೆ.
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ (Maharashtra Politics) ಘರ್ ವಾಪ್ಸಿ (Ghar Vapsi) ಶುರುವಾಗಿದೆ. ಡಿಸಿಎಂ ಅಜಿತ್ ಪವಾರ್ (DCM Ajit Pawar) ನೇತೃತ್ವದ ಎನ್‌ಸಿಪಿಯ ನಾಲ್ವರು ನಾಯಕರು (NCP Leaders) ಪಕ್ಷದಿಂದ ಹೊರ ಬಂದಿದ್ದಾರೆ ಎಂದು ವರದಿಯಾಗಿದೆ. ಪಿಂಪ್ರಿ-ಚಿಂಚ್ವಾಡದ ಈ ನಾಲ್ಕು ನಾಯಕರು, ಶೀಘ್ರದಲ್ಲಿಯೇ ಶರದ್ ಪವಾರ್ (Sharad Pawar) ನೇತೃತ್ವದ ಎನ್‌ಸಿಪಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಕಳಪೆ ಪ್ರದರ್ಶನ ಹಿನ್ನೆಲೆ ಸ್ಥಳೀಯ ನಾಯಕರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ (Maharashtra Assembly Election) ನಡೆಯಲಿದ್ದು, ಈ ಹಿನ್ನೆಲೆ ಎಲ್ಲಾ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಚುನಾವಣೆಗೂ ಮುನ್ನವೇ ಮಹಾ ರಾಜಕೀಯ ಅಂಗಳದಲ್ಲಿ ರಣಕಹಳೆ ಮೊಳಗಿದೆ.
ಅಜಿತ್ ಪವಾರ್ ಬಣದ ಜೊತೆ ಗುರುತಿಸಿಕೊಂಡಿದ್ದ ಪಿಂಪ್ರಿ-ಚಿಂಚ್ವಾಡ ಘಟಕದ ಅಜಿತ್ ಗವಹಾನೆ, ವಿದ್ಯಾರ್ಥಿ ಘಟಕದ ಮುಖ್ಯಸ್ಥ ಯಶ್ ಸಾನೆ, ಮಾಜಿ ಕಾರ್ಪೋರೇಟರ್‌ಗಳಾದ ರಾಹುಲ್ ಭೋಸ್ಲೆ ಮತ್ತು ಪಂಕಜ್ ಭಾಲ್ಕೇರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈಗಗಾಲೇ ಅಜಿತ್ ಪವಾರ್‌ಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎಂದು ವರದಿಯಾಗಿದೆ.
ಯಾಕೆ ಈ ರಾಜೀನಾಮೆ?
ಇಂಡಿಯಾ ಟುಡೇ ವರದಿ ಪ್ರಕಾರ, ರಾಜೀನಾಮೆ ನೀಡಿರುವ ಅಜಿತ್ ಗವಹಾನೆ ಭೋಸರಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಕ್ಷೇತ್ರದಿಂದ ಕಳೆದ ಎರಡು ಬಾರಿ ಬಿಜೆಪಿ ಮಹೇಶ್ ಲಾಂಡ್ಗೆ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅಜಿತ್ ಪವಾರ್ ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಜೊತೆಯಾಗಿಯೇ ಹೋಗಲಿದ್ದಾರೆ. ಕ್ಷೇತ್ರ ಹಂಚಿಕೆ ವೇಳೆ ಭೋಸರಿ ಕ್ಷೇತ್ರ ಬಿಜೆಪಿಗೆ ಹೋಗಲಿದೆ ಎಂಬವುದು ಬಹುತೇಕ ಖಾತ್ರಿಯಾದ ಹಿನ್ನೆಲೆ ಅಜಿತ್ ಗವಹಾನೆ ರಾಜೀನಾಮೆ ನೀಡಿದ್ದಾರೆ. ಪಿಂಪ್ರಿ-ಚಿಂಚ್ವಾಡ ಭಾಗದಲ್ಲಿ ಎನ್‌ಸಿಪಿ ತನ್ನದೇ ಆದ ಪ್ರಾಬಲ್ಯವನ್ನು ಹೊಂದಿದೆ.
ಲೋಕ ಸಮರ ಫಲಿತಾಂಶ ಎಫೆಕ್ಟ್; ಮಹಾರಾಷ್ಟ್ರ ಬಿಜೆಪಿ ರಾಜಕೀಯದಲ್ಲಿ ಭಾರೀ ಬೆಳವಣಿಗೆ
ಈ ಹಿಂದೆಯೇ ಸುಳಿವು ನೀಡಿದ್ದ ಶರದ್ ಪವಾರ್!
ಕೆಲ ತಿಂಗಳ ಹಿಂದೆಯಷ್ಟೇ ಅಜಿತ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ, ಪಕ್ಷಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಸುಳಿವನ್ನು ನೀಡಿದ್ದರು. ಅಜಿತ್ ಬಣದ ಕೆಲ ಶಾಸಕರು ತಮ್ಮ ಪಕ್ಷದ ಹಿರಿಯ ನಾಯಕ ಜಯಂತ್ ಪಾಟೀಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ಶರದ್ ಪವಾರ್ ಹೇಳಿಕೊಂಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಅಜಿತ್ ಪವಾರ್, ಯಾರು ತಮ್ಮ ಬಣ ತೊರೆಯಲ್ಲ ಎಂದು ಸ್ಪಷ್ಟಪಡಿಸಿದ್ದರು.
ಘರ್ ವಾಪ್ಸಿ ಆಗ್ತಾರಾ ಛಗನ್ ಭುಜ್‌ಬುಲ್?
ಮಹಾರಾಷ್ಟ್ರದ ಸರ್ಕಾರದಲ್ಲಿ ಸಚಿವರಾಗಿರುವ ಮತ್ತು ಹಿರಿಯ ಎನ್‌ಸಿಪಿ ನಾಯಕ ಛಗನ್ ಭುಜ್‌ಬಲ್, ಅಜಿತ್ ಪವಾರ್ ಬಣವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಮಹಾ ವಿಕಾಸ್ ಅಘಾಡಿ ಕೂಟದ ಶಿವಸೇನೆಯ ಹಿರಿಯ ನಾಯಕರೊಬ್ಬರನ್ನು ಛಗನ್ ಭುಜ್‌ಬುಲ್ ಭೇಟಿಯಾಗಿ ಮಾತಕತೆ ನಡೆಸಿದ್ದರು. ರಾಜ್ಯಸಭೆಗೆ ಪತ್ನಿ ಸುನೇತ್ರಾ (Sunetra Pawar) ನಾಮನಿರ್ದೇಶನ ಮಾಡಿದ್ದಕ್ಕೆ ಅಜಿತ್ ಪವಾರ್ ಮೇಲೆ ಛಗನ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಬಾರಾಮತಿ ಲೋಕಸಭಾ (Baramati Lok Sabha Seat) ಕ್ಷೇತ್ರದಲ್ಲಿ ಸುಪ್ರಿಯಾ ಸುಳೆ (Suprita Sule) ವಿರುದ್ಧ ಸ್ಪರ್ಧಿಸಿದ್ದ ಸುನೇತ್ರಾ ಸೋತಿದ್ದರು. ಭುಜ್‌ಬಲ್ ಒಬಿಸಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ರಾಜ್ಯಸಭೆ ಪ್ರವೇಶಿಸಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಕನಸು ಕಂಡಿದ್ದರು.
ಬಿಜೆಪಿ-ಸೇನೆಗೆ ಭಾರಿ ಜಯ ಬಿಜೆಪಿ ಕೂಟಕ್ಕೆ 11, ಅಘಾಡಿಗೆ ಕೇವಲ 2 ಸೀಟು
ಲೋಕ ಸಮರದಲ್ಲಿ ಅಘಾಡಿಗೆ 30 ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ 40ರಲ್ಲಿ 30 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿತ್ತು. ಇನ್ನು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಯಗಡದಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದರೆ, ಶರದ್ ಪವಾರ್ ಬಣ ಎಂಟು ಸ್ಥಾನಗಳನ್ನು ಗಳಿಸಿತ್ತು.