ಮಹಾರಾಷ್ಟ್ರದ ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದಲ್ಲಿ ಪವಾರ್‌ ವರ್ಸಸ್‌ ಪವಾರ್‌ ಭಿನ್ನಮತ ಜೋರಾಗಿದೆ. ಸುನೀಲ್‌ ತಟ್ಕರೆ ಹಾಗೂ ಪ್ರಫುಲ್‌ ಪಟೇಲ್‌ರನ್ನು ಎನ್‌ಸಿಪಿ ರಾಷ್ಟ್ರಾಧ್ಯಕ್ಷ ಶರದ್‌ ಪವಾರ್‌ ಪಕ್ಷದಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲಿಯೇ, ಸುನೀಲ್‌ ತಟ್ಕರೆಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಪ್ರಫುಲ್‌ ಪಟೇಲ್‌ ನೇಮಿಸಿದ್ದಾರೆ.

ಮುಂಬೈ (ಜು.3): ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಎರಡು ಹೋಳಾಗಿದೆ. ಒಂದೆಡೆ ಅಜಿತ್‌ ಪವಾರ್‌ ನೇತೃತ್ವದಲ್ಲಿ ಕೆಲವೊಂದಿಷ್ಟು ನಾಯಕರು ಅಧಿಕಾರರೂಢ ಬಿಜೆಪಿ-ಶಿವಸೇನೆಯನ್ನು ಸೇರಿಕೊಂಡಿದ್ದರೆ, ಎನ್‌ಸಿಪಿ ಅಧಿನಾಯಕ ಹಾಗೂ ರಾಷ್ಟ್ರಧ್ಯಕ್ಷ ಶರದ್‌ ಪವಾರ್‌ ಇದು ಸಾಧ್ಯವೇ ಇಲ್ಲ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರದಲ್ಲಿ ನೂತನ ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಅಧಿಕಾರ ವಹಿಸಿಕೊಂಡಿದ್ದಾರೆ. ಶರದ್‌ ಪವಾರ್‌, ಸುನೀಲ್‌ ತಟ್ಕರೆ ಹಾಗೂ ಪ್ರಫುಲ್‌ ಪಟೇಲ್‌ರನ್ನು ಪಕ್ಷ ವಿರೋಧಿ ಚಟುವಟಿಕೆಯ ಕಾರಣಕ್ಕಾಗಿ ಎನ್‌ಸಿಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಘೋಷಣೆ ಮಾಡಿದ ಬೆನ್ನಲ್ಲಿಯೇ, ಅಜಿತ್‌ ಪವರ್‌ ಬಣದ ಎನ್‌ಸಿಪಿ ನಾಯಕ ಪ್ರಫುಲ್‌ ಪಟೇಲ್‌, ಸುನೀಲ್‌ ತಟ್ಕರೆಯನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಘೋಷಣೆ ಮಾಡಿದರು. ಅದೊಂದಿಗರ ಅನಿಲ್‌ ಭಾಯಿದಾಸ್‌ ಪಾಟೀಲ್‌ ಅವರನ್ನು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಎನ್‌ಸಿಪಿಯ ಮುಖ್ಯ ವಿಪ್‌ ಆಗಿ ನೇಮಿಸಲಾಗಿದೆ ಎಂದೂ ಪ್ರಫುಲ್‌ ಪಟೇಲ್‌ ತಿಳಿಸಿದ್ದಾರೆ.

ಭಾನುವಾರ ಅಜಿತ್‌ ಪವಾರ್‌ರೊಂದಿಗೆ ಛಗನ್ ಭುಜಬಲ್, ದಿಲೀಪ್ ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ಅದಿತಿ ತಟ್ಕರೆ, ಸಂಜಯ್ ಬಾಬುರಾವ್ ಬನ್ಸೋಡೆ, ಅನಿಲ್ ಭಾಯಿದಾಸ್‌ ಪಾಟೀಲ್, ಧರ್ಮರಾವ್ ಅತ್ರಮ್ ಮತ್ತು ಹಸನ್ ಮುಶ್ರಿಫ್ ಸೇರಿದಂತೆ ಎಂಟು ಎನ್‌ಸಿಪಿ ನಾಯಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸೋಮವಾರ ಮುಂಬೈನಲ್ಲಿ ಅಜಿತ್‌ ಪವಾರ್‌ ಬಣ ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ಪ್ರಕಟಿಸಿತು. ಮುಂದಿನ ಸಂಪುಟ ವಿಸ್ತರಣೆಯಲ್ಲಿ ಇನ್ನಷ್ಟು ಸಚಿವರನ್ನು ಸೇರಿಸಿಕೊಳ್ಳಲಾಗುವುದು. "ನಾವು ಎನ್‌ಸಿಪಿಯ ಬಹುತೇಕ ಎಲ್ಲಾ ಶಾಸಕರೊಂದಿಗೆ ಶಿಂಧೆ-ಫಡ್ನವಿಸ್‌ ಸರ್ಕಾರದೊಂದಿಗೆ ಬರಲು ನಿರ್ಧಾರ ತೆಗೆದುಕೊಂಡಿದ್ದೇವೆ. ನಾವು ಪ್ರಮಾಣ ವಚನ ಸ್ವೀಕರಿಸಿದ್ದೇವೆ ಮತ್ತು ಮುಂದಿನ ವಿಸ್ತರಣೆಯಲ್ಲಿ ಇತರ ಕೆಲವು ಮಂತ್ರಿಗಳನ್ನು ಸೇರಿಸಲಾಗುವುದು' ಎಂದು ಮಾಹಿತಿ ನೀಡಿದರು.

ಶರದ್‌ ಪವಾರ್‌ ‘ಪುತ್ರಿ ಪ್ರೇಮ’ ಅಜಿತ್ ಬಂಡಾಯಕ್ಕೆ ಕಾರಣ: 2 ವರ್ಷದಲ್ಲಿ 2ನೇ ಮಹಾ ವಿಪಕ್ಷ ಹೋಳು; ವಿಭಜನೆಯ ಲಾಭ ಬಿಜೆಪಿಗೆ

ಪಕ್ಷದ (ಎನ್‌ಸಿಪಿ) ಎಲ್ಲಾ ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ನಮ್ಮೊಂದಿಗಿದ್ದಾರೆ ಅದಕ್ಕಾಗಿಯೇ ನಾನು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದು ಅವರು ಹೇಳಿದರು.

ಅಜಿತ್‌ ಪವಾರ್‌ ಸೇರಿ 9 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಎನ್‌ಸಿಪಿ: ಚುನಾವಣಾ ಆಯೋಗಕ್ಕೂ ಮಾಹಿತಿ

ಎನ್‌ಸಿಪಿ ಕಾರ್ಯಾಧ್ಯಕ್ಷೆ ಹಾಗೂ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ, ಸಂಸದರಾದ ಪ್ರಫುಲ್ ಪಟೇಲ್‌ ಹಾಗೂ ಸುನೀಲ್‌ ತಟ್ಕರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು. ಇದರ ಬೆನ್ನಲ್ಲಿಯೇ ಎನ್‌ಸಿಪಿ, ಸುನೀಲ್‌ ತಟ್ಕರೆ ಹಾಗೂ ಪ್ರಫುಲ್‌ ಪಟೇಲ್‌ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ತೀರ್ಮಾನ ಮಾಡಿದೆ.