* ವಿಶ್ವಾಸಮತ ಯಾಚನೆಗೆ ಮಧ್ಯಂತರ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್‌* ಶೀಘ್ರ ವಿಶ್ವಾಸಮತ ಪರೀಕ್ಷೆ? ನಾಳೆ ಶಿಂಧೆ ಬಣ ಮುಂಬೈಗೆ* ಈ ಬಗ್ಗೆ ರಾಜ್ಯಪಾಲಗೆ ಕೋರಿಕೆ ಸಾಧ್ಯತೆ

ಮುಂಬೈ(ಜೂ.28): ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿರುವ ಕಾರಣ, ಕೋರ್ಟ್‌ನ ಮುಂದಿನ ವಿಚಾರಣೆ ನಿಗದಿ ಆಗಿರುವ ಜುಲೈ 11ರೊಳಗೆ ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು, ಉದ್ಧವ್‌ ಠಾಕ್ರೆ ಸರ್ಕಾರಕ್ಕೆ ಸೂಚಿಸಬಹುದು ಎಂದು ಮೂಲಗಳು ಹೇಳಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಬುಧವಾರ ಬಂಡಾಯ ಶಿವಸೇನೆ ನಾಯಕ ಏಕನಾಥ ಶಿಂಧೆ ಬಣ ಗುವಾಹಟಿಯಿಂದ ಮುಂಬೈಗೆ ಮರಳಬಹುದು. ಆಗ ಸುಪ್ರೀಂ ಕೋರ್ಚ್‌ ಆದೇಶವನ್ನೇ ಆಧಾರವಾಗಿ ಇರಿಸಿಕೊಂಡು ವಿಶ್ವಾಸಮತ ಯಾಚನೆಗೆ ಸದನ ಕರೆಯಿರಿ ಹಾಗೂ ವಿಧಾನಸಭಾಧ್ಯಕ್ಷರ ಹುದ್ದೆ ಖಾಲಿ ಇರುವ ಕಾರಣ ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಿ ಎಂದು ಕೋರಬಹುದು. ಶಿಂಧೆ ಬಣ ಅವಿಶ್ವಾಸ ನಿರ್ಣಯಕ್ಕೂ ಮುಂದಾಗಬಹುದು. ಇದು ಆಗದೇ ಹೋದರೆ ಬಿಜೆಪಿಯೇ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಬಹುದು. ಈ ಕೋರಿಕೆ ಆಧರಿಸಿ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು, ಮೊದಲು ಹಂಗಾಮಿ ಸಭಾಧ್ಯಕ್ಷರನ್ನು ನೇಮಿಸಬಹುದು ಹಾಗೂ ನಂತರ ವಿಶ್ವಾಸಮತ ಯಾಚನೆಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಗೆ ಸೂಚಿಸಬಹುದು’ ಎಂದು ಮೂಲಗಳು ಹೇಳಿವೆ.

ಹಿಂದಿನ ಸಭಾಧ್ಯಕ್ಷ ನಾನಾ ಪಟೋಲೆ ರಾಜೀನಾಮೆ ನಂತರ ವಿಧಾನಸಭೆ ಅಧ್ಯಕ್ಷ ಹುದ್ದೆ ಖಾಲಿ ಇದೆ. ಹೀಗಾಗಿ ಉಪ ಸ್ಪೀಕರ್‌ ನರಹರಿ ಜೀರ್ವಾಲ್‌ ಅವರೇ ಸ್ಪೀಕರ್‌ ಪದವಿ ನಿರ್ವಹಿಸುತ್ತಿದ್ದಾರೆ. ಇನ್ನು ರಾಜ್ಯಪಾಲರಿಗೆ ಸಂವಿಧಾನದ 175(2) ಪರಿಚ್ಛೇದದ ಅಡಿ ಸದನ ಕರೆದು ವಿಶ್ವಾಸಮತ ಸಾಬೀತಿಗೆ ಸರ್ಕಾರಗಳಿಗೆ ಸೂಚಿಸಲು ಅಧಿಕಾರವಿದೆ.