ಕೋಲ್ಕತ್ತಾದಲ್ಲಿ ಕಾಳಿ ದೇವಿಯ ವೇಷದಲ್ಲಿ ಮಾಡಿದ ನೃತ್ಯವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ನೃತ್ಯದ ವೇಷಭೂಷಣ ಮತ್ತು ಕೆಲವು ಸ್ಟೆಪ್ಸ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಕಾರ್ಯಕ್ರಮ ಆಯೋಜಿಸಿದ್ದ ಕಲಾತಂಡ ಕ್ಷಮೆ ಕೇಳಿದೆ.

ಕೋಲ್ಕತ್ತಾದಲ್ಲಿ ಕಾಳಿ ದೇವಿಯ ವೇಷ ಧರಿಸಿ ಮಾಡಿದ ನೃತ್ಯವೊಂದು ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಳಿಯ ವೇಷಭೂಷಣ, ಕೆಲವು ಡ್ಯಾನ್ಸ್ ಸ್ಟೆಪ್ಸ್‌ಗಳು ಅವಮಾನಕಾರಿ ಎಂದು ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಕಾರ್ಯಕ್ರಮ ಆಯೋಜಿಸಿದ್ದ ಕಲಾತಂಡದ ಕಲಾವಿದರು ಮತ್ತು ಸಂಘಟಕರು ಕ್ಷಮೆಯಾಚಿಸಿದ್ದಾರೆ.

ನೃತ್ಯ ಕಾರ್ಯಕ್ರಮದಲ್ಲಿ ಕಾಳಿ ವೇಷ

ಆಗಸ್ಟ್ 8ರಂದು ಕೋಲ್ಕತ್ತಾದ ತಾಲಾ ಪಾರ್ಕ್ ಪ್ರದೇಶದಲ್ಲಿರುವ ಮೋಹಿತ್ ಮಂಚ್ ಆಡಿಟೋರಿಯಂನಲ್ಲಿ 'ಮಹಾವಿದ್ಯಾ' ಎಂಬ ಹೆಸರಿನಲ್ಲಿ ಈ ನೃತ್ಯ ನಾಟಕವನ್ನು ಆಯೋಜಿಸಲಾಗಿತ್ತು. 'Nitya–Faculty of Sight' ಎಂಬ ನೃತ್ಯ ತಂಡ ಈ ಕಾರ್ಯಕ್ರಮವನ್ನು ನಡೆಸಿತ್ತು. ಕಾಳಿ ಸೇರಿದಂತೆ ದೇವತೆಗಳ ವಿವಿಧ ರೂಪಗಳನ್ನು ನೃತ್ಯದ ಮೂಲಕ ಪ್ರದರ್ಶಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮ ನಡೆದಾಗ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಈ ನೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಶುರುವಾದ ನಂತರ ವಿವಾದ ಹುಟ್ಟಿಕೊಂಡಿತು.

Scroll to load tweet…

ನೆಟ್ಟಿಗರಿಂದ ಪರ-ವಿರೋಧ ಚರ್ಚೆ

ವರದಿಗಳ ಪ್ರಕಾರ ನೃತ್ಯ ಮಾಡಿದ ಕಲಾವಿದನ ವೇಷಭೂಷಣ ಮತ್ತು ಕೆಲವು ಸ್ಟೆಪ್ಸ್‌ಗಳೇ ಈ ವಿವಾದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ದೇವತೆಯ ರೂಪವನ್ನು ಪ್ರದರ್ಶಿಸುವಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಿತ್ತು ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಇನ್ನೊಂದು ಕಡೆ ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಕಾಳಿ ಮತ್ತು ಇತರ ದೇವತೆಗಳ ಸಾಂಪ್ರದಾಯಿಕ ಚಿತ್ರಣದಲ್ಲಿ, ಅಂದರೆ ದೇವಸ್ಥಾನಗಳ ಶಿಲ್ಪಕಲೆಗಳಲ್ಲಿ ಕಡಿಮೀ ಬಟ್ಟೆಗಳಿರುವುದನ್ನು ಉದಾಹರಣೆಯಾಗಿ ನೀಡಿದ್ದಾರೆ. ಹಾಗಾಗಿ ಈ ಪ್ರದರ್ಶನವನ್ನು ಸಂಪೂರ್ಣವಾಗಿ ಅಶ್ಲೀಲ ಎಂದು ಹೇಳಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

ಸಂಘಟಕರಿಂದ ಸ್ಪಷ್ಟನೆ

ವಿವಾದ ಭುಗಿಲೇಳುತ್ತಿದ್ದಂತೆ ಸಂಘಟಕರು ಒಂದು ಸ್ಪಷ್ಟನೆ ನೀಡಿದ್ದಾರೆ. ಪ್ರದರ್ಶನವು ನಾವು ಅಂದುಕೊಂಡ ರೀತಿಯಲ್ಲಿ ಮೂಡಿಬರಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ವೇಷಭೂಷಣ ಮತ್ತು ನೃತ್ಯ ಸಂಯೋಜನೆ ಸಂಪೂರ್ಣವಾಗಿ ಕಲಾವಿದನ ವೈಯಕ್ತಿಕ ನಿರ್ಧಾರವಾಗಿತ್ತು. ಕೊನೆಯ ಹಂತದ ವೇಷಭೂಷಣವನ್ನು ನಾವು ರಿಹರ್ಸಲ್ ಸಮಯದಲ್ಲಿ ನೋಡಿರಲಿಲ್ಲ ಎಂದು ಸಂಘಟಕರು ಹೇಳಿದ್ದಾರೆ. ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಆಗದಂತೆ ನೋಡಿಕೊಳ್ಳುತ್ತೇವೆ. ಕಾರ್ಯಕ್ರಮಕ್ಕೂ ಮುನ್ನವೇ ವೇಷಭೂಷಣ ಮತ್ತು ವೇದಿಕೆ ಪ್ರದರ್ಶನವನ್ನು ಪರಿಶೀಲಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.