ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಹಾಗೂ ಟಿಎಂಸಿ ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರು ರಾಂಪುರ್ಹತ್‌ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರವೊಂದು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಸಾವಿನ ನಿಖರ ಕಾರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ ಅವರು ಭಾನುವಾರ ಬೆಳಿಗ್ಗೆ ಬಿರ್ಭುಮ್ ಜಿಲ್ಲೆಯ ರಾಂಪುರ್ಹತ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಾಂಪುರ್ಹತ್‌ನ ವಾರ್ಡ್ ಸಂಖ್ಯೆ 5 ರ ಹಟತಲ ಪದಾದಲ್ಲಿರುವ ಅವರ ನಿವಾಸದ ಬಳಿಯ ಪಕ್ಷದ ಕಚೇರಿಯಲ್ಲಿ ಬ್ಯಾನರ್ಜಿ ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನಾ ಸ್ಥಳದಿಂದ ಆತ್ಮHತ್ಯೆ ಪತ್ರವೊಂದನ್ನು ವಶಪಡಿಸಿಕೊಳ್ಳಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ, ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಹಾಗೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವ
ಆಶಿಶ್ ಬ್ಯಾನರ್ಜಿ ಅವರು ರಾಂಪುರ್ಹತ್ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಶಾಲಾ ಶಿಕ್ಷಣ, ಕೃಷಿ ಮತ್ತು ಆಯುಷ್ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ರಾಜ್ಯ ವಿಧಾನಸಭೆಯ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಬ್ಯಾನರ್ಜಿ ಅವರು ಬಿಜೆಪಿ ಅಭ್ಯರ್ಥಿ ಧ್ರುಬಾ ಸಹಾ ವಿರುದ್ಧ ಪರಾಭವಗೊಂಡಿದ್ದರು.
ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಕಚೇರಿಯ ಬಳಿ ಜಮಾಯಿಸಿದ್ದು, ಇಡೀ ಘಟನೆಯಿಂದ ತೃಣಮೂಲ ಕಾಂಗ್ರೆಸ್‌ನ ಎರಡೂ ಬಣದ ಮುಖಂಡರು ಹಾಗೂ ಬೆಂಬಲಿಗರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


