ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಮೂವರು ಸಹೋದರರು ಮಹಾರಾಷ್ಟ್ರ ಪೊಲೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಗಮನಸೆಳೆದಿದ್ದಾರೆ.
ಮುಂಬೈ (ಆ.4): ಮಹಾರಾಷ್ಟ್ರದ ಪರ್ಭಾನಿಯ ಸಣ್ಣ ಹಳ್ಳಿಯೊಂದರ ಮೂವರು ಅನಾಥ ಸಹೋದರರಾದ ಕೃಷ್ಣ, ಓಂಕಾರ್ ಮತ್ತು ಆಕಾರ್ ಶಿಸೋಡೆ ಅವರು ಕಾನ್ಸ್‌ಟೇಬಲ್‌ಗಳಾಗಲು ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾರೆ ತಂದೆ ತಾಯಿ ಇಲ್ಲದೇ ಇದ್ದರೂ, ತೀವ್ರ ಸಂಕಷ್ಟಗಳನ್ನು ಎದುರಿಸಿಯೂ ಪರಿಶ್ರಮದಿಂದ ಪೊಲೀಸ್ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಸ್ಫೂರ್ತಿಯಾಗಿದ್ದಾರೆ. ಮೂವರು ಶಿಸೋಡೆ ಸಹೋದರರು 20ರ ಆಸುಪಾಸಿನಲ್ಲಿದ್ದಾರೆ. ಬಾಲ್ಯದಲ್ಲಿಯೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಳ್ಳುವ ವೇಳೆ ಇವರು ಗಂಗಾಹೆಡ್ ತಾಲೂಕಿನ ಮಖ್ನಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿದ್ದರು. ರೈತರಾಗಿದ್ದ ಇವರ ತಂದೆ ತಾಯಿ ಆರ್ಥಿಕ ಮುಗ್ಗಟ್ಟಿನಿಂದ 2012ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಈ ಮೂವರು ಸಹೋದರರು ಪರ್ಭಾನಿಯ ಅನಾಥಾಶ್ರಮಕ್ಕೆ ದಾಖಲಾಗಿದ್ದರು. ಅಲ್ಲಿಂದಲೇ ಓದು ಮುಂದುವರಿಸಿದ್ದ ಈ ಮೂವರು ಈಗ ಪೊಲೀಸ್ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಇಡೀ ಗ್ರಾಮವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡಾಗ ಇವರಿಗೆ ಅವರ ಮಹತ್ವದ ಅರಿವೇ ಆಗಿರಲಿಲ್ಲ/ ಅನಾಥಾಶ್ರಮದಲ್ಲಿ ಪ್ರತಿದಿನವೂ ಕಷ್ಟವನ್ನೇ ಎದುರಿಸಿದ ಇವರು ದಿನಗಳು ಕಳೆದಂತೆ ಈ ಪರಿಸ್ಥಿತಿಯಿಂದ ಹೊರಬರಲು ಓದುವುದೊಂದೇ ಅನಿವಾರ್ಯ ಎನ್ನುವುದನ್ನು ಅರಿತುಕೊಂಡಿದ್ದರು.
ತಮ್ಮಂದಿರರಾದ ಓಂಕಾರ್ ಹಾಗೂ ಆಕಾರ್ ಅವರ ಜೊತೆ ಹೆತ್ತವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾಗ ನಾನು 6ನೇ ಕ್ಲಾಸ್‌ನಲ್ಲಿದ್ದೆ ಎಂದು ಹಿರಿಯವನಾದ ಕೃಷ್ಣ ಹೇಳಿದ್ದಾರೆ. 'ನಮ್ಮ ಅದೃಷ್ಟ ಇಷ್ಟು ಕೆಟ್ಟದಾಗಿತ್ತೇ ಎನ್ನುವುದನ್ನೂ ಅರ್ಥಮಾಡಿಕೊಳ್ಳಲು ನಾನು ಬಹಳ ಕಿರಿಯವನಾಗಿದ್ದೆ. ಹೆತ್ತವರನ್ನು ಇದ್ದಕ್ಕಿದ್ದಂತೆ ಕಳೆದುಕೊಂಡಿದ್ದೆವು. ನಮ್ಮೊಂದಿಗೆ ಅವರು ಇಲ್ಲ ಎನ್ನುವ ನೋವಿನ ಭಾವನೆಯಷ್ಟೇ ಆಗ ನಮ್ಮಲ್ಲಿತ್ತು. ನಮ್ಮ ಸಂಬಂಧಿಗಳು ನಮ್ಮನ್ನು ಪರ್ಭಾನಿ ಮೂಲದ ಅನಾಥಾಶ್ರಮಕ್ಕೆ ಕಳುಹಿಸುವ ನಿರ್ಧಾರ ಮಾಡಿದ್ದರು. ನನಗಿಂತ ಆರು ವರ್ಷ ಕಿರಿಯವನಾದ ಆಕಾರ್ ಮಾತ್ರ ಆ ಹಂತದಲ್ಲಿ ನಮ್ಮೊಂದಿಗೆ ಬಂದಿರಲಿಲ್ಲ' ಎಂದು ಕೃಷ್ಣ ಆ ದಿನಗಳ ಬಗ್ಗೆ ಮಾತನಾಡಿದ್ದಾರೆ. ತಂದೆ ತಾಯಿಯನ್ನು ಕಳೆದುಕೊಂಡ ದುಃಖದಿಂದ ಮೇಲೆ ಬರುವ ಪ್ರಯತ್ನದ ನಡುವೆಯೇ ಅನಾಥಾಶ್ರಮದಲ್ಲಿ ನಮ್ಮ ಓದು ಮುಂದುವರಿದಿತ್ತು. ನಾಲ್ಕು ವರ್ಷಗಳ ನಂತರ ಕೃಷ್ಣ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ. 85ರಷ್ಟು ಅಂಕ ಪಡೆದು ಪಾಸ್ ಆದ ಬಳಿಕ, ಪರ್ಭಾನಿಯಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಪೂರೈಸಿದರು. ಆ ಬಳಿಕ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಸಲುವಾಗಿ ಪುಣೆಗೆ ತೆರಳಿದ್ದರು.
ಆದರೆ, ನನ್ನ ಮನಸ್ಸಿನಲ್ಲಿ ಪರ್ಭಾನಿಯ ದಿನಗಳು ನೆನಪಾಗುತ್ತಲೇ ಇದ್ದವು. ಅದಕ್ಕೆ ಕಾರಣ ನಮ್ಮ ಬಾಲ್ಯ. 2020ರಲ್ಲಿ ಪುಣೆಗೆ ಬಂದ ಬಳಿಕ, ಯೆರವಾಡದಾದಲ್ಲಿ ಸರ್ಕಾರಿ ವೀಕ್ಷಣಾಲಯದಲ್ಲಿ ಉಳಿದಕೊಂಡಿದ್ದೆ. ಐಐಟಿಯಲ್ಲಿ ವೈರ್‌ಮನ್ ವಿಭಾಗದಲ್ಲಿ ದಾಖಲಾಗಿದ್ದೆ. ಈ ನಡುವೆ ನಮ್ಮ ಇಬ್ಬರು ತಮ್ಮಂದಿರರು ಕೂಡ ಶಿಕ್ಷಣವನ್ನು ಮುಗಿಸಿ ಪುಣೆಗೆ ಆಗಮಿಸಿದ್ದರು ಎಂದು ಕೃಷ್ಣ ಹೇಳಿದ್ದಾರೆ. ಐಟಿಐ ಮುಗಿಸಿ, ಅಪ್ರೆಂಟಿಸ್‌ಶಿಪ್ ಮಾಡಿದ ನಂತರ, ಕೃಷ್ಣ ಅವರು ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆಯಲು ನಿರ್ಧಾರ ಮಾಡಿದ್ದರು.
ಒಟ್ಟಾರೆ ಉತ್ತಮ ಶಿಕ್ಷಣ ಪಡೆಯುವುದು ನಮ್ಮ ಮೂವರ ಉದ್ದೇಶವಾಗಿತ್ತು. ನನ್ನ ಇಬ್ಬರು ತಮ್ಮಂದಿರರನ್ನು ಕಾಲೇಜಿಗೆ ಸೇರಿಸಿದ್ದೆ. ನಾನು ಪಾರ್ಟ್‌ಟೈಮ್ ಜಾಬ್ ಮಾಡುತ್ತಲೇ ಶಿಕ್ಷಣ ಪೂರೈಸಿದೆ ಎನ್ನುತ್ತಾರೆ. ಕಾಲೇಜು ಶಿಕ್ಷಣ ಮುಗಿಸಿದ ಬಳಿಕ ಮುಂದೇನು ಎನ್ನುವ ಪ್ರಶ್ನೆ ಎದುರಾಗಿತ್ತು. ಸರ್ಕಾರಿ ನೌಕರಿಯ ಪರೀಕ್ಷೆಗಳಿಗೆ ಸಿದ್ಧರಾಗುವ ನಿರ್ಧಾರ ಮಾಡಿದೆವು. ಈ ವೇಳೆ ಪತ್ರಿಕೆಯಲ್ಲಿ ಬಂದಿದ್ದ ಪೊಲೀಸ್ ನೇಮಕಾತಿ ಪರೀಕ್ಷೆ ನಮ್ಮ ಗಮನ ಸೆಳೆದಿತ್ತು.
Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!
'ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಲ್ಲಿ ನಮ್ಮ ಕಷ್ಟಗಳು ಕಡಿಮೆಯಾಗಬಹುದು ಎನ್ನುವ ವಿಶ್ವಾಸವಿತ್ತು. ನಮ್ಮ ನಿಬಿಡ ಕೆಲಸಗಳ ನಡುವೆಯೂ ದೈಹಿಕ ಪರೀಕ್ಷೆಗಾಗಿ ಉತ್ತಮವಾಗಿ ಸಿದ್ಧತೆ ನಡೆಸಿದ್ದೆವು. ಅದರೊಂದಿಗೆ ಪರೀಕ್ಷೆಗೆ ಓದುವುದನ್ನು ಮುಂದುವರಿಸಿದ್ದೆವು. ಈಗ ಅವೆಲ್ಲವೂ ಫಲ ನೀಡಿದೆ ಎಂದು 23 ವರ್ಷದ ಕೃಷ್ಣ ಹೇಳಿದ್ದಾರೆ. ಈಗ ಕೃಷ್ಣ ಹಾಗೂ ಆಕಾರ್, ಮುಂಬೈ ಪೊಲೀಸ್‌ಗೆ ಹಾಗೂ ಓಂಕಾರ್ ಪರ್ಭಾನಿ ಪೊಲೀಸ್ ಇಲಾಖೆಗೆ ಟ್ರೇನಿಂಗ್ ಮುಗಿದ ಬಳಿಕ ಸೇರ್ಪಡೆಯಾಗಲಿದ್ದಾರೆ.
ಚಂದ್ರನ ಕಕ್ಷೆ ಸೇರುವ ಹೆದ್ದಾರಿಯಲ್ಲಿದೆ ಚಂದ್ರಯಾನ-3, ಮುಂದಿರುವ ಸವಾಲೇನು
ಶಿಸೋಡೆ ಸಹೋದರರ ಬದ್ಧತೆ ಹಾಗೂ ಓದುವ ಕುರಿತಾಗಿ ಇದ್ದ ಅಚಲ ನಂಬಿಕೆ ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು. ಎಂದೂ ತಮ್ಮ ಅದೃಷ್ಟವನ್ನು ಬೈದುಕೊಂಡು ಅವರು ತಿರುಗಾಡಿದವರಲ್ಲ. ಸರ್ಕಾರಿ ಕೆಲಸಗಳಲ್ಲಿ ಅನಾಥ ಮಕ್ಕಳಿಗೆ ಶೇ.1ರಷ್ಟು ಕೋಟಾ ಇದೆ. ಇದರ ಅಡಿಯಲ್ಲಿಯೇ ಅವರು ಪೊಲೀಸ್ ಇಲಾಖೆಗೆ ಅರ್ಜಿ ಹಾಕಿದ್ದರು. ಸರ್ಕಾರಿ ಯೋಜನೆಗಳು ಕೂಡ ಇವರ ನೆರವಿಗೆ ಬಂದಿದೆ ಎಂದು ಪರ್ಭಾನಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಕೈಲಾಶ್ ತಿಡ್ಕೆ ಹೇಳಿದ್ದಾರೆ.
