ಮುಂಬೈ(ನ.24): ಕೊರೋನಾ ಹೆಚ್ಚಳದ ಭೀತಿ ಕಾರಣ ಮಹಾರಾಷ್ಟ್ರ ಸರ್ಕಾರ ಸೋಮವಾರ ಕಠಿಣ ಕ್ರಮ ಕೈಗೊಂಡಿದೆ. ದಿಲ್ಲಿ, ರಾಜಸ್ಥಾನ, ಗುಜರಾತ್‌ ಹಾಗೂ ಗೋವಾದಿಂದ ಮಹಾರಾಷ್ಟ್ರ ಪ್ರವೇಶಿಸುವವರು ಕಡ್ಡಾಯವಾಗಿ ‘ಕೋವಿಡ್‌ ನೆಗೆಟಿವ್‌’ ವರದಿ ಹೊಂದಿರಬೇಕು ಎಂದು ಅದು ಆದೇಶಿಸಿದೆ.

ರಾಷ್ಟ್ರ ರಾಜಧಾನಿ ವಲಯ ದಿಲ್ಲಿ, ರಾಜಸ್ಥಾನ, ಗುಜರಾತ್‌ ಹಾಗೂ ಗೋವಾದಿಂದ ಮಹಾರಾಷ್ಟ್ರದ ವಿಮಾನಗಳನ್ನು ಏರುವ ಪ್ರಯಾಣಿಕರು ‘ಕೋವಿಡ್‌ ನೆಗೆಟಿವ್‌’ ಆರ್‌ಟಿ-ಪಿಸಿಆರ್‌ ವರದಿಯನ್ನು ಇಟ್ಟುಕೊಂಡಿರಬೇಕು. ಮಹಾರಾಷ್ಟ್ರದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುತ್ತಿದ್ದಂತೆಯೇ ಅವರು, ಅಲ್ಲಿನ ಸಿಬ್ಬಂದಿಗೆ ವರದಿ ತೋರಿಸಬೇಕು. ಮಹಾರಾಷ್ಟ್ರಕ್ಕೆ ಬಂದು ಇಳಿಯುವ 72 ತಾಸಿನ ಮೊದಲು ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಿಸಿಕೊಂಡಿರಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇನ್ನು ರಸ್ತೆ ಹಾಗೂ ರೈಲು ಮಾರ್ಗದ ಮೂಲಕ ಸಾಗುವ ಪ್ರಯಾಣಿಕರಿಗೂ ಕೋವಿಡ್‌ ಪರೀಕ್ಷೆ ಕಡ್ಡಾಯ. ಈ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್‌ ರೋಗಲಕ್ಷಣಗಳಿದ್ದರೆ ಅವರನ್ನು ವಾಪಸು ಕಳಿಸಲಾಗುವುದು ಎಂದು ತಿಳಿಸಲಾಗಿದೆ.