ಸೆಫ್ಟಿಕ್ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದ ಒಂದೇ ಕುಟುಂಬದ ಐವರು ಉಸಿರುಕಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ.
ಮುಂಬೈ: ಸೆಫ್ಟಿಕ್ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದ ಒಂದೇ ಕುಟುಂಬದ ಐವರು ಉಸಿರುಕಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯಲ್ಲಿ ನಡೆದಿದೆ. ಅಲ್ಲದೇ ಇವರಿಗೆ ಸಹಾಯ ಮಾಡುತ್ತಿದ್ದ ಒಬ್ಬರ ಸ್ಥಿತಿಯೂ ಗಂಭೀರವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು 55 ವರ್ಷದ ಸಾದಿಕ್ ಶೇಖ್, 32 ವರ್ಷದ ಜುನೈದ್ ಶೇಖ್, 28 ವರ್ಷದ ಶಾರೂಖ್ ಶೇಖ್, 28 ವರ್ಷದ ನವೀದ್ ಶೇಖ್, 39 ವರ್ಷದ ಫಿರೋಝ್ ಶೇಖ್ ಎಂದು ಗುರುತಿಸಲಾಗಿದೆ.
ಮೃತರ ಶವಗಳನ್ನುಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವರ ಸಂಬಂಧಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಪರ್ಭಾನಿ ಗ್ರಾಮೀಣ ಪೊಲೀಸರು ಹೇಳಿದ್ದಾರೆ. ಖಾಸಗಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ನಿರ್ಲಕ್ಷ್ಯದ ಕಾರಣದಿಂದ ಈ ದುರಂತ ಸಂಭವಿಸಿದೆ ಎಂದು ಸೋನ್‌ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 9 ಕಾರ್ಮಿಕರ ದಾರುಣ ಸಾವು
6 ಜನ ಕಾರ್ಮಿಕರು ಭವೂಛಾ ತಾಂಡಾ ಪ್ರದೇಶದಲ್ಲಿ (Bhaucha Tanda area) ಇದ್ದ ಸೆಫ್ಟಿಕ್ ಟ್ಯಾಂಕ್ (septic tank) ಅನ್ನು ಸ್ವಚ್ಛ ಮಾಡುತ್ತಿದ್ದರು. ಸಂಜೆ ಮೂರು ಗಂಟೆಗೆ ಕೆಲಸ ಆರಂಭವಾಗಿದ್ದು, ರಾತ್ರಿಯಾಗುತ್ತಿದ್ದಂತೆ ಕಾರ್ಮಿಕರಲ್ಲಿಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕಾರ್ಮಿಕರನ್ನು ಕೂಡಲೇ ಪರ್ಭಾನಿ ಜಿಲ್ಲಾ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರಲ್ಲಿ ಐವರು ಆಗಲೇ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದರು.
ಟ್ಯಾಂಕ್‌ನೊಳಗೆ ಸ್ವಚ್ಛ ಮಾಡುತ್ತಿದ್ದಾಗ ಮೊದಲಿಗೆ ಶಬೀರ್ ಶೇಖ್ (Sabir Sheikh) ಪ್ರಜ್ಞೆ ತಪ್ಪಿ ಬಿದ್ದಿದ್ದು, ನಂತರ ಆತನ ಸಹೋದ್ಯೋಗಿ ಆತನ ರಕ್ಷಣೆಗೆ ಧಾವಿಸಿದ್ದಾನೆ. ಇದಾಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೊಬ್ಬ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಈ ವೇಳೆ ಅವರಿಗೆ ಸಹಾಯ ಮಾಡಲು ಇತರ ನಾಲ್ವರು ಟ್ಯಾಂಕ್‌ನೊಳಗೆ ಹೋಗಿದ್ದು, ಅವರೂ ಕೂಡ ಟ್ಯಾಂಕ್‌ನೊಳಗೆ ಪ್ರಜ್ಞಾಶೂನ್ಯರಾಗಿ ಬಿದ್ದಿದ್ದಾರೆ. ನಂತರ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಸೋನ್‌ಪೇಥ್ ಪೊಲೀಸ್ ಠಾಣೆಯ (Sonpeth police station) ಸ್ಟೇಷನ್ ಇನ್‌ಚಾರ್ಜ್ ಸುನೀಲ್ ರೆಜಿತ್‌ವಾಡ್ (Sunil Rejitwad) ಹೇಳಿದ್ದಾರೆ.
