ಇಟ್ಟಿಗೆ ಗೂಡಿನಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ರಾಯ್‌ಪುರ: ಇಟ್ಟಿಗೆ ಗೂಡಿನಲ್ಲಿ ಮಲಗಿದ್ದ ಐವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ಮಹಾಸಮುಂಡ್ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಇಟ್ಟಿಗೆ ಗೂಡಿನಲ್ಲಿ ಮಲಗಿದ್ದಾಗ ಹೊಗೆ ಆವರಿಸಿದ್ದು, ಈ ಹೊಗೆಯಿಂದ ಉಸಿರುಕಟ್ಟಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಅಸ್ವಸ್ಥಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಜಿಲ್ಲಾ ಮ್ಯಾಜಿಸ್ಟೇಟ್ ಆದೇಶಿಸಿದ್ದಾರೆ. ಬಸ್ನಾ ಪೊಲೀಸ್ ಠಾಣಾ ವ್ಯಾಪ್ತಿಯ ಗಧ್‌ಫುಲ್‌ಜಾರ್ (Gadhphuljhar village) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ಛತ್ತೀಸ್‌ಗಡ ಸಿಎಂ ಭೂಪೇಶ್ ಬಘೇಲ್ ವಿಷಾದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರು ಕಾರ್ಮಿಕರು ಮಂಗಳವಾರ ರಾತ್ರಿ ಊಟವಾದ ನಂತರ ಒಣಗಿದ ಮಣ್ಣಿನ ಇಟ್ಟಿಗೆಗಳನ್ನು ಜೋಡಿಸಿ ಅದರ ಮೇಲೆ ಮಲಗಿದ್ದರು. ಇಂದು ಬೆಳಗ್ಗೆ ಇತರ ಕಾರ್ಮಿಕರು ಆ ಸ್ಥಳಕ್ಕೆ ತಲುಪಿದಾಗ ನಿನ್ನೆ ಮಲಗಿದ್ದ ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಆರು ಕಾರ್ಮಿಕರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಅವರಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಬಸ್ನಾ ಪೊಲೀಸ್ ಠಾಣೆಯ ಠಾಣಾಧಿಕಾರಿ (SHO) ಕುಮಾರಿ ಚಂದ್ರಕರ್ ತಿಳಿಸಿದ್ದಾರೆ.
ಇಟ್ಟಿಗೆ ಗೂಡು ನಿರ್ವಾಹಕನಿಗೆ ಖುಲಾಯಿಸಿದ ಅದೃಷ್ಟ... ಸಿಕ್ತು ಒಂದು ಕೋಟಿಗೂ ಅಧಿಕ ಮೌಲ್ಯದ ವಜ್ರ
ಅಸ್ವಸ್ಥಗೊಂಡ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜಧಾನಿ ರಾಯ್‌ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರ ಪ್ರಕಾರ, ಐವರು ಕಾರ್ಮಿಕರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಆದರೆ ಸಾವಿಗೆ ನಿಖರವಾದ ಕಾರಣ ಅವರ ಮರಣೋತ್ತರ ಪರೀಕ್ಷೆಯ ನಂತರ ತಿಳಿಯಲಿದೆ ಎಂದು ಎಸ್‌ಹೆಚ್‌ಒ ಹೇಳಿದ್ದಾರೆ.
ಮೃತರನ್ನು 55 ವರ್ಷ ಪ್ರಾಯದ ಗಂಗಾರಾಮ್ ಬಿಸಿ (Ganga Ram Bisi), 30 ವರ್ಷ ಪ್ರಾಯದ ದಶರತ್ ಬಿಸಿ (Dasrath Bisi), 40 ವರ್ಷ ಪ್ರಾಯದ ಸೋನಾ ಚಂದ್ ಭಾಯ್ (Sona Chand Bhoi), 24 ವರ್ಷ ಪ್ರಾಯದ ವರುಣ್ ಬಾರಿಹಾ (Varun Bariha), 30 ವರ್ಷ ಪ್ರಾಯದ ಜನಕ್ ರಾಮ್ ಬಾರಿಹಾ (Janak Ram Bariha) ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ. ಈ ನಡುವೆ ಜಿಲ್ಲಾಡಳಿತ ಹಾಗೂ ಗಣಿ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಹಾಸಮುಂಡ್ ಕಲೆಕ್ಟರ್ ನೀಲೇಶ್ ಕುಮಾರ್ ಕ್ಷೀರಸಾಗರ್ (Nilesh Kumar Kshirsagar) ಅವರು ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಮೃತರ ಕುಟುಂಬಕ್ಕೆ 2 ಲಕ್ಷ ಆರ್ಥಿಕ ನೆರವು ಮತ್ತು ಆಸ್ಪತ್ರೆಗೆ ದಾಖಲಾಗಿರುವ ಇಟ್ಟಿಗೆ ಭಟ್ಟಿ ಕಾರ್ಮಿಕನಿಗೆ ವೈದ್ಯಕೀಯ ನೆರವು ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
Bengaluru: ಕಟ್ಟಡ ಡೆಮಾಲಿಷನ್ ವೇಳೆ ಪಿಲ್ಲರ್ ಕುಸಿತ: ಇಬ್ಬರು ಕಾರ್ಮಿಕರು ಸಾವು
ಪ್ರಭಾರ ಗಣಿಗಾರಿಕೆ ಅಧಿಕಾರಿ (ಮಹಾಸಮುಂಡ್) ಉಮೇಶ್ ಭಾರ್ಗವ್ ಅವರು ಗೂಡು ಕಾರ್ಯಾಚರಣೆಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯಿಂದ ತನಿಖೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಈ ಇಟ್ಟಿಗೆ ಗೂಡು ನಡೆಸುತ್ತಿದ್ದ ಕುಂಜಬಿಹಾರಿ ಪಾಡೆ ಅವರು ಈ ಇಟ್ಟಿಗೆ ಗೂಡಿಗಾಗಿ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿಲ್ಲ ಎಂದು ತಿಳಿದು ಬಂದಿದೆ. ಇವರು ಕುಂಬಾರಿಕೆ ಸಮುದಾಯದಿಂದ ಬಂದವರಾಗಿದ್ದು, ಈ ಸಮುದಾಯಕ್ಕೆ ಇಟ್ಟಿಗೆಗಳನ್ನು ತಯಾರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಡಿಲಿಕೆಗಳಿವೆ. ಆದರೆ ಪ್ರತಿಯೊಬ್ಬರೂ ಪ್ರಮಾಣಿತ ಸುರಕ್ಷತಾ ಕ್ರಮಗಳು ಮತ್ತು ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎಂದು ಪ್ರಭಾರ ಗಣಿಗಾರಿಕೆ ಅಧಿಕಾರಿ ಭಾರ್ಗವ್ ಹೇಳಿದ್ದಾರೆ.
