ಮುಂಬೈ (ಅ. 16): ಇದೇ ತಿಂಗಳು 21ರಂದು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ‘ಸ್ವಾತಂತ್ರ್ಯ ಯೋಧ ಹಾಗೂ ಹಿಂದೂ ಮಹಾಸಭಾ ಅಧ್ಯಕ್ಷರಾಗಿದ್ದ ವೀರ ಸಾವರ್‌ಕರ್‌ಗೆ ಭಾರತರತ್ನ ಗೌರವ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂಬ ಅಂಶವನ್ನು ಸೇರಿಸಿದೆ.

ಇದರ ಜತೆಗೆ ಸಾಮಾಜಿಕ ಕ್ರಾಂತಿ ಮಾಡಿದ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರಿಗೂ ಭಾರತರತ್ನ ನೀಡುವ ಶಿಫಾರಸು ಮಾಡಲಾಗುವುದು ಎಂದು ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

ದೇಶದ ಮೊದಲ ದೃಷ್ಠಿ ಹೀನ ಐಎಎಸ್ ಅಧಿಕಾರಿ ಪ್ರಾಂಜಲ್

ಸಾವರ್‌ಕರ್‌ ಅವರಿಗೆ ಭಾರತ ರತ್ನ ನೀಡುವ ಬಿಜೆಪಿ ಭರವಸೆಗೆ ಕಾಂಗ್ರೆಸ್‌ ಪಕ್ಷ ಹಾಗೂ ಅಸಾದುದ್ದೀನ್‌ ಒವೈಸಿ ಅವರ ಮಜ್ಲಿಸ್‌ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ‘ಸಾವರ್‌ಕರ್‌ ಅವರು ಮಹಾತ್ಮಾ ಗಾಂಧೀಜಿ ಹತ್ಯೆಯಲ್ಲಿ ಪಾಲುದಾರ ಎಂಬ ಕ್ರಿಮಿನಲ್‌ ಆರೋಪವಿದೆ. ಈ ಬಗ್ಗೆ ತನಿಖೆ ನಡೆಸಿದ್ದ ಕಪೂರ್‌ ಆಯೋಗವು ಸಾವರ್‌ಕರ್‌ ಮೇಲೆ ದೋಷಾರೋಪ ಹೊರಿಸಿದೆ ಎಂದು ಇತ್ತೀಚೆಗೆ ಮಾಧ್ಯಮ ವರದಿಯೊಂದರ ಮೂಲಕ ತಿಳಿದಿತ್ತು. ಇಂಥವರಿಗೆ ಭಾರತರತ್ನ ಶಿಫಾರಸು ಮಾಡಲಾಗಿದೆ ಎಂದರೆ ಈ ದೇಶವನ್ನು ದೇವರೇ ಕಾಪಾಡಬೇಕು’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಹೇಳಿದ್ದಾರೆ.

ಒವೈಸಿ ಅವರು ಪ್ರತಿಕ್ರಿಯಿಸಿ, ‘ಈ ಅಮೂಲ್ಯ ರತ್ನದ (ಸಾವರ್‌ಕರ್‌) ಬಗ್ಗೆ ತಿಳಿದುಕೊಳ್ಳಿ. ಜೀವನ್‌ಲಾಲ್‌ ಆಯೋಗವು ಗಾಂಧಿ ಹತ್ಯೆ ಕೇಸ್‌ನಲ್ಲಿ ಇವರ ಮೇಲೆ ದೋಷಾರೋಪ ಹೊರಿಸಿದೆ. ಅತ್ಯಾಚಾರ ಎಂಬುದನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಿ ಎಂಬುದರ ಪ್ರತಿಪಾದಕರು ಇವರು. ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸದ ಶಿವಾಜಿಯನ್ನು ಟೀಕಿಸಿದವರು ಅವರು. ಬ್ರಿಟಿಷರ ಧ್ಯೇಯ ಸೇವಕ ಎಂದು ಕರೆದುಕೊಂಡವರು ಅವರು’ ಎಂದು ಟೀಕಿಸಿದ್ದಾರೆ.

5 ಕೋಟಿ ಉದ್ಯೋಗ ಸೃಷ್ಟಿ: ಬಿಜೆಪಿ ಭರವಸೆ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂದಿನ 5 ವರ್ಷದಲ್ಲಿ 5 ಕೋಟಿ ಉದ್ಯೋಗ ಸೃಷ್ಟಿ, 2022ರ ವೇಳೆಗೆ ಎಲ್ಲರಿಗೂ ಮನೆ, 1 ಲಕ್ಷ ಕೋಟಿ ಡಾಲರ್‌ ಮೌಲ್ಯದ ಆರ್ಥಿಕತೆ ಸೃಷ್ಟಿ.. ಇವು ಮಹಾರಾಷ್ಟ್ರ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ಪ್ರಮುಖ ಅಂಶಗಳು.

ಅಯೋಧ್ಯೆ ವಿಚಾರಣೆ ಇಂದೇ ಅಂತ್ಯ ಸಾಧ್ಯತೆ

ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆಗೆ ಪ್ರತ್ಯೇಕ ಇಲಾಖೆ, ಮರಾಠವಾಡಾ ಕುಡಿವ ನೀರಿನ ಯೋಜನೆಗೆ 16 ಸಾವಿರ ಕೋಟಿ ರು. ನೀಡಿಕೆ, ಈ ಭಾಗದ 11 ಅಣೆಕಟ್ಟುಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸಿ ಕುಡಿವ ನೀರು ಪೂರೈಕೆ, ಮೂಲಸೌಕರ್ಯ ಯೋಜನೆಗಳಲ್ಲಿ 5 ಲಕ್ಷ ಕೋಟಿ ರು. ಹೂಡಿಕೆ ಭರವಸೆಗಳನ್ನೂ ನೀಡಲಾಗಿದೆ.