ಮಹಾರಾಷ್ಟ್ರ ಸರ್ಕಾರವು ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯನ್ನು ಬಡ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಯೋಜನೆಯಡಿ ಮಾಸಿಕ ನೆರವಿನ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿದೆ.
ಮುಂಬೈ (ಮಾ.19): ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆ ಮಾದರಿಯಲ್ಲಿ, ರಾಜ್ಯದ ಎಲ್ಲಾ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಜಾರಿಗೊಳಿಸಲಾಗಿದ್ದ ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯನ್ನು ಬಡ ಮಹಿಳೆಯರಿಗಷ್ಟೇ ಸೀಮಿತಗೊಳಿಸಲು ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ನಿರ್ಧರಿಸಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ ಯೋಜನೆಗೆ ಪ್ರಸಕ್ತ ವರ್ಷ ಅನುದಾನವನ್ನೂ ಕಡಿತ ಮಾಡಿತ್ತು, ಜೊತೆಗೆ ಚುನಾವಣೆಯಲ್ಲಿ ಘೋಷಿಸಿದ್ದಂತೆ ಮಾಸಿಕ ನೆರವಿನ ಪ್ರಮಾಣವನ್ನು 1500 ರು.ನಿಂದ 2100 ರು.ಗೆ ಹೆಚ್ಚಿಸುವ ಕುರಿತು ಯಾವುದೇ ಪ್ರಸ್ತಾಪವನ್ನೂ ಮಾಡಿರಲಿಲ್ಲ. ಅದರ ಬೆನ್ನಲ್ಲೇ ಇದೀಗ ಯೋಜನೆಯನ್ನು ಸೀಮಿತ ಸಂಖ್ಯೆಯ ಮಹಿಳೆಯರಿಷ್ಟೇ ಜಾರಿಗೊಳಿಸುವ ಘೋಷಣೆಯನ್ನು ಸರ್ಕಾರ ಮಾಡಿದೆ.
ಈ ಕುರಿತು ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿರುವ ರಾಜ್ಯ ವಿತ್ತ ಸಚಿವ, ಡಿಸಿಎಂ ಅಜಿತ್ ಪವಾರ್, ‘ಕೆಲ ಸ್ಥಿತಿವಂತರೂ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಗಡಿಬಿಡಿ ಹಾಗೂ ಗೊಂದಲದಿಂದ ಹೀಗಾಗಿದೆ. ಲಡ್ಕಿ ಬಹಿನ್ ಯೋಜನೆಯು ಬಡ ಮಹಿಳೆಯರಿಗಷ್ಟೇ ಸೀಮಿತವಾಗಿದ್ದು, ಇದಕ್ಕೆ ತಕ್ಕ ಬದಲಾವಣೆ ಮಾಡುತ್ತೇವೆ’ ಎಂದರು.
ಇದೇ ವೇಳೆ, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ‘ಈಗಾಗಲೇ ಯೋಜನೆಯಡಿ ಹಣ ಪಡೆದಿರುವವರು ಅದನ್ನು ಮರಳಿಸಬೇಕೆಂದಿಲ್ಲ. ನಾವು ಇದಕ್ಕಾಗಿ ಸಾಕಷ್ಟು ನಿಧಿ ಒದಗಿಸಲಿದ್ದು, ಬಡ ಸ್ತ್ರೀಯರು ಖಚಿತವಾಗಿ ಹಣ ಪಡೆಯುತ್ತಾರೆ’ ಎಂದು ಹೇಳಿದರು.
ಅಮರಾವತಿ ಮುಂಬೈ ರೈಲಿಗೆ ಟ್ರಕ್ ಡಿಕ್ಕಿ: ನಜ್ಜುಗುಜ್ಜಾದ ಟ್ರಕ್ ವೀಡಿಯೋ ವೈರಲ್
ಸಾಮಾಜಿಕ ನ್ಯಾಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯಿಂದ 10 ಸಾವಿರ ಕೋಟಿ ರು.ವನ್ನು ಲಡ್ಕಿ ಬಹಿನ್ ಯೋಜನೆಗೆ ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿದ ಪವಾರ್, ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಶೇ.40ರಷ್ಟು ನಿಧಿಯನ್ನು ಯೋಜನೆಗೆ ಬಳಸುತ್ತಿರುವುದಾಗಿ ಧೃಡಪಡಿಸಿದರು. ಜೊತೆಗೆ, ‘ಲಡ್ಕಿ ಬಹಿನ್‌ಗೆ ಮಾಡಲಾದ ಖರ್ಚನ್ನು ಹೊರತುಪಡಿಸಿದರೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿಧಿಯಲ್ಲಿ ಶೇ.18 ಹಾಗೂ 19ರಷ್ಟು ಏರಿಕೆಯಾಗಿದೆ’ ಎಂದರು.
ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ನಾಯಕರ ನೇಮಿಸಿಲ್ವಾ: ಗ್ಯಾರಂಟಿ ಸಮಿತಿ ಪ್ರಶ್ನಿಸಿದ ಬಿಜೆಪಿಗೆ ಸಿದ್ದು ಟಾಂಗ್
ರಾಜ್ಯದ 21ರಿಂದ 65 ವಯಸ್ಸಿನ ಎಲ್ಲಾ ಮಹಿಳೆಯರಿಗೆ ಮಾಸಿಕ 1,500 ರು. ನೀಡುವ ಲಡ್ಕಿ ಬಹಿನ್ ಯೋಜನೆಯನ್ನು 2024ರ ಜುಲೈನಲ್ಲಿ ಆರಂಭಿಸಲಾಗಿತ್ತು. ಇದು ಮಹಾಯುತಿ ಮೈತ್ರಿಕೂಟದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
