ಮಹಾಕುಂಭಮೇಳವನ್ನು ಮೃತ್ಯುಕುಂಭ ಎಂದು ಕರೆದಿದ್ದ ಮಮತಾ ಬ್ಯಾನರ್ಜಿ ಹೇಳಿಕೆಗೆ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಗಳು ಬೆಂಬಲ ಸೂಚಿಸಿದ್ದಾರೆ. ಸರಿಯಾದ ಯೋಜನೆ ಮತ್ತು ವ್ಯವಸ್ಥೆಗಳ ಕೊರತೆ, ಸಂಚಾರ ದಟ್ಟಣೆ, ಕಲುಷಿತ ನೀರು ಮುಂತಾದವುಗಳನ್ನು ಟೀಕಿಸಿದ್ದಾರೆ. ಕೈದಿಗಳಿಗೂ ಪುಣ್ಯಸ್ನಾನದ ಅವಕಾಶ ಕಲ್ಪಿಸಲಾಗಿದೆ.

ಪ್ರಯಾಗರಾಜ್‌ (ಫೆ.20): ಮಹಾಕುಂಭಮೇಳವನ್ನು ಮೃತ್ಯುಕುಂಭ ಎಂದು ಕರೆದಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಉತ್ತರಾಖಂಡದ ಜ್ಯೋತಿಷ್‌ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಗಳು ಬೆಂಬಲ ಸೂಚಿಸಿದ್ದು, ಕುಂಭಮೇಳಕ್ಕೆ ಸರಿಯಾದ ಯೋಜನೆ ತಯಾರಿಸಿ ಅಗತ್ಯ ವ್ಯವಸ್ಥೆಗಳನ್ನು ಮಾಡಿರಲಿಲ್ಲ ಎಂದು ಟೀಕಿಸಿದ್ದಾರೆ.

Add Asianetnews Kannada as a Preferred SourcegooglePreferred

‘300 ಕಿ.ಮೀ. ಸಂಚಾರ ದಟ್ಟಣೆಯಿದ್ದು, ಜನ ತಮ್ಮ ಸಾಮಾನುಗಳನ್ನೆತ್ತಿಕೊಂಡು 25ರಿಂದ 30 ಕಿ.ಮೀ. ಕಾಲ್ನಡಿಯಲ್ಲೇ ಕ್ರಮಿಸಬೇಕಾಯಿತು. ಇದು ಅವ್ಯವಸ್ಥೆಯಲ್ಲದೆ ಇನ್ನೇನು? ಸ್ನಾನಕ್ಕೆ ಪೂರೈಸಲಾಗುತ್ತಿದ್ದ ನೀರಿಗೆ ಚರಂಡಿ ನೀರು ಬೆರಕೆಯಾಗುತ್ತಿತ್ತು. ಇದು ಮೀಯಲು ಯೋಗ್ಯವಲ್ಲ ಎಂದು ವಿಜ್ಞಾನಿಗಳೇ ಹೇಳಿದರೂ ಭಕ್ತರು ಅದರಲ್ಲೇ ಸ್ನಾನ ಮಾಡುವಂತೆ ಮಾಡಲಾಯಿತು’ ಎಂದು ಸ್ವಾಮಿಗಳು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಇದು ಮಹಾಕುಂಭ ಅಲ್ಲ, ಮೃತ್ಯುಕುಂಭ..! ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ

ಜೊತೆಗೆ, ‘12 ವರ್ಷ ಹಿಂದೆಯೇ ಮಹಾಕುಂಭ ನಡೆಯಲಿದೆ ಎಂದು ತಿಳಿದಿದ್ದರೂ ಸರಿಯಾದ ವ್ಯವಸ್ಥೆಗಳನ್ನು ಏಕೆ ಮಾಡಿಕೊಳ್ಳಲಿಲ್ಲ? ಜನಸಂದಣಿ ನಿರ್ವಹಣೆ ಹಾಗೂ ಆತಿಥ್ಯ ವ್ಯವಸ್ಥೆಗಳು ಸರಿಯಿರಲಿಲ್ಲ. ಜನರು ಸತ್ತಾಗಲೂ ಅದನ್ನು ಮುಚ್ಚಿಟ್ಟು ಮಹಾಪಾಪ ಮಾಡಿದರು’ ಎಂದು ಆರೋಪಿಸಿದರು.

ಇದನ್ನೂ ಓದು: ಸಂಗಮ ನೀರು ಕಲುಷಿತವಲ್ಲ, ಆಚಮನಕ್ಕೆ ಯೋಗ್ಯ : 'ಮಲದ ಬ್ಯಾಕ್ಟೀರಿಯಾ' ಆರೋಪ ತಳ್ಳಿಹಾಕಿದ ಸಿಎಂ ಯೋಗಿ ಆದಿತ್ಯನಾಥ್‌

ಕೈದಿಗಳಿಗೂ ಪುಣ್ಯಸ್ನಾನ ಅವಕಾಶ!

ಪ್ರಯಾಗ್‌ರಾಜ್: ಇಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ಪವಿತ್ರ ಜಲದಲ್ಲಿ ಪುಣ್ಯಸ್ನಾನ ಮಾಡಲು ಉತ್ತರ ಪ್ರದೇಶ ಸರ್ಕಾರ ರಾಜ್ಯದ ಜೈಲುಗಳಲ್ಲಿರುವ ಕೈದಿಗಳಿಗೂ ಅವಕಾಶ ಕಲ್ಪಿಸಿದೆ.

ರಾಜ್ಯದ ಒಟ್ಟು 75 ಜೈಲುಗಳಲ್ಲಿರುವ 90 ಸಾವಿರ ಕೈದಿಗಳಿಗೆ ತ್ರಿವೇಣಿ ಸಂಗಮದ ನೀರು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಫೆ.21ರಂದು ಬೆಳಿಗ್ಗೆ 9:30ರಿಂದ 10:30ರ ತನಕ ಈ ವ್ಯವಸ್ಥೆ ಇರಲಿದೆ ಎಂದು ಉತ್ತರ ಪ್ರದೇಶ ಜೈಲು ಇಲಾಖೆ ಮಾಹಿತಿ ನೀಡಿದೆ.