2025 ರ ಪ್ರಯಾಗ್‌ರಾಜ್ ಮಹಾಕುಂಭದಲ್ಲಿನ ಕಾಲ್ತುಳಿತದ ಬಗ್ಗೆ ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃತದೇಹಗಳನ್ನು ಇನ್ನೂ ಹೊರತೆಗೆಯಲಾಗಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 2025 ರ ಮಹಾಕುಂಭದ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದರೆ, ಮಹಾಕುಂಭದ ಕುರಿತು ಮಮತಾ ಬ್ಯಾನರ್ಜಿ ಅವರ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ. 

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ ಅವರು, ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ನಂತರವೂ, ಮೃತಪಟ್ಟ 30 ಜನರ ಶವಗಳನ್ನು ಇಲ್ಲಿಯವರೆಗೆ ಹೊರತೆಗೆಯಲಾಗಿಲ್ಲ. ಇದು ಮಹಾ ಕುಂಭ ಅಲ್ಲ, ಮೃತ್ಯುಕುಂಭ ಎಂದಿದ್ದಾರೆ. ಇದೀಗ ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ನಾನು ಮಹಾ ಕುಂಭ ಮತ್ತು ಗಂಗಾ ಮಾತೆಯನ್ನು ಗೌರವಿಸುತ್ತೇನೆ ಆದರೆ ಇಲ್ಲಿ ಯಾವುದೇ ಯೋಜನೆ ಇಲ್ಲ. ಇದೊಂದು ಮೃತ್ಯುಕುಂಭವಾಗಿದೆ. ಇದುವರೆಗೆ ಎಷ್ಟು ಶವಗಳನ್ನು ಹೊರತೆಗೆಯಲಾಯಿತು? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ:

ಬಿಜೆಪಿ ಸರ್ಕಾರದ ಮೇಲೆ ದಾಳಿ ಮಾಡಿದ ಮಮತಾ ಬ್ಯಾನರ್ಜಿ ಅವರು, ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ವಿಐಪಿಗಳಿಗೆ 1 ಲಕ್ಷ ರೂ.ವರೆಗೆ ಪಾವತಿಸುವ ಐಷಾರಾಮಿ ಟೆಂಟ್‌ಗಳ ಸೌಲಭ್ಯವಿದೆ ಆದರೆ ಬಡವರಿಗೆ ಅಂತಹ ಯಾವುದೇ ವ್ಯವಸ್ಥೆ ಮಾಡಿಲ್ಲ. ಪ್ರಯಾಗರಾಜ್‌ನಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ದೊಡ್ಡ ಜನಸಂದಣಿಯಲ್ಲಿ ಉದ್ಭವಿಸಬಹುದು ಆದರೆ ಅದಕ್ಕೆ ಬೇಕಾದ ತಯಾರಿ, ವ್ಯವಸ್ಥೆಗಳನ್ನು ಮಾಡಿಕೊಂಡಿಲ್ಲ. ಈ ಅವ್ಯವಸ್ಥೆಗಳಿಂದ ದುರಂತ ಸಂಭವಿಸಿದೆ ಎಂದು ಆರೀಪಿಸಿದ್ದಾರೆ.

ಅಖಿಲೇಶ್ ಯಾದವ್ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ:

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಪ್ರಯಾಗ್‌ರಾಜ್‌ಗೆ ಹೋಗುವ ಭಕ್ತರು 300 ಕಿ.ಮೀ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದರು. ಈ ರೀತಿ ರಸ್ತೆಯಲ್ಲೇ ದಿನಗಟ್ಟಲೇ ನಿಲ್ಲುವುದು 'ಅಭಿವೃದ್ಧಿ ಹೊಂದಿದ ಭಾರತ'ವೇ? ಈ ಸರ್ಕಾರಕ್ಕೆ ಸಂಚಾರವನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಚಂದ್ರನಿಗೆ ಹೋಗಿ ಏನು ಪ್ರಯೋಜನ? ಲಕ್ಷಾಂತರ ಭಕ್ತರು ಇನ್ನೂ ಪ್ರಯಾಗರಾಜ್ ತಲುಪಿಲ್ಲ. ಮಹಾ ಕುಂಭಮೇಳದ ಅವಧಿಯನ್ನು ಫೆಬ್ರವರಿ 26 ರ ನಂತರವೂ ವಿಸ್ತರಿಸಬೇಕೆಂದು ಅವರು ಒತ್ತಾಯಿಸಿದರು. ರೈಲು ವಿಳಂಬ, ದುರುಪಯೋಗ ಮತ್ತು ವಿಐಪಿ ವ್ಯವಸ್ಥೆಗಳ ಕುರಿತು ವಿರೋಧ ಪಕ್ಷಗಳು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿವೆ.

ಬಿಜೆಪಿ ಸರ್ಕಾರದಿಂದಲೂ ಪ್ರತಿದಾಳಿ: 

ಐತಿಹಾಸಿಕ ಮಹಾ ಕುಂಭಮೇಳ 2025 ಅನ್ನು ಬಿಜೆಪಿ ಮತ್ತು ಯುಪಿ ಸರ್ಕಾರ ಮಹಾ ಕುಂಭ ಮೇಳವನ್ನು ಯಶಸ್ವಿ ಕಾರ್ಯಕ್ರಮವೆಂದು ಘೋಷಿಸಿದವು. ಯೋಗಿ ಸರ್ಕಾರದ ಪ್ರಕಾರ, ಇಲ್ಲಿಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ಗಂಗಾ-ಯಮುನಾ ಮತ್ತು ಅದೃಶ್ಯ ಸರಸ್ವತಿ (ಗಂಗಾ ಯಮುನಾ ಸರಸ್ವತಿ) ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ ಈ ಮಹಾ ಧಾರ್ಮಿಕ ಕಾರ್ಯಕ್ರಮದ ಯಶಸ್ಸು ಸಹಿಸಲಾಗದೆ ವಿರೋಧ ಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ ಪ್ರತಿದಾಳಿ ನಡೆಸಿದೆ.