ಪ್ರಯಾಗರಾಜ್‌ನ ನದಿಗಳಲ್ಲಿ ಮಲದ ಬ್ಯಾಕ್ಟೀರಿಯಾ ಅಧಿಕ ಮಟ್ಟದಲ್ಲಿರುವ ವರದಿಯನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರಸ್ಕರಿಸಿದ್ದಾರೆ. ಸಂಗಮದ ನೀರು ಸ್ನಾನ ಹಾಗೂ ಆಚಮನಕ್ಕೆ ಯೋಗ್ಯ ಎಂದಿರುವ ಅವರು, ಈಗಾಗಲೇ 56.25 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದಿದ್ದಾರೆ.
ಲಖನೌ (ಫೆ.20): ನಡೆಯುತ್ತಿರುವ ಪ್ರಯಾಗರಾಜ್‌ನ ಹಲವು ಸ್ಥಳಗಳ ನದಿಗಳಲ್ಲಿ ಮಲದ ಬ್ಯಾಕ್ಟೀರಿಯಾ ಅಧಿಕ ಮಟ್ಟದಲ್ಲಿ ಇರುವ ವರದಿಯನ್ನು ತಳ್ಳಿಹಾಕಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ‘ಸಂಗಮದ ನೀರು ಸ್ನಾನ ಹಾಗೂ ಆಚಮನಕ್ಕೆ ಯೋಗ್ಯ’ ಎಂದಿದ್ದಾರೆ.
‘ನದಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಕಾಲಿಫಾರ್ಮ್ ಅಧಿಕ ಪ್ರಮಾಣದಲ್ಲಿದ್ದು, ಸಂಸ್ಕರಿಸದ ಚರಂಡಿ ನೀರನ್ನು ಗಂಗಾ ಹಾಗೂ ಯಮುನಾ ನದಿಗಳಿಗೆ ಬಿಡಲಾಗುತ್ತಿದೆ’ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ)ಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ ಸಲ್ಲಿಸಿತ್ತು. ಅದರಲ್ಲಿ, ಜ.12 ಹಾಗೂ 13ರಂದು ಪರೀಕ್ಷೆಗೊಳಪಡಿಸಲಾದ ನೀರಿನ ಮಾದರಿಯು ಸ್ನಾನಕ್ಕೂ ಯೋಗ್ಯವಲ್ಲ ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣ ಕಾಲ್ತುಳಿತ: ಹೆಸರಿನ ಗೊಂದಲವೇ ದುರಂತಕ್ಕೆ ಕಾರಣ?
ವಿಧಾನಸಭೆಯಲ್ಲಿ ಬುಧವಾರ ಮಾತನಾಡಿ ಇದನ್ನು ತಿರಸ್ಕರಿಸಿದ ಯೋಗಿ, ‘ಪ್ರಯಾಗರಾಜ್‌ನಲ್ಲಿ ಈಗಾಗಲೇ 56.25 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ನಾವು ಸನಾತನ ಧರ್ಮ, ಗಂಗಾ ಮಾತೆ, ಭಾರತ ಅಥವಾ ಮಹಾ ಕುಂಭದ ವಿರುದ್ಧ ಯಾವುದೇ ಆಧಾರರಹಿತ ಆರೋಪಗಳನ್ನು ಮಾಡಿದಾಗ ಅಥವಾ ನಕಲಿ ವೀಡಿಯೊಗಳನ್ನು ತೋರಿಸಿದಾಗ, ಅದು ಈ 56 ಕೋಟಿ ಜನರ ನಂಬಿಕೆಯೊಂದಿಗೆ ಆಟವಾಡಿದಂತಾಗುತ್ತದೆ. ನದಿಗೆ ಮಲ ಸೇರದಂತೆ ಸಾಕಷ್ಟು ಕ್ರಮ ಜರುಗಿಸಲಾಗಿದೆ’ ಎಂದರು.
ಇದನ್ನೂ ಓದಿ: ಇದು ಮಹಾಕುಂಭ ಅಲ್ಲ, ಮೃತ್ಯುಕುಂಭ..! ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ
ಇದೇ ವೇಳೆ ಮೃತ್ಯುಕುಂಭ ಎಂಬ ಮಮತಾ ಹೇಳಿಕೆ ಖಂಡಿಸಿದ ಅವರು, ‘ಸನಾತನ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಪರಾಧವಾಗಿದ್ದರೆ, ನಮ್ಮ ಸರ್ಕಾರ ಆ ಅಪರಾಧವನ್ನು ಮಾಡುತ್ತಲೇ ಇರುತ್ತದೆ’ ಎಂದು ಕಿಡಿಕಾರಿದರು.
ಫೆ.26ರಂದು ಮುಕ್ತಾಯಗೊಳ್ಳಲಿರುವ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಆಗಮಿಸಿ ಸಂಗಮದಲ್ಲಿ ಮಿಂದೆದ್ದಿದ್ದಾರೆ.
