ಮಹಾದೇವ್ ಆ್ಯಪ್‌ನ ಪ್ರವರ್ತಕರಲ್ಲಿ ಒಬ್ಬರಾದ ಸೌರಭ್ ಚಂದ್ರಕರ್ ಅವರನ್ನು ದುಬೈನಲ್ಲಿರುವ ಅವರ ಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ. ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇಡಿ ಹೊಸ ಆರೋಪಪಟ್ಟಿ ಸಲ್ಲಿಸಬಹುದು ಎಂದು ವರದಿಯಾಗಿದೆ. 

ಮುಂಬೈ (ಡಿ.27): ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ನ ಮಾಲೀಕ ಸೌರಭ್ ಚಂದ್ರಕರ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ. ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಮಾಹಿತಿ ಪಡೆದ ನಂತರ ಇಡಿ (ಜಾರಿ ನಿರ್ದೇಶನಾಲಯ) ಸೇರಿದಂತೆ ಇತರ ಭಾರತೀಯ ತನಿಖಾ ಸಂಸ್ಥೆಗಳು ಅಲರ್ಟ್ ಆಗಿವೆ. ಸೌರಭ್ ಚಂದ್ರಕರ್ ಅವರನ್ನು ಭಾರತಕ್ಕೆ ಕರೆತರಲು ಭಾರತೀಯ ಏಜೆನ್ಸಿಗಳು ರಾಜತಾಂತ್ರಿಕ ಮಾರ್ಗದಲ್ಲಿ ಕೆಲಸ ಮಾಡುತ್ತಿವೆ. ಮಹಾದೇವ್ ಆ್ಯಪ್‌ನ ಕೋಟಿಗಟ್ಟಲೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಶೀಘ್ರದಲ್ಲೇ ಹೊಸ ಆರೋಪಪಟ್ಟಿ ಸಲ್ಲಿಸಬಹುದು ಎಂದು ಮೂಲಗಳು ತಿಳಿಸಿವೆ. ಹಲವು ವಾರಗಳ ಹಿಂದೆ, ಮಹದೇವ್ ಆ್ಯಪ್‌ನ ಮತ್ತೊಬ್ಬ ಪ್ರವರ್ತಕ ರವಿ ಉಪ್ಪಲ್ ವಿರುದ್ಧ ದುಬೈನಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಇಂಟರ್‌ಪೋಲ್ ನೀಡಿದ ರೆಡ್ ನೋಟಿಸ್ ಆಧಾರದ ಮೇಲೆ ಸ್ಥಳೀಯ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಇಡಿ ಮನವಿ ಮೇರೆಗೆ ಇಂಟರ್‌ಪೋಲ್ ಈ ಸೂಚನೆ ನೀಡಿದೆ. ಇದೀಗ ಸೌರಭ್ ಚಂದ್ರಕರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಚಂದ್ರಕರ್ ಅವರು ದುಬೈನಲ್ಲಿ ಇರುವ ಬಗ್ಗೆ ಮಾಹಿತಿಯನ್ನು ಭಾರತದ ಕೇಂದ್ರ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಭಾರತೀಯ ಏಜೆನ್ಸಿಗಳು ರಾಜತಾಂತ್ರಿಕ ಮಾರ್ಗಗಳ ಮೂಲಕ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರ ಗಡೀಪಾರು ಅಥವಾ ಹಸ್ತಾಂತರಕ್ಕಾಗಿ ಕೆಲಸ ಮಾಡುತ್ತಿವೆ. ಮಹಾದೇವ್ ಆ್ಯಪ್ ಮೂಲಕ ಅಕ್ರಮ ವಹಿವಾಟು ಮತ್ತು ಅಕ್ರಮ ಹಣ ವರ್ಗಾವಣೆ ಕುರಿತು ಭಾರತದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯಲ್ಲಿ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರ ವಿಚಾರಣೆ ಪ್ರಮುಖವಾಗಿದೆ. ಇಬ್ಬರಿಗೂ ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಲ್ಲಿ ರಾಜಕೀಯ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.

ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ ಹಗರಣ: ದುಬೈಗೆ ಪರಾರಿಯಾಗಲು ಹೇಳಿದ್ದೇ ಸಿಎಂ ಬಘೇಲ್‌: ಶುಭಂ ಸೋನಿ

ನವೆಂಬರ್‌ನಲ್ಲಿ, ಮಹಾದೇವ್ ಆಪ್ ಪ್ರಕರಣದಲ್ಲಿ ಛತ್ತೀಸ್‌ಗಢದಿಂದ ಅಸೀಮ್ ದಾಸ್ (ಆಪಾದಿತ ನಗದು ಕೊರಿಯರ್) ಮತ್ತು ಪೊಲೀಸ್ ಪೇದೆ ಭೀಮ್ ಯಾದವ್ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇಡಿ ಹೊಸ ಆರೋಪಪಟ್ಟಿ (ಪೂರಕ) ಸಲ್ಲಿಸಲಿದೆ. ರಾಯ್‌ಪುರದ ಪಿಎಂಎಲ್‌ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ವಿಶೇಷ ನ್ಯಾಯಾಲಯದಲ್ಲಿ ಇಡಿ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಸಿತ್ತು. ಅದರಲ್ಲಿ ಚಂದ್ರಕರ್ ಮತ್ತು ಉಪ್ಪಲ್ ಸೇರಿ ಕೆಲವರನ್ನು ಹೆಸರಿಸಲಾಗಿತ್ತು.

ಏನಿದು ಮಹದೇವ್ ಬೆಟ್ಟಿಂಗ್ ಆ್ಯಪ್‌ , ರಣಬೀರ್‌, ಶ್ರದ್ಧಾ ಕಪೂರ್ ಸೇರಿ ಖ್ಯಾತ ನಟ-ನಟಿಯರು ದಂಧೆಯಲ್ಲಿ!