ಪಣಜಿ [ಡಿ.28]:  ಮಹದಾಯಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಪರಿಸರ ಅನುಮತಿ ಬೇಕಾಗಿಲ್ಲ ಎಂದು ಡಿ.24ರಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿರುವುದು ಗೋವಾದ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧವೇ ಸಮರ ಸಾರುವ ಸುಳಿವನ್ನು ನೀಡಿರುವ ಗೋವಾ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಅಗತ್ಯ ಬಿದ್ದರೆ ಕೇಂದ್ರ ಪರಿಸರ ಸಚಿವಾಲಯದ ವಿರುದ್ಧ ತಿರುಗಿಬೀಳಲು ಸಿದ್ಧ ಎಂದು ಘೋಷಿಸಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದಾಯಿ ನದಿ ನೀರು ತಿರುಗಿಸುವ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಗೋವಾ ಜನರು ಚಿಂತೆ ಪಡಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಅಗತ್ಯ ಬಿದ್ದರೆ, ಕೇಂದ್ರ ಪರಿಸರ ಸಚಿವಾಲಯದ ವಿರುದ್ಧವೂ ನಿಲ್ಲುತ್ತೇವೆ ಎಂದು ತಿಳಿಸಿದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದರು.

ಇದೇ ವೇಳೆ, ಮಹದಾಯಿ ವಿಚಾರ ಕುರಿತು ಚರ್ಚಿಸಲು ಒಂದು ದಿನದ ಅಧಿವೇಶನ ಕರೆಯಬೇಕೆಂಬ ಪ್ರತಿಪಕ್ಷ ನಾಯಕ ದಿಗಂಬರ ಕಾಮತ್‌ ಹೇಳಿಕೆ ಬಗ್ಗೆ ಕಿಡಿಕಾರಿದ ಸಾವಂತ್‌, ಮಹದಾಯಿ ನದಿ ತಿರುಗಿಸಲು ಅವಕಾಶ ನೀಡಿದವರಿಗೆ ಸರ್ಕಾರ ಈ ವಿಚಾರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ಸಲಹೆ ನೀಡುವ ನೈತಿಕ ಹಕ್ಕು ಇಲ್ಲ ಎಂದು ಕಿಡಿಕಾರಿದರು.

ಮಹಾರಾಷ್ಟ್ರ ಸಂಪುಟ ವಿಸ್ತರಣೆಗೂ ಮುನ್ನ ಕಾಂಗ್ರೆಸ್ ಭಿನ್ನಮತ...

ಇದೇ ವೇಳೆ, ಉನ್ನತ ಮಟ್ಟದ ಸಭೆಯನ್ನೂ ನಡೆಸಿ ಮಹದಾಯಿ ವಿಚಾರದಲ್ಲಿ ಇಡಬೇಕಾದ ಮುಂದಿನ ಹೆಜ್ಜೆಗಳ ಕುರಿತು ಚರ್ಚೆ ನಡೆಸಿದರು.

ಗೋವಾಕ್ಕೆ ವಂಚನೆ: ಈ ನಡುವೆ ಮಹದಾಯಿ ವಿಷಯದಲ್ಲಿ ಗೋವಾಕ್ಕೆ ವಂಚನೆಯಾಗಿದೆ ಎಂದು ರಾಜ್ಯದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಸತ್ಯಪಾಲ್‌ ಮಲಿಕ್‌, ಕೃಷಿ ಚಟುವಟಿಕೆಗಳಿಗಾಗಿ ಕರ್ನಾಟಕ ಸರ್ಕಾರವು ಮಹದಾಯಿ ನದಿಯನ್ನು ಬಳಸಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಹೇಳಿದ್ದಾರೆ. ಕರ್ನಾಟಕವು ಕೃಷಿ ಚಟುವಟಿಕೆಗಳಿಗಾಗಿ ನೀರನ್ನು ತಿರುಗಿಸಿದ್ದೇ ಆದಲ್ಲಿ ಅದು, ಗೋವಾದ ಬಳಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ಮಹದಾಯಿ ನದಿ ನೀರು ತಿರುಗಿಸುವ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಗೋವಾ ಜನರು ಚಿಂತೆ ಪಡಬೇಕಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಅಗತ್ಯ ಬಿದ್ದರೆ, ಕೇಂದ್ರ ಪರಿಸರ ಸಚಿವಾಲಯದ ವಿರುದ್ಧವೂ ನಿಲ್ಲುತ್ತೇವೆ ಎಂದು ತಿಳಿಸಿದರು. ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು.

- ಪ್ರಮೋದ್‌ ಸಾವಂತ್‌, ಗೋವಾ ಮುಖ್ಯಮಂತ್ರಿ