* ಬಾಂಬ್, ಗ್ರೆನೇಡ್ ಹೊತ್ತುತಂದಿದ್ದ ಡ್ರೋನ್ ಧ್ವಂಸ* ಅಮರನಾಥ ಯಾತ್ರೆ ದಾಳಿಗೆ ಪಾಕ್‌ನ ಮ್ಯಾಗ್ನೆಟಿಕ್ ಬಾಂಬ್
ಜಮ್ಮು(ಮೇ.30): ಅಮರನಾಥ ಯಾತ್ರೆ ಮೇಲೆ ದಾಳಿಗೆ ಪಾಕಿಸ್ತಾನ ನಡೆಸಿದ್ದ ದೊಡ್ಡ ಸಂಚೊಂದನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ವಿಫಲಗೊಳಿಸಿದ್ದಾರೆ. ಪಾಕ್‌ನಿಂದ ಮ್ಯಾಗ್ನೆಟಿಕ್ ಬಾಂಬ್ ಹಾಗೂ ಗ್ರೆನೇಡ್‌ಗಳನ್ನು ಹೊತ್ತು ತಂದ ಡ್ರೋನ್ ಒಂದನ್ನು ಭಾನುವಾರ ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಹೊಡೆದುರುಳಿಸಲಾಗಿದೆ. ಅಮರನಾಥ ಯಾತ್ರೆ ಸೋಮವಾರದಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಈ ಘಟನೆ ನಡೆದಿದೆ.
ಭಾನುವಾರ ಬೆಳಗ್ಗೆ ಹರಿಯಾ ಚಾಕ್ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿರುವುದನ್ನು ಪೊಲೀಸ್ ಶೋಧ ತಂಡಗಳು ಗಮನಿಸಿವೆ. ಕೂಡಲೇ ಅದರತ್ತ ನೆಲದಿಂದಲೇ ಫೈರಿಂಗ್ ಮಾಡಲಾಯಿತು. ಆಗ ಅದು ಕೆಳಗೆ ಬಿತ್ತು. ಅದರಲ್ಲಿ 7 ಮ್ಯಾಗ್ನೆಟಿಕ್ ಬಾಂಬ್‌ಗಳು, 7 ಗ್ರೆನೇಡ್‌ಗಳು ಪತ್ತೆಯಾಗಿವೆ. ಡ್ರೋನ್‌ಗೆ ಅಳವಡಿಸಲಾಗಿರುವ ಬ್ಯಾಟರಿಗಳ ಮೇಲೆ ಚೀನಿ ಭಾಷೆಯಲ್ಲಿ ಮುದ್ರಿತ ಅಕ್ಷರಗಳಿದ್ದು, ಅದನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಮ್ಯಾಗ್ನೆಟಿಕ್ ಬಾಂಬ್?
ಇದನ್ನು ಸ್ಟಿಕ್ಕಿ ಬಾಂಬ್ ಎಂದು ಕರೆಯಲಾಗುತ್ತದೆ. ಗಾತ್ರದಲ್ಲಿ ಸಣ್ಣದಾಗಿರುವ ಇವುಗಳನ್ನು ಯಾವುದೇ ದೊಡ್ಡ ವಾಹನದ ಹಿಂದೆ ನಿಂತು ಕೆಲವೇ ಕ್ಷಣಗಳಲ್ಲಿ ಬಾಂಬ್ ಅನ್ನು ಅಂಟಿಸಿ ಹೋಗಬಹುದು. ಬಳಿಕ ದೂರದಿಂದಲೇ ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟ ನಡೆಸಬಹುದು. ಇದರಲ್ಲಿ ಬಾಂಬ್ ಇಡುವವರು ಸಿಕ್ಕಿಬೀಳುವ, ದಾಳಿಯಲ್ಲಿ ಗಾಯಗೊಳ್ಳುವ ಅಪಾಯವೂ ಇರದು.
