ಸಾಮಾಜಿಕ ಸೇವೆಯ ಫೋಟೋ ತೆಗೆಸಿಕೊಳ್ಳುವ ಭರದಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದ ಹೊಂಡಕ್ಕೆ ಬಿದ್ದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವರು ತಾವು ಮಾಡುವ ಕೆಲಸಗಳಿಗಿಂತ ಹೆಚ್ಚು ಪ್ರಚಾರ, ಪ್ರಸಿದ್ಧಿಗೆ ಹಂಬಲಿಸುತ್ತಾರೆ. ಇದಕ್ಕಾಗಿ ಸಾಮಾಜಿಕ ಜಾಲತಾಣವೇ ಪ್ರಭಾವವೇ ಹೆಚ್ಚಾಗಿರುವ ಈ ಯುಗದಲ್ಲಿ ಜನ ತಾವು ಮಾಡುವ ಸಣ್ಣಪುಟ್ಟ ಕೆಲಸಗಳ ವೀಡಿಯೋ ಫೋಟೋ ತೆಗೆದು ಪೋಸ್ಟ್ ಮಾಡಿ ಪ್ರಚಾರ ಗಿಟ್ಟಿಸಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಜನ ವ್ಯಕ್ತಿಯೊಬ್ಬರು ಸಾಮಾಜಿಕ ಸೇವೆಯ ಪೋಸ್ ನೀಡುವುದಕ್ಕೆ ಹೋಗಿ ಕಟ್ಟಡ ನಿರ್ಮಾಣದ ಹೊಂಡಕ್ಕೆ ಬಿದ್ದಿದ್ದು ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಧ್ಯಪ್ರದೇಶದ ಸಿಯೋನಿಯಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಶ್ರಮದಾನದ ವೇಳೆ 6 ಅಡಿಯ ಹೊಂಡಕ್ಕೆ ಬಿದ್ದಿದ್ದಾರೆ. ವೀಡಿಯೋದಲ್ಲಿ ಬಿಳಿ ಬಣ್ಣದ ಕುರ್ತಾ ಹಾಗೂ ಪ್ಯಾಂಟ್ ಧರಿಸಿರುವ ವ್ಯಕ್ತಿಯೊಬ್ಬರು ಹೊಂಡದ ಪಕ್ಕದಲ್ಲಿ ನಿಂತಿದ್ದು ಕೆಲಸಗಾರರೊಬ್ಬರು ಅವರ ಕೈಗೆ ಕಾಂಕ್ರೀಟ್ ಮಿಕ್ಸ್‌ನ್ನು ಅವರ ಕೈಗೆ ನೀಡಿದ್ದಾರೆ. ಈ ವೇಳೆ ಹೊಂಡಕ್ಕೆ ಅಂದರೆ ಕಟ್ಟಡದ ಫೌಂಡೇಶನ್‌ಗೆ ಈ ಕಾಂಕ್ರೀಟ್ ಮಿಶ್ರಣವನ್ನು ಹಾಕುವಷ್ಟರಲ್ಲಿ ಅವರು ನಿಂತಿದ್ದ ಜಾಗದಲ್ಲಿ ನೆಲ ಕುಸಿದಿದ್ದು ಅವರು ಕೂಡ ಒಟ್ಟಿಗೆ ಆರು ಆಡಿ ಆಳದ ಹೊಂಡಕ್ಕೆ ಬಿದ್ದಿದ್ದಾರೆ.

ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಮೊದಲಿಗೆ ಅವರಿಗೆ ಮಹಿಳಾ ಕಾರ್ಮಿಕರೊಬ್ಬರು ಕಾಂಕ್ರೀಟ್ ಮಿಶ್ರಣವನ್ನು ಕಟ್ಟಡದ ಅಡಿಪಾಯಕ್ಕೆ ಹಾಕಲು ತಂದು ಕೊಟ್ಟಿದ್ದಾರೆ. ಆದರೆ ಅದನ್ನು ಫೌಂಡೇಶನ್‌ ಹೊಂಡಕ್ಕೆ ಸುರಿದ ಅವರು ಫೋಟೋ ಸರಿ ಬರಲಿಲ್ಲ, ಇನ್ನೊಂದು ಬಾರಿ ತಂದುಕೊಡಿ ಎಂದಿದ್ದಾರೆ. ಈ ವೇಳೆ ಇನ್ನೊಬ್ಬ ಕಾರ್ಮಿಕ ಇನ್ನೊಂದು ಸರ ಕಾಂಕ್ರೀಟ್ ಮಿಶ್ರಣವನ್ನು ಅವರ ಕೈಗೆ ತಂದಿಟ್ಟಿದ್ದಾನೆ. ಇನ್ನೇನು ಅವರು ಅದನ್ನು ಕೆಳಗೆ ಸುರಿಯಬೇಕು ಅನ್ನುಷ್ಟರಲ್ಲಿ ಅವರ ಕಾಲಿನ ಕೆಳಭಾಗದ ಮಣ್ಣು ಕುಸಿದು ಅವರು ಸಹಿತ ಹೊಂಡಕ್ಕೆ ಬಿದ್ದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ತೀವ್ರ ನಗೆಪಾಟಲೀಗೆ ಕಾರಣವಾಗುತ್ತಿದೆ.

Scroll to load tweet…

ಈ ವೇಳೆ ಆ ವ್ಯಕ್ತಿಗೆ ಕಾಂಕ್ರೀಟ್ ಮಿಶ್ರಣ ತಂದು ಕೊಟ್ಟ ಕಾರ್ಮಿಕರು ಶಾಕ್‌ನಿಂದ ನೋಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಪ್ರಫುಲ್ ಶ್ರೀವಾಸ್ತವ್ ಎಂಬುವವರೇ ಹೀಗೆ ಫೋಟೋಗಾಗಿ ಕೆಲಸ ಮಾಡಲು ಹೋಗಿ ಹೊಂಡಕ್ಕೆ ಬಿದ್ದ ಸಾಮಾಜಿಕ ಕಾರ್ಯಕರ್ತ. ಹೀಗೆ ಹೊಂಡಕ್ಕೆ ಬಿದ್ದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಲ್ಲಿದ್ದ ಜನ ಕೂಡಲೇ ಅವರನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಇಲ್ಲಿ ಚಿತ್ರಗುಪ್ತ ದೇಗುಲದ ಜೀರ್ಣೋದ್ದಾರ ಕೆಲಸ ನಡೆಯುತ್ತಿತ್ತು. ಪ್ರಫುಲ್ ಶ್ರೀವಾಸ್ತವ್ ಅವರು ಈ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಮುಖ್ಯಸ್ಥರಾಗಿದ್ದರು. ವರದಿಯ ಪ್ರಕಾರ, ಈ ಕೆಲಸವನ್ನು ವಹಿಸಿಕೊಂಡ ಗುತ್ತಿಗೆದಾರರು ಅಧ್ಯಕ್ಷರಾಗಿ ಮೊದಲ ಬಟ್ಟಲ ಸಿಮೆಂಟ್ ಮಿಶ್ರಣವನ್ನು ತಾವೇ ಸುರಿಯಬೇಕು ಎಂದು ಅವರಿಗೆ ಹೇಳಿದ್ದರು ಎಂದು ವರದಿಯಾಗಿದೆ.

ಆದರೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದೆ. ಕಾರ್ಮಿಕರು ಎಷ್ಟು ಕಷ್ಟಪಡುತ್ತಾರೆ ಎಂದು ಇವತ್ತು ಗೊತ್ತಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ದೇವರಿಗೆ ಇವರ ಕೆಲಸ ಇಷ್ಟವಾಗಲಿಲ್ಲ ಎಂದೆನಿಸುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ಅಧ್ಯಕ್ಷರು ಹೊರಟು ಹೋದರು ಎಂದು ಮತ್ತೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಈಗ ಫೋಟೋ ಅಲ್ಲ ವೀಡಿಯೋ ವೈರಲ್ ಆಗ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram