ಮಾರ್ಚ್‌ 14 ರಂದು ಆಟವಾಡುತ್ತಿದ್ದಾಗ ಬೋರ್‌ವೆಲ್‌ನ ಒಳಗೆ ಬದ್ದಿದ್ದ ಎಂಟು ವರ್ಷದ ಬಾಲಕ ಸಾವು ಕಂಡ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.

ನವದೆಹಲಿ (ಮಾ.15): ಮಧ್ಯಪ್ರದೇಶದ ವಿದಿಶಾದಲ್ಲಿ 60 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಎಂಟು ವರ್ಷದ ಬಾಲಕನನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಬುಧವಾರ ಹೊರತೆಗೆಯಲು ಯಶಸ್ವಿಯಾಗಿದೆ. ಆದರೆ, ಬಾಲಕ ಸಾವು ಕಂಡಿದ್ದಾನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. "ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಆದರೆ ಮಗುವನ್ನು ಉಳಿಸಲು ಸಾಧ್ಯವಾಗದಿರುವುದು ಬೇಸರ ತಂದಿದೆ. ಮುಖ್ಯಮಂತ್ರಿಗಳು ಕೂಡ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಗುವಿನ ಕುಟುಂಬಕ್ಕೆ 4 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದ್ದಾರೆ" ಎಂದು ಜಿಲ್ಲಾಧಿಕಾರಿ ಉಮಾ ಶಂಕರ್ ಭಾರ್ಗವ್ ಹೇಳಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ತಂಡವು ತೀವ್ರ ಪ್ರಯತ್ನದ ಬಳಿಕ ಬಾಲಕ ಲೋಕೇಶ್ ಅಹಿರ್ವಾರ್‌ನನ್ನು ರಕ್ಷಣೆ ಮಾಡಿತ್ತು. ಆದರೆ, ರಕ್ಷಣೆ ಮಾಡಿದ ಕೆಲವೇ ಹೊತ್ತಿನಲ್ಲಿ ಅವರು ಸಾವು ಕಂಡರು ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಬಾಲಕ ಮಾರ್ಚ್ 14 ರಂದು ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದು 43 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಎನ್ನಲಾಗಿದೆ.

ವಿದಿಶಾ ಎಎಸ್‌ಪಿ ಸಮೀರ್ ಯಾದವ್, ಎಸ್‌ಡಿಆರ್‌ಎಫ್‌ನ ಮೂರು ತಂಡಗಳು ಮತ್ತು ಎನ್‌ಡಿಆರ್‌ಎಫ್‌ನ ಒಂದು ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಬೋರ್‌ವೆಲ್‌ಗೆ ಇಳಿಸಲಾಗಿದ್ದ ಕ್ಯಾಮೆರಾವನ್ನು ಬಳಸಿ ಮಗುವನ್ನು ಮೇಲ್ವಿಚಾರಣೆ ಮಾಡಲಾಗಿತ್ತು. ಹುಡುಗನಿಗೆ ಆಮ್ಲಜನಕವನ್ನು ಪೂರೈಕೆ ಮಾಡಲಾಗಿತ್ತು. ನಾವು ಅವನೊಂದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ ಹಾಗೂ ಆಹಾರವನ್ನು ನೀಡಲು ಸಾಧ್ಯವಾಗಿರಲಿಲ್ಲ ಎಂದು ಯಾದವ್‌ ಮಾಹಿತಿ ನೀಡಿದ್ದರು.

ಬೋರ್‌ವೆಲ್‌ ದುರಸ್ತಿಗೆ 1.45 ಕೋಟಿ ವೆಚ್ಚ ಇಟ್ಟ ತುಮಕೂರು ಪಾಲಿಕೆ!

ಬೋರ್‌ವೆಲ್‌ನ ಪಕ್ಕದಲ್ಲಿಯೇ ಸಮನಾಂತರವಾಗಿ ಸುರಂಗವನ್ನು ತೋಡಿ ಮಗುವನ್ನು ಹೊರತೆಗೆಯಲು ಮೂರು ಅರ್ಥ್‌ ಮೂವರ್‌ಗಳನ್ನು ಬಳಸಲಾಗಿತ್ತು. ಮಗು ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣ ವೇದಿಕೆಯನ್ನೂ ಸಹ ಸಿದ್ಧ ಮಾಡಲಾಗಿತ್ತು. ಈ ಎಲ್ಲಾ ಪ್ರಯತ್ನಗಳ ನಡುವೆಯೂ ಮಗು ಸಾವು ಕಂಡಿದೆ.

ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!

ರಕ್ಷಣಾ ಕಾರ್ಯಾಚರಣೆ ಮಾಡಿದ ಸಿಬ್ಬಂದಿ 49 ಅಡಿಯ ಗುಂಡಿಯನ್ನು ತೆಗೆಯಲು ಯೋಚಿಸಿದ್ದರು. ಅದರಂತೆ ಯಶಸ್ವಿಯಾಗಿ ಗುಂಡಿ ತೋಡಿ ಮಗುವನ್ನು ಹೊರತೆಗೆಯಲಾಗಿತ್ತು. ಜಿಲ್ಲೆಯ ಲಾಟೇರಿ ತಹಸಿಲ್ ವ್ಯಾಪ್ತಿಯ ಖೇರ್ಖೇಡಿ ಪಥರ್ ಗ್ರಾಮದಲ್ಲಿ ಮಾರ್ಚ್ 14 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾಲಕ ಆಟವಾಡುತ್ತಿದ್ದಾಗ ಬೋರ್‌ವೆಲ್‌ನ ಒಳಗೆ ಕುಸಿದು ಬಿದ್ದಿದ್ದ.