ಬೋರ್‌ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!
* 500 ಸಿಬ್ಬಂದಿಯ ತಂಡದಿಂದ ಯಶಸ್ವಿ ಕಾರ್ಯಾಚರಣೆ
* ಬೋರ್ವೆಲ್‌ಗೆ ಬಿದ್ದು 104 ಗಂಟೆ ಬಳಿಕವೂ ಸಾವು ಗೆದ್ದ ಬಾಲಕ!
* ಛತ್ತೀಸ್‌ಗಢ: 80 ಅಡಿ ಆಳದಿಂದ ಬಾಲಕ ಮೇಲಕ್ಕೆ
ರಾಯ್‌ಪುರ(ಜೂ.16): ಛತ್ತಿಸ್‌ಗಢದ ಜಂಜಗೀರ್ ಚಂಪಾ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 11 ವರ್ಷದ ಕಿವುಡ ಮತ್ತು ಮೂಕ ಬಾಲಕನನ್ನು 104 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಅಚ್ಚರಿಯ ಘಟನೆ ನಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ಭಾರತೀಯ ಸೇನೆ, ಸ್ಥಳೀಯ ಪೊಲೀಸರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮಂದಿಯ ಸತತ ಪರಿಶ್ರಮದಿಂದ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ.
ಸುಮಾರು 104 ಗಂಟೆ ಅಂದರೆ 4 ದಿನಕ್ಕೂ ಹೆಚ್ಚು ಅವಧಿಗೆ ರಾಹುಲ್ ಸಾಹು ಎಂಬ ಈ ಬಾಲಕ ಕೊಳವೆ ಬಾವಿಯಲ್ಲೇ ಜೀವ ಹಿಡಿದುಕೊಂಡಿದ್ದುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ, ಅಷ್ಟೊಂದು ಗಂಟೆಗಳ ಕಾಲ ಈತನ ರಕ್ಷಣಾ ಕಾರಾರಯಚರಣೆಯನ್ನು ಅವಿರತವಾಗಿ ನಡೆಸಿದ ರಕ್ಷಣಾ ಸಿಬ್ಬಂದಿಯ ಕೆಲಸವೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾಲಕನನ್ನು ‘ಧೈರ್ಯಶಾಲಿ’ ಎಂದು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಬಣ್ಣಿಸಿದ್ದಾರೆ.
‘ಬಾಲಕನನ್ನು ಬಿಲಾಸ್‌ಪುರ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸಣ್ಣ ಜ್ವರ ಇದ್ದರೂ ಆರೋಗ್ಯ ಸ್ಥಿರವಾಗಿದೆ. ಆದಷ್ಟುಬೇಗ ಆತ ಸಂಪೂರ್ಣ ಚೇತರಿಸಿಕೊಳ್ಳುತ್ತಾನೆ. ಸಾಹುವನ್ನು ಆಸ್ಪತ್ರೆಗೆ ಸಾಗಿಸಲು 100 ಕಿ.ಮೀ. ದೂರದ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲಾಗಿತ್ತು’ ಎಂದು ಬಿಲಾಸ್‌ಪುರ ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ ಹೇಳಿದ್ದಾರೆ.
ಆಟ ಆಡುವಾಗ ಬಿದ್ದಿದ್ದ:
ಕಳೆದ ಶುಕ್ರವಾರ ಮಧ್ಯಾಹ್ನ ತನ್ನ ಮನೆಯ ಹಿಂಭಾಗದಲ್ಲಿ ತನ್ನದೇ ಜಮೀನಿನಲ್ಲಿ ರಾಹುಲ್ ಸಾಹು ಆಟ ಆಡುತ್ತಿದ್ದ. ಅಲ್ಲಿಯೇ ಆತನ ತಂದೆ ಕೊರೆಸಿದ್ದ ಫೇಲ್ ಆಗಿದ್ದ ಕೊಳವೆ ಬಾವಿ ಇತ್ತು. ಅದರ ಮೇಲೆ ತಗಡಿನ ಶೀಟು ಮುಚ್ಚಲಾಗಿತ್ತಾದರೂ, ಆ ಕ್ಷಣದಲ್ಲಿ ಹೇಗೋ ತೆರೆದುಕೊಂಡಿತ್ತು. 2 ಗಂಟೆಯ ಸುಮಾರಿಗೆ ಕಾಲು ಜಾರಿ ತೆರೆದಿದ್ದ ಕೊಳವೆ ಬಾವಿಯೊಳಗೆ ಬಿದ್ದಿದ್ದ. ಸುಮಾರು 80 ಅಡಿ ಆಳವಿರುವ ಕೊಳವೆ ಬಾವಿಯಲ್ಲಿ ಸಾಹು 69 ಅಡಿ ಆಳದ ವರೆಗೆ ಹೋಗಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ.
ರಕ್ಷಣಾ ಕಾರ್ಯಾಚರಣೆ ಹೇಗೆ:
ವಿಷಯ ತಿಳಿದ ಕೂಡಲೇ ಬಂದ ರಕ್ಷಣಾ ಸಿಬ್ಬಂದಿ, ಸಾಹುವಿಗೆ ಉಸಿರಾಡಲು ಅನುಕೂಲವಾಗುವಂತೆ ಮೊದಲು ಆಕ್ಸಿಜನ್ ಪೈಪ್ ಅಳವಡಿಸಿದರು. ಪೈಪ್‌ನಿಂದಲೇ ಆತನಿಗೆ ನೀರು, ಆಹಾರವನ್ನೂ ನೀಡಲಾಗಿತ್ತು. ಇದೇ ವೇಳೆ, ಗುಜರಾತ್‌ನಿಂದಲೂ ರಕ್ಷಣಾ ತಜ್ಞರು ಪರಿಸ್ಥಿತಿಯ ಸೂಕ್ಷ್ಮತೆ ಗಮನಿಸಿ ಆಗಮಿಸಿದರು. ರಕ್ಷಣಾ ರೊಬೋಟ್ ತಂದರು. ನಂತರ ಕೊಳವೆಬಾವಿಗೆ ಸಮಾನಾಂತರವಾಗಿ ತಗ್ಗು ತೋಡಿದರು. ಅಲ್ಲಿಂದ ಸಾಹು ಕೆಳಗೆ ಬಿದ್ದಿದ್ದ 69 ಅಡಿಗೆ ಸಮನಾಗಿ ಸುರಂಗವೊಂದನ್ನು ಕೊರೆದರು. ಮಂಗಳವಾರ ರಾತ್ರಿ 11.55ಕ್ಕೆ ಆತ ಇದ್ದ ಸ್ಥಳಕ್ಕೆ ತಲುಪಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.
ಹಾವು, ಚೇಳು ಇದ್ದರೂ ಎದೆಗುಂದ ಬಾಲಕ
ಬೋರ್‌ವೆಲ್ ಒಳಗೆ ಹಾವು, ಚೇಳುಗಳೂ ಇದ್ದವು. ಆದರೆ ಬಾಲಕ ಇದರಿಂದ ಎದೆಗುಂದಲಿಲ್ಲ. ಧೈರ್ಯದಿಂದ ಇದ್ದ ಎಂದು ರಕ್ಷಣಾ ಸಿಬ್ಬಂದಿ ಶ್ಲಾಘಿಸಿದ್ದಾರೆ.
- ಹಾವು, ಚೇಳುಗಳಿದ್ದರೂ ಗುಂಡಿಯಲ್ಲಿ ಧೈರ್ಯವಾಗಿ ಕುಳಿತಿದ್ದ 11 ವರ್ಷದ ರಾಹುಲ್
- ರಾಷ್ಟ್ರೀಯ ವಿಪತ್ತು ದಳ, ಸೇನಾಪಡೆ, ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಣಾ ಕಾರ‍್ಯ
- 4 ದಿನಕ್ಕೂ ಅಧಿಕ ಕಾಲ ಜೀವ ಹಿಡಿದು ಕುಳಿತ ಬಾಲಕ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ
- ನಿರಂತರ ಕಾರಾರಯಚರಣೆ ಬಳಿಕ ರಕ್ಷಣೆ: ನಂತರ ಆಸ್ಪತ್ರೆಗೆ ದಾಖಲು, ಚಿಕಿತ್ಸೆ, ಆರೋಗ್ಯ ಸ್ಥಿರ