ಮಧ್ಯಪ್ರದೇಶದ ಸಿಯೋನಿಯಲ್ಲಿ ೪೭ ಜನರನ್ನು ೨೮೦ ಬಾರಿ ಮೃತರೆಂದು ಘೋಷಿಸಿ, ಪ್ರತಿ ಬಾರಿ ೪ ಲಕ್ಷ ರೂ. ಪರಿಹಾರ ಪಡೆದು ೧೧.೨೬ ಕೋಟಿ ರೂ. ಹಗರಣ ನಡೆದಿದೆ. ಕಂದಾಯ ಇಲಾಖೆ ತನಿಖೆಯಲ್ಲಿ ಬೆಳಕಿಗೆ ಬಂದ ಈ ಪ್ರಕರಣದಲ್ಲಿ ೩೭ ಆರೋಪಿಗಳಿದ್ದು, ೨೧ ಜನರನ್ನು ಬಂಧಿಸಲಾಗಿದೆ. ನಕಲಿ ದಾಖಲೆ ಬಳಸಿ ಹಣ ದುರುಪಯೋಗ ಮಾಡಿಕೊಳ್ಳಲಾಗಿದೆ.
ನವದೆಹಲಿ (ಮೇ.22): ವಿಲಕ್ಷಣ ಪ್ರಕರಣದಲ್ಲಿ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ 280 ಬಾರಿ 47 ಜನರನ್ನು ಸಾವು ಕಂಡಿದ್ದಾರೆ ಎಂದು ಘೋಷಣೆ ಮಾಡಿದ್ದಲ್ಲದೆ, ಪ್ರತಿ ಬಾರಿಯೂ 4 ಲಕ್ಷ ರೂ.ಗಳ ನೈಸರ್ಗಿಕ ವಿಕೋಪ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿರುವ ಹಗರಣ ನಡೆದಿದೆ. ಇದರ ಪರಿಣಾಮವಾಗಿ ಒಟ್ಟು 11 ಕೋಟಿ 26 ಲಕ್ಷ ರೂ.ಗಳ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗಿದೆ.
ಕಂದಾಯ ಮತ್ತು ಲೆಕ್ಕಪತ್ರ ಇಲಾಖೆಯ ತನಿಖೆಯ ನಂತರ ಈ ಘಟನೆಗಳು ಬೆಳಕಿಗೆ ಬಂದಿದ್ದು, ಪ್ರಕರಣದಲ್ಲಿ 37 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಮಾಸ್ಟರ್ ಮೈಂಡ್ ಸೇರಿದಂತೆ ಇಪ್ಪತ್ತೊಂದು ಜನರನ್ನು ಈಗಾಗಲೇ ಬಂಧಿಸಲಾಗಿದೆ.
ಉದಾಹರಣೆಗೆ, ಹಾವು ಕಡಿತದಿಂದ ಸಾವನ್ನಪ್ಪಿದ ದ್ವಾರಕಾ ಬಾಯಿ ಎಂಬ ಮಹಿಳೆಯನ್ನು ಅಧಿಕಾರಿಗಳು 29 ಬಾರಿ ಸತ್ತಿದ್ದಾರೆಂದು ಘೋಷಣೆ ಮಾಡಿದ್ದಾರೆ. ಪ್ರತಿ ಬಾರಿಯೂ ಅವರ ಹೆಸರಿನಲ್ಲಿ 4 ಲಕ್ಷ ರೂ. ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗಿದ್ದು, ಒಟ್ಟು 1 ಕೋಟಿ 16 ಲಕ್ಷ ರೂ.ಗಳನ್ನು ವಿತರಿಸಲಾಗಿದೆ.
ಶ್ರೀರಾಮ್ ಎನ್ನುವ ವ್ಯಕ್ತಿಯ ವಿಷಯದಲ್ಲೂ ಇದೇ ರೀತಿ ಆಗಿದೆ. ಈತನನ್ನು 28 ಬಾರಿ ಸತ್ತರೆಂದು ಘೋಷಿಸಲಾಗಿದ್ದು, ಪ್ರತಿ ಬಾರಿಯೂ ಅವರ ಹೆಸರಿನಲ್ಲಿ 4 ಲಕ್ಷ ರೂ. ಪರಿಹಾರವನ್ನು ಮಂಜೂರು ಮಾಡಲಾಗಿದೆ. ದುರುಪಯೋಗದ ಘಟನೆಗಳು 2019-2022ರ ಅವಧಿಯಲ್ಲಿ ನಡೆದಿದ್ದು, ನವೆಂಬರ್ 2022 ರಲ್ಲಿ ಕಂದಾಯ ಇಲಾಖೆಯ ಲೆಕ್ಕಪರಿಶೋಧನೆಯ ಸಮಯದಲ್ಲಿ ಬಹಿರಂಗಗೊಂಡಿವೆ.
"ಹಾವು ಕಡಿತ ಅಥವಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ತನಿಖೆಯ ನಂತರ, 11 ಕೋಟಿ 26 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡು 47 ಜನರ ಖಾತೆಗಳಿಗೆ ಕಳುಹಿಸಲಾಗಿದೆ ಎನ್ನುವುದು ಗೊತ್ತಾಗಿದೆ" ಎಂದು ಖಜಾನೆ ಮತ್ತು ಲೆಕ್ಕಪತ್ರ ಇಲಾಖೆಯ ತನಿಖಾ ಅಧಿಕಾರಿ ರೋಹಿತ್ ಸಿಂಗ್ ಕೌಶಲ್ ಹೇಳಿದರು.
"ನಕಲಿ ದಾಖಲೆಗಳನ್ನು ಬಳಸಿ ಹಣ ಮಂಜೂರು ಮಾಡಿಸಿಕೊಂಡ ಜನರು ನಿಜವಾಗಿಯೂ ಸತ್ತಿದ್ದಾರೋ ಅಥವಾ ಜೀವಂತವಾಗಿದ್ದಾರೋ ಎಂಬುದು ಇನ್ನೂ ತಿಳಿದಿಲ್ಲ, ಏಕೆಂದರೆ ಪದೇ ಪದೇ ವಿನಂತಿಸಿದರೂ ಮರಣೋತ್ತರ ಪರೀಕ್ಷೆ ವರದಿಗಳು ಮತ್ತು ಮರಣ ಪ್ರಮಾಣಪತ್ರಗಳನ್ನು ಒದಗಿಸಲಾಗಿಲ್ಲ. ನಾವು ತನಿಖಾ ವರದಿಯನ್ನು ಸರ್ಕಾರ ಮತ್ತು ಸಿಯೋನಿ ಕಲೆಕ್ಟರ್‌ಗೆ ಕಳುಹಿಸಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ತನಿಖೆಯ ಸಮಯದಲ್ಲಿ, ಕಿಯೋಲಾರಿಯ ತಹಸಿಲ್ ಕಚೇರಿಯಲ್ಲಿ ಗುಮಾಸ್ತರಾಗಿರುವ ಸಚಿನ್ ದಹಾಯತ್ ದುರುಪಯೋಗದ ಆರೋಪದಲ್ಲಿ ತಪ್ಪಿತಸ್ಥನೆಂದು ಸಾಬೀತಾಗಿದೆ. ಹಾವು ಕಡಿತ, ನೀರಿನಲ್ಲಿ ಮುಳುಗಿ ಸಾವು ಕಂಡಿದ್ದು ಮತ್ತು ಸಿಡಿಲಿನಿಂದ ಉಂಟಾದ ಸಾವುಗಳನ್ನು ತೋರಿಸಿ 280 ಜನರ ಹೆಸರಿನಲ್ಲಿ ಮಂಜೂರಾದ ಮೊತ್ತವನ್ನು ಪಡೆದು ಅವರ ಸಂಬಂಧಿಕರು ಮತ್ತು ಪರಿಚಯಸ್ಥರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ ಎಂದು ವರದಿಯಾಗಿದೆ.
ತನಿಖಾ ವರದಿಯು 2019 ರಿಂದ 2022 ರವರೆಗೆ ಕಿಯೋಲಾರಿಯಲ್ಲಿ ನಿಯೋಜಿಸಲಾದ ಎಸ್‌ಡಿಎಂ ಅಮಿತ್ ಸಿಂಗ್ ಬಮ್ರೋಲಿಯಾ ಮತ್ತು ನಾಲ್ವರು ತಹಶೀಲ್ದಾರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ.
"2019 ಮತ್ತು 2022 ರ ನಡುವೆ, ಕಿಯೋಲಾರಿ ತಹಸಿಲ್‌ನಲ್ಲಿರುವ ಸಚಿನ್ ದಹಾಯತ್ ಎಂಬ ಗುಮಾಸ್ತ ಅನೇಕ ಆರ್‌ಬಿಸಿ 64 ಪ್ರಕರಣಗಳಲ್ಲಿ ಹಣವನ್ನು ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಇದು 11 ಕೋಟಿ 26 ಲಕ್ಷ ರೂಪಾಯಿಗಳ ಹಗರಣ ಎಂದು ವರದಿಯಾಗಿದೆ, ಇದನ್ನು ಸರಿಯಾಗಿ ತನಿಖೆ ಮಾಡಲಾಗಿದೆ. ಹಣಕಾಸು ಇಲಾಖೆಯು ಈಗ ತನಿಖಾ ವರದಿಯನ್ನು ಸಲ್ಲಿಸಿದೆ" ಎಂದು ಸಿಯೋನಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಸ್ಕೃತಿ ಜೈನ್ ಹೇಳಿದರು.ಸಚಿನ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಈ ಪ್ರಕರಣದಲ್ಲಿ ಇದುವರೆಗೆ ಬಂಧಿಸಲಾದ 21 ಜನರಲ್ಲಿ ಒಬ್ಬರಾಗಿದ್ದಾರೆ.


