ಮಧ್ಯಪ್ರದೇಶದ ಪನ್ನಾ ವಜ್ರದ ಗಣಿಯಲ್ಲಿ 27.29 ಕ್ಯಾರೆಟ್‌ನ ಅಪರೂಪದ ಜೆಮ್ ಕ್ವಾಲಿಟಿ ವಜ್ರ ಪತ್ತೆಯಾಗಿದೆ. ಎನ್‌ಎಂಡಿಸಿ ಸಿಬ್ಬಂದಿ ಹೊರತೆಗೆದ ಈ ವಜ್ರದ ಹರಾಜು ಬೆಲೆ ₹2 ಕೋಟಿಯಿಂದ ₹2.5 ಕೋಟಿವರೆಗೆ ತಲುಪುವ ನಿರೀಕ್ಷೆಯಿದೆ.
ಮಧ್ಯಪ್ರದೇಶದ ಪನ್ನಾ ವಜ್ರದ ಗಣಿಯಲ್ಲಿ ಅಪರೂಪದ ಹಾಗೂ ಭಾರೀ ಮೌಲ್ಯದ ವಜ್ರವೊಂದು ಪತ್ತೆಯಾಗಿದೆ. ತೆಲಂಗಾಣ ಸರ್ಕಾರದ ಅಧೀನದಲ್ಲಿರುವ ಎನ್‌ಎಂಡಿಸಿಗೆ ಸೇರಿದ ಸಿಬ್ಬಂದಿ ಬರೋಬ್ಬರಿ 27.29 ಕ್ಯಾರೆಟ್‌ನ ಜೆಮ್ ಕ್ವಾಲಿಟಿ ವಜ್ರವನ್ನು ಹೊರತೆಗೆದಿದ್ದಾರೆ. ಈ ವಜ್ರವನ್ನು ಶೀಘ್ರದಲ್ಲೇ ಹರಾಜು ಹಾಕಿ ಮಾರಾಟ ಮಾಡಲು ಸಿದ್ಧತೆ ನಡೆಯುತ್ತಿದ್ದು, ಹರಾಜಿನಲ್ಲಿ ಇದು ರೂ.2 ಕೋಟಿಯಿಂದ ರೂ.2.5 ಕೋಟಿವರೆಗೆ ಬೆಲೆ ಪಡೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಪನ್ನಾ ಗಣಿಯಲ್ಲಿ ಕಾರ್ಯಾಚರಣೆ ಆರಂಭವಾದ ಬಳಿಕ ಪತ್ತೆಯಾದ ವಜ್ರಗಳ ಪೈಕಿ ಇದು ಎರಡನೇ ಅತಿದೊಡ್ಡ ವಜ್ರ ಎಂಬುದು ವಿಶೇಷ. ವಜ್ರದ ಆಕಾರ, ಬಣ್ಣ, ಸ್ವಚ್ಛತೆ ಹಾಗೂ ತೂಕವನ್ನು ಪರಿಶೀಲಿಸಿದ ಬಳಿಕ ಇದರ ಆರಂಭಿಕ ಹರಾಜು ಬೆಲೆಯನ್ನು ಸುಮಾರು ರೂ.1 ಕೋಟಿ ಎಂದು ನಿಗದಿಪಡಿಸುವ ಸಾಧ್ಯತೆ ಇದೆ ಎಂದು ಎನ್‌ಎಂಡಿಸಿ ತಿಳಿಸಿದೆ. ಹರಾಜು ಮುಗಿಯುವ ವೇಳೆಗೆ ಇದರ ಬೆಲೆ ರೂ.2 ಕೋಟಿಯಿಂದ ರೂ.2.5 ಕೋಟಿವರೆಗೆ ಏರಿಕೆಯಾಗಬಹುದು ಎಂದು ಸಂಸ್ಥೆ ಹೇಳಿದೆ.
ಸಿಬ್ಬಂದಿಯ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ
ಅಪರೂಪದ ವಜ್ರ ಪತ್ತೆಯಾಗಿರುವ ಬಗ್ಗೆ ಎನ್‌ಎಂಡಿಸಿ ಸಿಎಂಡಿ ಅಮಿತವ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ಇದು ಸಂಸ್ಥೆಯ ಸಿಬ್ಬಂದಿಯ ಕಠಿಣ ಪರಿಶ್ರಮಕ್ಕೆ ಸಿಕ್ಕ ಮನ್ನಣೆ ಎಂದು ಅವರು ಹೇಳಿದ್ದಾರೆ. ದೇಶದ ಖನಿಜ ಸಂಪತ್ತಿನೊಳಗೆ ಎಷ್ಟೊಂದು ಅಮೂಲ್ಯ ಸಂಪತ್ತು ಅಡಗಿದೆ ಎಂಬುದನ್ನು ಈ ವಜ್ರ ಮತ್ತೊಮ್ಮೆ ತೋರಿಸಿದೆ ಎಂದು ತಿಳಿಸಿದ್ದಾರೆ. ಕೇವಲ ಕಬ್ಬಿಣದ ಅದಿರಿನ ಮೇಲಷ್ಟೇ ಅವಲಂಬಿತವಾಗದೆ, ಇತರ ಅಮೂಲ್ಯ ಖನಿಜಗಳ ವ್ಯವಹಾರವನ್ನೂ ವಿಸ್ತರಿಸಲು ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಏಷ್ಯಾದ ಏಕೈಕ ಮೆಕನೈಸ್ಡ್ ಡೈಮಂಡ್ ಮೈನ್!
ಪನ್ನಾ ಪ್ರಾಜೆಕ್ಟ್ ಎನ್‌ಎಂಡಿಸಿಯ ಏಕೈಕ ವಜ್ರದ ಗಣಿಯಾಗಿದೆ. ಅಷ್ಟೇ ಅಲ್ಲ, ದಕ್ಷಿಣ ಏಷ್ಯಾದಲ್ಲೇ ಏಕೈಕ ಯಾಂತ್ರೀಕೃತ ವಜ್ರದ ಗಣಿಯಾಗಿ ಇದು ಗುರುತಿಸಿಕೊಂಡಿದೆ. ಎನ್‌ಎಂಡಿಸಿಯ ನವರತ್ನ ಪಿಎಸ್‌ಯುನ ನಾನ್-ಐರನ್ ಓರ್ ವ್ಯವಹಾರದಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಗಣಿಯಲ್ಲಿ ಪ್ರತಿವರ್ಷ ಸುಮಾರು 84 ಸಾವಿರ ಕ್ಯಾರೆಟ್ ವಜ್ರಗಳನ್ನು ಉತ್ಪಾದಿಸುವ ಸಾಮರ್ಥ್ಯವಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಗಸ್ಟ್‌ವರೆಗೆ ಸುಮಾರು 6 ಸಾವಿರ ಕ್ಯಾರೆಟ್ ವಜ್ರಗಳನ್ನು ಉತ್ಪಾದಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
60 ವರ್ಷಗಳಷ್ಟು ಹಳೆಯ ಪನ್ನಾ ಗಣಿ ನಂಟು
ಪನ್ನಾ ಪ್ರದೇಶದಲ್ಲಿ ಎನ್‌ಎಂಡಿಸಿಯ ಪಯಣ ಬರೋಬ್ಬರಿ ಆರು ದಶಕಗಳಷ್ಟು ಹಳೆಯದು. 1965ರಲ್ಲಿ ವಜ್ರಗಳ ಅನ್ವೇಷಣೆ ಮತ್ತು ಆರಂಭಿಕ ಗಣಿಗಾರಿಕೆ ಕೆಲಸಗಳನ್ನು ಸಂಸ್ಥೆ ಆರಂಭಿಸಿತ್ತು. ಬಳಿಕ 1966-68ರ ಅವಧಿಯಲ್ಲಿ ಮಜ್‌ಗಾವನ್ ಡೈಮಂಡ್ ಪ್ರಾಜೆಕ್ಟ್ ಅನ್ನು ಅಧಿಕೃತವಾಗಿ ತನ್ನ ವಶಕ್ಕೆ ಪಡೆದುಕೊಂಡಿತು. ನಂತರ 1971-72ರಲ್ಲಿ ಮಜ್‌ಗಾವನ್ ಗಣಿಯಲ್ಲಿ ವಾಣಿಜ್ಯ ಮಟ್ಟದಲ್ಲಿ ಸಂಪೂರ್ಣ ಯಾಂತ್ರೀಕೃತ ವಜ್ರ ಉತ್ಪಾದನೆ ಆರಂಭವಾಯಿತು.
ಈಗಿರುವ ಖನಿಜ ನಿಲುವೆಗಳ ಜೊತೆಗೆ ನಿಯಂತ್ರಿತ ಓಪನ್‌ಕಾಸ್ಟ್ ಬೆಂಚ್ ಮೈನಿಂಗ್ ಮೂಲಕ ವಜ್ರಗಳನ್ನು ಹೊರತೆಗೆಯಲಾಗುತ್ತಿದೆ. ಗಣಿಗಾರಿಕೆಯ ಜೊತೆಗೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುತ್ತಿರುವುದಾಗಿ ಎನ್‌ಎಂಡಿಸಿ ಹೇಳಿದೆ. ಆರ್ಥಿಕ ಲಾಭ ಮತ್ತು ಪರಿಸರದ ಜವಾಬ್ದಾರಿ ಎರಡನ್ನೂ ಸಮತೋಲನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
34.37 ಕ್ಯಾರೆಟ್ ವಜ್ರವೇ ಈವರೆಗಿನ ದಾಖಲೆ!
ಪನ್ನಾ ಗಣಿಯಲ್ಲಿ ಈವರೆಗೆ ಪತ್ತೆಯಾದ ಅತಿದೊಡ್ಡ ವಜ್ರ 34.37 ಕ್ಯಾರೆಟ್ ತೂಕದ್ದಾಗಿದೆ. 2010ರಲ್ಲಿ ಪತ್ತೆಯಾಗಿದ್ದ ಈ ಜೆಮ್ ಕ್ವಾಲಿಟಿ ವಜ್ರವನ್ನು ಹರಾಜಿನಲ್ಲಿ ಬರೋಬ್ಬರಿ ರೂ.3.2 ಕೋಟಿಗೆ ಮಾರಾಟ ಮಾಡಲಾಗಿತ್ತು. ಇದೀಗ ಪತ್ತೆಯಾಗಿರುವ 27.29 ಕ್ಯಾರೆಟ್ ವಜ್ರ ಗಾತ್ರದ ಆಧಾರದಲ್ಲಿ 34.37 ಕ್ಯಾರೆಟ್ ವಜ್ರದ ಬಳಿಕ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಈ ಬಾರಿ ಹರಾಜಿನಲ್ಲಿ ಈ ಅಪರೂಪದ ವಜ್ರ ಎಷ್ಟು ಬೆಲೆ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.


