ಅಯ್ಯೋ ಶಿವನೇ... ಮನೆ ಗೋಡೆ ಕುಸಿದು ಶಿವಲಿಂಗ ಮಾಡ್ತಿದ್ದ 9 ಮಕ್ಕಳ ದಾರುಣ ಸಾವು
ದೇವಸ್ಥಾನದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಶಿವಲಿಂಗ ಮಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿದು 9 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಾಗರ: ದೇವಸ್ಥಾನದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಶಿವಲಿಂಗ ಮಾಡುತ್ತಿದ್ದ ಮಕ್ಕಳ ಮೇಲೆ ಗೋಡೆ ಕುಸಿದು 9 ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಹಲವು ಮಕ್ಕಳು ಈ ದುರಂತದಲ್ಲಿ ಗಾಯಗೊಂಡಿದ್ದು, ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶದ ಸಾಗರ ಜಿಲ್ಲೆಯ ಶಹಪುರದಲ್ಲಿರುವ ಹರ್ದೌಲ್ ಬಾಬಾ ದೇಗುಲದ ಆವರಣದಲ್ಲಿ ಈ ದುರಂತ ನಡೆದಿದೆ.
ಸ್ಥಳೀಯಾಡಳಿತ ನೀಡಿದ ಮಾಹಿತಿ ಪ್ರಕಾರ, ದೇಗುಲದಲ್ಲಿ ಆಯೋಜಿಸಿದ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಮಕ್ಕಳು ಶಿವಲಿಂಗವನ್ನು ನಿರ್ಮಾಣ ಮಾಡುವ ಕೆಲಸದಲ್ಲಿ ತೊಡಗಿದ್ದ ವೇಳೆ ದೇವಸ್ಥಾನದ ಸಮೀಪದಲ್ಲೇ ಇದ್ದ ಮನೆಯೊಂದರ ಗೋಡೆ ಕುಸಿದು ಮಕ್ಕಳ ಮೇಲೆ ಬಿದ್ದಿದ್ದರಿಂದ ಈ ದುರಂತ ಸಂಭವಿಸಿದೆ. 50 ವರ್ಷಕ್ಕಿಂತಲೂ ಹಳೆಯ ಮನೆ ಇದಾಗಿದ್ದು, ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು.
ಕುಸಿಯುತ್ತಿದೆ ಶಿರಾಡಿ ಘಾಟ್..ನಡುಗುತ್ತಿವೆ ಬೆಟ್ಟದ ರಸ್ತೆಗಳು..! ಮನೆ ಗೋಡೆ ಕುಸಿದು ಮಲಗಿದ್ದವರ ದಾರುಣ ಅಂತ್ಯ..!
ಗೋಡೆ ಕುಸಿಯುತ್ತಿದ್ದಂತೆ ಸ್ಥಳೀಯ ಜನರು ಹಾಗೂ ಪೊಲೀಸರು ಸೇರಿ ಅರ್ತ್‌ಮೂವರ್ ಮೂಲಕ ಗೋಡೆ ತೆರವು ಮಾಡಿ ಮಕ್ಕಳನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ದುರಾದರಷ್ಟವಶಾತ್ 9 ಮಕ್ಕಳನ್ನು ಬದುಕಿಸಿಕೊಳ್ಳಲಾಗಲಿಲ್ಲ, ಮೃತರಾದ ಎಲ್ಲಾ ಮಕ್ಕಳು 10ರಿಂದ 15 ವರ್ಷದೊಳಗಿನ ಪ್ರಾಯದವರಾಗಿದ್ದಾರೆ. ಘಟನೆಗೆ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯಿಂದ ಬಹಳ ಬೇಸರವಾಗಿದೆ. ಈ ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ, ಸಂತ್ರಸ್ತ ಮಕ್ಕಳ ಕುಟುಂಬಕ್ಕೆ ತಲಾ 4 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಎಳೆಯ ಪ್ರಾಯದ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ಆದರೆ ಶಿವಲಿಂಗದ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಪುಟ್ಟ ಮಕ್ಕಳನ್ನು ಶಿವ ರಕ್ಷಿಸದೇ ತನ್ನತ್ತ ಸೆಳೆದುಕೊಂಡಿದ್ದು ಮಾತ್ರ ವಿಧಿ ವಿಪರ್ಯಾಸವೇ ಸರಿ.
ಹಾವೇರಿಯಲ್ಲಿ ಮನೆ ಗೋಡೆ ಕುಸಿದು ಮೂವರು ಸಾವು..ನಿರಂತರ ಮಳೆಗೆ ಕುಸಿದ ಮನೆ ಗೋಡೆ
ರೇವಾದಲ್ಲಿ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವು
ಎರಡು ದಿನದ ಹಿಂದಷ್ಟೇ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿದ್ದರು. ಈ ಮಕ್ಕಳು ಕೂಡ 5ರಿಂದ 7 ವರ್ಷದೊಳಗಿನ ಪ್ರಾಯದವರಾಗಿದ್ದರು. ಶಾಲೆಯಿಂದ ವಾಪಸ್ ಬರುತ್ತಿದ್ದ ವೇಳೆ ಗೋಟೆ ಕುಸಿದು ಈ ದುರಂತ ಸಂಭವಿಸಿತ್ತು. ಘಟನೆಯ ಬಳಿಕ ಗೋಡೆ ಕುಸಿತಕ್ಕೊಳಗಾದ ಮನೆಯ ಮಾಲೀಕನನ್ನು ಬಂಧಿಸಲಾಗಿತ್ತು. ಹೆಚ್ಚಿದ ಮಳೆಯಿಂದಾಗಿ ಮಧ್ಯಪ್ರದೇಶದಲ್ಲಿ ಗೋಡೆ ಕುಸಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ವರ್ಷ ಈ ರಾಜ್ಯದಲ್ಲಿ ಮಳೆ ಸಂಬಂಧಿತ ದುರಂತದಲ್ಲಿ ಒಟ್ಟು 200 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ 206 ಮನೆಗಳು ಸಂಪೂರ್ಣ ಕುಸಿದು ಹೋಗಿವೆ. ಅಲ್ಲದೇ 2,403 ಮನೆಗಳಿಗೆ ಭಾಗಶಃ ಹಾನಿಯಾಗಿದೆ.