ಬಿಹಾರದ ಬೇಗುಸರಾಯ್‌ನಲ್ಲಿ ಅಂತರ್ಜಾತಿ ವಿವಾಹವಾದ ಯುವ ಜೋಡಿಯೊಂದು ಸಾವಿಗೆ ಶರಣಾಗಿದೆ.

ಓಡಿ ಹೋಗಿ ಅಂರ್ಜಾತಿ ಮದುವೆಯಾದ ಜೋಡಿಯೊಂದು ನಂತರ ಸಾವಿಗೆ ಶರಣಾದಂತಹ ಅಘಾತಕಾರಿ ಘಟನೆ ಬಿಹಾರದ ಬೇಗಸರಾಯ್‌ನಲ್ಲಿ ನಡೆದಿದೆ. ಸಾವಿಗೂ ಮೊದಲು ಯುವಕ ತಮ್ಮಿಬ್ಬರ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿ ಗುಡ್‌ಬಾಯ್‌ ಎಂದು ಪೋಸ್ಟ್ ಮಾಡಿದ್ದಾನೆ. ಬಳಿಕ ಇಬ್ಬರು ಸಾವಿಗೆ ಶರಣಾಗಿದ್ದಾರೆ.

ಬಿಹಾರದ ಬೇಗುಸರಾಯ್‌ನಲ್ಲಿ ಈ ಘಟನೆ ನಡೆದಿದೆ. ಈಗ ಸಾವಿಗೆ ಶರಣಾದ ಜೋಡಿ ಕೇವಲ 8 ತಿಂಗಳ ಹಿಂದಷ್ಟೇ ತಮ್ಮ ಗ್ರಾಮದಿಂದ ಓಡಿ ಹೋಗಿ ಮದುವೆಯಾಗಿದ್ದು, ಬೇಗುಸರಾಯ್‌ನ ಬಹುದೂರ್‌ಪುರದಲ್ಲಿ ವಾಸ ಮಾಡುತ್ತಿದ್ದರು.

19 ವರ್ಷದ ಶುಭಂ ಕುಮಾರ್ ಆತನ 18 ವರ್ಷದ ಪತ್ನಿ ಮುನ್ನಿ ಕುಮಾರಿ ಸಾವಿಗೆ ಶರಣಾದ ಜೋಡಿ. ಇವರು ತಮ್ಮ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ಈ ಇಬ್ಬರು ಇನ್ಸ್ಟಾಗ್ರಾಮ್ ಮೂಲಕ ಪರಸ್ಪರ ಪರಿಚಿತರಾಗಿದ್ದರು. ನಂತರ 2024ರ ಆಕ್ಟೋಬರ್‌ನಲ್ಲಿ ಮನೆಯವರ ವಿರೋಧ ಲೆಕ್ಕಿಸದೇ ಮನೆಯಿಂದ ಓಡಿ ಬಂದು ವಿವಾಹವಾಗಿದ್ದರು.

ಆದರೆ ಮದುವೆಯ ನಂತರ ಹುಡುಗಿ ಮುನ್ನಿ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ಇಬ್ಬರನ್ನು ಕರೆಸಿ ಪಂಚಾಯ್ತಿ ಮಾಡಿದ್ದರು. ಈ ವೇಳೆ ಮುನ್ನಿ ಹಣೆಯಲ್ಲಿದ್ದ ಮದುವವೆಯ ಸಂಕೇತವಾದ ಸಿಂಧೂರವನ್ನು ಸ್ಪ್ರೈಟ್‌ನಿಂದ ತೊಳೆದಿದ್ದರು. ನಂತರ ಆಕೆಯನ್ನು ಮತ್ತೆ ಆಕೆಯ ಕುಟುಂಬದವರ ಸುಪರ್ದಿಗೆ ನೀಡಿದ್ದರು.

ಆದರೂ ಈ ಜೋಡಿ ಡಿಸೆಂಬರ್‌ನಲ್ಲಿ ಮತ್ತೆ ಜೊತೆಯಾಗಿದ್ದು, ಒಟ್ಟಿಗೆ ಜೀವಿಸಲು ಶುರು ಮಾಡಿದ್ದರು. ಅವರ ಕುಟುಂಬಗಳು ಮತ್ತು ನೆರೆಹೊರೆಯವರ ಪ್ರಕಾರ, ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯದ ಲಕ್ಷಣಗಳು ಇರಲಿಲ್ಲ. ಆದರೂ ಜೋಡಿ ಈಗ ಸಾವಿಗೆ ಶರಣಾಗಿದ್ದಾರೆ.

ಘಟನೆ ನಡೆದ ದಿನ ಈ ಯುವಕನ ಕುಟುಂಬದವರು ಕುಟುಂಬದಲ್ಲಿದ್ದ ಮಗುವೊಂದರ ಚಿಕಿತ್ಸೆಗಾಗಿ ವೈದ್ಯರನ್ನು ನೋಡಲು ಹೊರಗೆ ಹೋಗಿತ್ತು. ಮಧ್ಯಾಹ್ನ ಕುಟುಂಬ ಸದಸ್ಯರು ಹಿಂತಿರುಗಿದಾಗ ಮನೆ ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಕಿಟಕಿಯ ಮೂಲಕ ನೋಡಿದಾಗ ಶುಭಂ ನೇಣು ಬಿಗಿದ ಸ್ಥಿತಿಯಲ್ಲಿದ್ದರೆ ಮತ್ತು ಮುನ್ನಿ ಹಾಸಿಗೆಯ ಮೇಲೆ ನಿರ್ಜೀವವಾಗಿ ಬಿದ್ದಿದ್ದರು. ಇದನ್ನು ನೋಡಿ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ ಡಿವೈಎಸ್ಪಿ ಆನಂದ್ ಪಾಂಡೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಸಹ ಕರೆಸಲಾಯಿತು. ಈ ನವ ಜೋಡಿಯ ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ. ಆದಾರೂ ಮುನ್ನಿ ನೇಣು ಬಿಗಿದುಕೊಂಡು ಮೊದಲು ಸಾವಿಗೆ ಶರಣಾಗಿದ್ದರು. ಆಕೆಯ ಶವವನ್ನು ನೋಡಿದ ನಂತರ ಆಕೆಯ ಶವವನ್ನು ಕೆಳಗೆ ಹಾಸಿಗೆಯ ಮೇಲೆ ಇರಿಸಿ ಆತನೂ ಅದೇ ನೇಣಿಗೆ ಕೊರಳೊಡ್ಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಬಹದ್ದೂರ್‌ಪುರ ಗ್ರಾಮದ ವಿವಾಹಿತ ದಂಪತಿಗಳಾದ ಶುಭಂ ಕುಮಾರ್ ಮತ್ತು ಮುನ್ನಿ ಕುಮಾರಿ ಅವರ ಶವಗಳು ಪತ್ತೆಯಾಗಿವೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆಸಾವಿಗೆ ಕಾರಣವೇನೆಂದು ಈಗಲೇ ಹೇಳಲಾಗದು. ಮರಣೋತ್ತರ ಪರೀಕ್ಷೆ ಮತ್ತು ಪೂರ್ಣ ತನಿಖೆಯ ನಂತರವೇ ನಾವು ನಿಖರವಾದ ಕಾರಣ ಹೇಳಬಹುದು ಎಂದು ಡಿವೈಎಸ್‌ಪಿ ಆನಂದ್ ಪಾಂಡೆ ಹೇಳಿದ್ದಾರೆ.