ನವದೆಹಲಿ[ಫೆ.05]: ಹಿಂದು ಅಥವಾ ಕ್ರೈಸ್ತ ಯುವತಿಯರನ್ನು ಪ್ರೀತಿ, ಪ್ರೇಮದ ಹೆಸರಿನಲ್ಲಿ ಸೆಳೆದು ಮತಾಂತರಗೊಳಿಸಿ, ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವ ‘ಲವ್‌ ಜಿಹಾದ್‌’ ದಕ್ಷಿಣ ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂಬ ಹಿಂದು ಸಂಘಟನೆಗಳು, ಕ್ರೈಸ್ತ ಪಾದ್ರಿಗಳ ಆರೋಪವನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಈವರೆಗೆ ಒಂದೂ ಲವ್‌ ಜಿಹಾದ್‌ ಪ್ರಕರಣ ವರದಿಯಾಗಿಲ್ಲ ಎಂದು ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಅಲ್ಲದೆ, ಲವ್‌ ಜಿಹಾದ್‌ ಎಂಬುದಕ್ಕೆ ಚಾಲ್ತಿಯಲ್ಲಿರುವ ಕಾನೂನಿನಡಿ ಯಾವುದೇ ವ್ಯಾಖ್ಯಾನ ಇಲ್ಲ ಎಂದೂ ಸ್ಪಷ್ಟಪಡಿಸಿದೆ.

ಧರ್ಮವನ್ನು ಪ್ರತಿಪಾದಿಸಿ, ಆಚರಿಸಿ, ಪಸರಿಸುವ ಸ್ವಾತಂತ್ರ್ಯವನ್ನು ಸಂವಿಧಾನದ 25ನೇ ಪರಿಚ್ಛೇದ ನೀಡುತ್ತದೆ. ಇದೇ ವಾದವನ್ನು ಕೇರಳದ ಹೈಕೋರ್ಟ್‌ ಸೇರಿದಂತೆ ವಿವಿಧ ನ್ಯಾಯಾಲಯಗಳು ಕೂಡ ಎತ್ತಿ ಹಿಡಿದಿವೆ. ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ‘ಲವ್‌ ಜಿಹಾದ್‌’ ಎಂಬ ಪದದ ವ್ಯಾಖ್ಯೆ ಇಲ್ಲ. ಅಂತಹ ಒಂದು ಪ್ರಕರಣವೂ ವರದಿಯಾಗಿಲ್ಲ ಎಂದು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ ತಿಳಿಸಿದ್ದಾರೆ.

ಕೇರಳದಲ್ಲಿ ಎರಡು ಅಂತರಧರ್ಮೀಯ ವಿವಾಹ ನಡೆದಿದ್ದು, ಅವುಗಳ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.