Asianet Suvarna News Asianet Suvarna News

ಮಸೀದಿ ಮೇಲೆ ಲೌಡ್‌ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ: ಹೈಕೋರ್ಟ್‌ ಮಹತ್ವದ ತೀರ್ಪು

* ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು

* ಮಸೀದಿ ಮೇಲೆ ಲೌಡ್‌ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ

* ಲೌಡ್‌ಸ್ಪೀಕರ್‌ ಅಳವಡಿಕೆ ಕೋರಿದ್ದ ಅರ್ಜಿ ವಜಾ

Loudspeaker for azaan not a fundamental right says Allahabad high court pod
Author
Bangalore, First Published May 7, 2022, 4:24 AM IST

ಅಲಹಾಬಾದ್‌(ಜ.07): ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ. ದೇಶದ ಹಲವೆಡೆ ಮಸೀದಿಗಳಲ್ಲಿ ಅಕ್ರಮವಾಗಿ ಲೌಡ್‌ಸ್ಪೀಕರ್‌ ಹಾಕಿ ಆಜಾನ್‌ ಮೊಳಗಿಸಲಾಗುತ್ತಿದೆ ಎಂದು ಗಲಾಟೆಗಳ ನಡೆದಿರುವ ನಡುವೆಯೇ, ಹೈಕೋರ್ಚ್‌ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ ಹಾಗೂ ಅಳವಡಿಕೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದೆ.

ಬದಾಯೂ ಜಿಲ್ಲೆಯ ಧೋರನ್‌ಪುರ ಗ್ರಾಮದ ನೂರಾನಿ ಮಸೀದಿಯಲ್ಲಿ ಆಜಾನ್‌ ಮೊಳಗಿಸಲು ಲೌಡ್‌ಸ್ಪೀಕರ್‌ ಅಳವಡಿಕೆಗೆ ಅನುಮತಿ ಕೋರಿ, ಬಿಸೌಲಿ ಉಪವಿಭಾಗಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಅರ್ಜಿಯನ್ನು ಉಪವಿಭಾಗಾಧಿಕಾರಿಗಳು 2021ರ ಡಿ.3ರಂದು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಇರ್ಫಾನ್‌ ಎಂಬ ವ್ಯಕ್ತಿ ಹೈಕೋರ್ಚ್‌ ಮೊರೆ ಹೋಗಿದ್ದ. ‘ಉಪವಿಭಾಗಾಧಿಕಾರಿಗಳ ನಿರ್ಧಾರದಿಂದ ನಮ್ಮ ಕಾನೂನಾತ್ಮಕ ಹಕ್ಕು ಹಾಗೂ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ’ ಎಂದು ವಾದಿಸಿದ್ದ.

ಆದರೆ ಅರ್ಜಿ ತಿರಸ್ಕರಿಸಿದ ಹೈಕೋರ್ಚ್‌ನ ದ್ವಿಸದಸ್ಯ ಪೀಠ, ‘ಮಸೀದಿ ಮೇಲೆ ಲೌಡ್‌ ಸ್ಪೀಕರ್‌ ಅಳವಡಿಕೆ ಮೂಲಭೂತ ಹಕ್ಕಲ್ಲ’ ಎಂಬ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಸೀದಿಗಳ ಧ್ವನಿವರ್ಧಕ ಕೂಡಲೇ ತೆರವು ಮಾಡಿ

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಮಸೀದಿಗಳಲ್ಲಿ ಅಳವಡಿಸಿರುವ ಧ್ವನಿವರ್ಧಕಗಳನ್ನು ಕೂಡಲೇ ತೆರವು ಮಾಡದಿದ್ದರೇ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ಆಶಯದಂತೆ ಇನ್ನು ಮುಂದೆ ಪ್ರತಿನಿತ್ಯ ಬೆಳಿಗ್ಗೆ 5ರಿಂದ 6ವರೆಗೂ ದೇವಸ್ಥಾನದಲ್ಲಿ ಮೈಕ್‌ ಮೂಲಕ ಭಜನೆ ಕಾರ್ಯಕ್ರಮ ಆಂದೋಲನ ಮಾಡಲಾಗುವುದು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವುಗೊಳಿಸಲು ಸುಪ್ರೀಂ ಕೋರ್ಚ್‌ ಆದೇಶವಿದ್ದರೂ ರಾಜ್ಯ ಸರ್ಕಾರವೂ ಕಾಟಾಚಾರಕ್ಕೆ ನೋಟಿಸ್‌ ನೀಡಿ ಕೈ ತೊಳೆದುಕೊಳ್ಳುತ್ತಿದೆ. ಈ ದಿಸೆಯಲ್ಲಿ ಮೇ 8 ರೊಳಗೆ ಮಸೀದಿಗಳಲ್ಲಿ ಧ್ವನಿವರ್ಧಕ ತೆರವು ಮಾಡದಿದ್ದರೆ ಮೇ 9ರಿಂದ ಹಿಂದೂ ದೇವಸ್ಥಾನಗಳಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿ ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ. ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಭಜನೆ, ಪ್ರಾರ್ಥನೆ, ಪೂಜೆಗೆ ವಿಶೇಷ ಫಲದ ಉಲ್ಲೇಖವಿದೆ.

ಪ್ರತಿದಿನ ಬೆಳಿಗ್ಗೆ 5ರಿಂದ 6ರವರೆಗೂ ಸನಾತನ ಹಿಂದೂ ಧರ್ಮ ದೇವಾಲಯಗಳಲ್ಲಿ ಹನುಮಾನ್‌ ಚಾಲೀಸಾ, ಮಂತ್ರ, ವಚನ, ಭಜನೆ, ಗಾಯತ್ರಿ ಮಂತ್ರ, ಶಿವನ ಓಂಕಾರಗಳನ್ನು ಮೈಕ್‌ ಮೂಲಕ ಹಾಕಲು ವಿನಂತಿಸುತ್ತೇವೆ. ನಂತರದಲ್ಲಿ ಪ್ರತಿ ಮನೆ ಮನೆಗಳಲ್ಲೂ ಧ್ವನಿವರ್ಧಕ ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು. ಇದೆ ವೇಳೆ ಶ್ರೀರಾಮಸೇನೆ ಜಿಲ್ಲಾ ಉಪಾಧ್ಯಕ್ಷ ಮಹೇಶ್‌, ಪ್ರಧಾನ ಕಾರ್ಯದರ್ಶಿ ಹೇಮಂತ್‌ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios