ಅಪ್ಪ ಕೋವಿಡ್‌ನಿಂದ ಸಾವು, ಅಮ್ಮ ಕ್ಯಾನ್ಸರ್‌ಗೆ ಬಲಿ : ಬುಲ್ಲಿಬೈ ಮಾಸ್ಟರ್ ಮೈಂಡ್ 18 ರ ತರುಣಿಯ ರೋಚಕ ಕತೆ
- ಬುಲ್ಲಿಬೈ ಮಾಸ್ಟರ್‌ಮೈಂಡ್ ಮಾಸ್ಟರ್ ಶ್ವೇತಾ ಸಿಂಗ್
- ಅಪ್ಪ ಅಮ್ಮನ ಕಳೆದುಕೊಂಡಿರುವ 18ರ ಯುವತಿ
- ಇಂಜಿನಿಯರಿಂಗ್ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದ ಶ್ವೇತಾ
ಮುಂಬೈ(ಜ. 5): ಪ್ರತಿಷ್ಠಿತ ಮುಸ್ಲಿಂ ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಆದಾದ ಬಳಿಕ 18 ವರ್ಷದ ಶ್ವೇತಾ ಸಿಂಗ್ ಅವರನ್ನು ಬುಲ್ಲಿಬೈ ಪ್ರಕರಣದ ಪ್ರಮುಖ ಆರೋಪಿ ಎಂದು ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದರು. ಬಂಧಿತ ಶ್ವೇತಾ ಹಿನ್ನೆಲೆಯೂ ಕರಾಳವಾಗಿದೆ.
ಶ್ವೇತಾ ತನ್ನ ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಳು. ಶ್ವೇತಾ ತಂದೆಯ ಕಳೆದ ವರ್ಷ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದರು. ತಂದೆಯ ಸಾವಿಗೂ ಮೊದಲೇ ಶ್ವೇತಾಳ ತಾಯಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಈಕೆಗೆ ಒಬ್ಬಳು ಹಿರಿಯ ಸಹೋದರಿ ಇದ್ದು, ಆಕೆ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಹಾಗೆಯೇ ಓರ್ವ ಕಿರಿಯ ಸಹೋದರಿ ಹಾಗೂ ಸಹೋದರ ಇದ್ದು ಇಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತ ಶ್ವೇತಾ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದಳು.
ಶ್ವೇತಾ, ಜಟ್‌ಖಲ್ಸಾ07 (JattKhalsa07) ಎಂಬ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಬಳಸುತ್ತಿದ್ದಳು. ಈ ಖಾತೆಯೂ ದ್ವೇಷದ ಪೋಸ್ಟ್‌ಗಳು ಮತ್ತು ಆಕ್ಷೇಪಾರ್ಹ ಫೋಟೋಗಳು ಮತ್ತು ಕಾಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ಬಳಸಲಾಗುತ್ತಿತ್ತು. ಈ ಖಾತೆಯೊಂದಿಗೆ ಸಂಪರ್ಕ ಹೊಂದಿದ್ದವರು ಕೂಡ ಅದೇ ಸಿದ್ಧಾಂತವನ್ನು ಅನುಸರಿಸಿದ್ದರು.
Bulli Bai Deal: ಮುಸ್ಲಿಂ ಮಹಿಳೆಯರ ಹರಾಜು, 18 ವರ್ಷದ ಯುವತಿಯೇ ಮಾಸ್ಟರ್ ಮೈಂಡ್!
ಅಲ್ಲದೇ ಈಕೆ ನೇಪಾಳದಲ್ಲಿರುವ ತನ್ನ ಸ್ನೇಹಿತನ ಸೂಚನೆಯಂತೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಆರೋಪಿಯಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ ನೇಪಾಳಿ ಪ್ರಜೆಯಾಗಿರುವ ಗಿಯೂ (Giyou) ಎಂಬಾತ ಈಕೆಗೆ, ಆ್ಯಪ್‌ನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಸೂಚನೆ ನೀಡುತ್ತಿದ್ದ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ. ಈತನ ಪಾತ್ರ ಹಾಗೂ ಆಕೆಯೊಂದಿಗೆ ಶಾಮೀಲಾಗಿರುವ ಇತರರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಕೆಯನ್ನು ಉತ್ತರಾಖಂಡ್‌ನ ಉಧಮ್ ಸಿಂಗ್ ನಗರ (Udham Singh Nagar) ಜಿಲ್ಲೆಯಲ್ಲಿ ಕಸ್ಟಡಿಗೆ ಪಡೆಯಲಾಗಿದ್ದು, ನಂತರ ಮುಂಬೈ ಪೊಲೀಸ್ ಅಧಿಕಾರಿಗಳು ಜನವರಿ 5 ರವರೆಗೆ ಆರೋಪಿಯನ್ನು ಟ್ರಾನ್ಸಿಟ್ ರಿಮಾಂಡ್‌ಗೆ ನೀಡುವಂತೆ ಕೋರಿದರು. ಈ ಹಿಂದೆ ಶ್ವೇತಾಗೂ ಮೊದಲು ಬೆಂಗಳೂರಿನಲ್ಲಿ ಬಂಧಿತನಾಗಿದ್ದ ವಿಶಾಲ್ ಕುಮಾರ್ (Vishal Kumar) ಕೂಡ ಶ್ವೇತಾ ಹೆಸರನ್ನು ಬಹಿರಂಗಪಡಿಸಿದ್ದ. ಶ್ವೇತಾ, ಬುಲ್ಲಿ ಬಾಯಿ ಅಪ್ಲಿಕೇಶನ್‌ನಲ್ಲಿ ಪೋಸ್ಟ್‌ಗಳು ಮತ್ತು ಚಟುವಟಿಕೆಗಳಲ್ಲಿ ಕೆಲಸ ಮಾಡುವ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವಿಶಾಲ್ ಕುಮಾರ್ ಹೇಳಿದ್ದ.
Bulli Bai row: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಬೆಂಗಳೂರಲ್ಲಿ ಯುವಕ ವಶಕ್ಕೆ!
ಸದ್ಯ ಮುಂಬೈ ಪೊಲೀಸ್ ಅಧಿಕಾರಿಗಳು ಸುಲ್ಲಿ ಡೀಲ್ಸ್ ( Sulli Deals) ಘಟನೆಯಲ್ಲಿ ವಿಶಾಲ್ ಪಾತ್ರ ಇರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಈ ಸುಲ್ಲಿ ಡೀಲ್ಸ್ 2021 ರಲ್ಲಿ ಮೊದಲು ಬೆಳಕಿಗೆ ಬಂದಿತು. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ವಿಶಾಲ್‌ಗೆ, ನಿರ್ದಿಷ್ಟ ಸಮುದಾಯದ ಮಹಿಳೆಯರ ಚಿತ್ರಗಳನ್ನು ಎಡಿಟ್ ಮಾಡಿ ನಂತರ ಅವುಗಳನ್ನು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡುವ ಕೆಲಸ ನೀಡಲಾಗಿತ್ತು. ಈ ಬುಲ್ಲಿ ಬೈ ಅಪ್ಲಿಕೇಷನ್ ಅನ್ನು ಮಹಿಳೆಯ ನಿರ್ಮಿಸಿದ್ದಾಳೆಯೇ ಅಥವಾ ಬೇರೆಯವರು ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಜ.1ರಂದು ಬುಲ್ಲಿ ಬಾಯಿ ಆ್ಯಪ್‌ನಲ್ಲಿ 100ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರ ತಿರುಚಿದ ಫೋಟೋಗಳನ್ನು ಬಳಸಿ ಹರಿಯಬಿಡಲಾಗಿತ್ತು. ಈ ಬಗ್ಗೆ ದೆಹಲಿಯಲ್ಲಿ ಪತ್ರಕರ್ತೆಯೊಬ್ಬರು ದೂರು ನೀಡಿದ್ದರು. ಆ ಬಳಿಕ ಕೇಂದ್ರ ಸರ್ಕಾರ, ಆ್ಯಪ್‌ಗೆ ವೇದಿಕೆ ಕಲ್ಪಿಸಿದ್ದ ಗಿಟ್‌ಹಬ್ ಮತ್ತು ಟ್ವೀಟರ್‌ನಿಂದ ಆ್ಯಪ್ ತೆಗೆಸಿ ಹಾಕಿತ್ತು. ಅಲ್ಲದೆ ಆ್ಯಪ್ ಸೃಷ್ಟಿಸಿದವರ ಮಾಹಿತಿ ನೀಡಿ ಎಂದು ಗಿಟ್‌ಹಬ್ ಮತ್ತು ಟ್ವೀಟರ್‌ಗೆ ಪೊಲೀಸರು ಸೂಚಿಸಿದ್ದಾರೆ.