ಸೆಪ್ಟೆಂಬರ್ 7, 2025 ರಂದು ಭಾರತದಲ್ಲಿ ವರ್ಷದ ಕೊನೆಯ ಮತ್ತು ಅತಿ ದೀರ್ಘ ಚಂದ್ರಗ್ರಹಣ ಗೋಚರಿಸಲಿದೆ. ಈ ಖಗೋಳ ವಿದ್ಯಮಾನವು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಯುರೋಪ್‌ನಾದ್ಯಂತ ಗೋಚರಿಸುತ್ತದೆ. ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಸ್ಪಷ್ಟ ನೋಟ ಕಾಣಬಹುದು.

ಇಂದು, ಸೆಪ್ಟೆಂಬರ್ 7, 2025 ರ ರಾತ್ರಿ, ಭಾರತದ ಆಕಾಶದಲ್ಲಿ ವರ್ಷದ ಕೊನೆಯ ಮತ್ತು 2022 ರ ನಂತರದ ಅತಿ ದೀರ್ಘ ಪೂರ್ಣ ಚಂದ್ರಗ್ರಹಣ ಕಾಣಿಸಲಿದೆ. ಹೌದು ಈ ಖಗೋಳ ವಿದ್ಯಮಾನವು ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಯುರೋಪಿನ ಹಲವು ಭಾಗಗಳಲ್ಲಿ ಗೋಚರಿಸಲಿದೆ.

ಯಾವಾಗ ಗ್ರಹಣ ಗೋಚರ?

ರಾತ್ರಿ 8:58 ರಿಂದ ಆರಂಭವಾಗಿ, 11:00 ರಿಂದ 12:22 ರವರೆಗೆ ಚಂದ್ರನು ಭೂಮಿಯ ನೆರಳಿನಲ್ಲಿ ಸಂಪೂರ್ಣವಾಗಿ ಮುಳುಗಿ, ಕೆಂಪು-ಕಿತ್ತಳೆ ಬಣ್ಣದಲ್ಲಿ 'ರಕ್ತ ಚಂದ್ರ'ನಂತೆ ಹೊಳೆಯಲಿದ್ದಾನೆ. ಗ್ರಹಣವು ಬೆಳಗಿನ 1:25 ರವರೆಗೆ ಮುಂದುವರಿಯಲಿದೆ.

ಪಶ್ಚಿಮ ಬಂಗಾಳದಲ್ಲಿ ಅತ್ಯಂತ ಸ್ಪಷ್ಟ ನೋಟ:

ಈ ಚಂದ್ರಗ್ರಹಣವು ಭಾರತದಾದ್ಯಂತ ಗೋಚರಿಸಿದರೂ, ಪಶ್ಚಿಮ ಬಂಗಾಳ, ವಿಶೇಷವಾಗಿ ಕೋಲ್ಕತ್ತಾದಲ್ಲಿ ಅತಿ ದೀರ್ಘ ಮತ್ತು ಸ್ಪಷ್ಟವಾಗಿ ಕಾಣಲಿದೆ. ಇಲ್ಲಿ ಚಂದ್ರನು ಆಕಾಶದಲ್ಲಿ ಎತ್ತರದಲ್ಲಿರುವುದರಿಂದ ಮತ್ತು ಹವಾಮಾನ ಇಲಾಖೆಯ ಪ್ರಕಾರ ಮೋಡಗಳಿಲ್ಲದ ಶುಭ್ರ ಆಕಾಶದ ಸಾಧ್ಯತೆ ಇರುವುದರಿಂದ, ಗ್ರಹಣದ ಅದ್ಭುತ ನೋಟವನ್ನು ಯಾವುದೇ ಅಡೆತಡೆಯಿಲ್ಲದೆ ವೀಕ್ಷಿಸಬಹುದು.

ಇನ್ನು ಒಡಿಶಾ, ಬಿಹಾರ ಮತ್ತು ಜಾರ್ಖಂಡ್‌ನಂತಹ ಪೂರ್ವ ರಾಜ್ಯಗಳೂ ಸಹ ಈ ದೃಶ್ಯವನ್ನು ಸ್ಪಷ್ಟವಾಗಿ ಕಾಣಲಿವೆ. ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಮತ್ತು ಜಬಲ್ಪುರದಂತಹ ನಗರಗಳಲ್ಲಿ ಗ್ರಹಣ ಗೋಚರಿಸಿದರೂ, ಚಂದ್ರನ ಎತ್ತರ ಸ್ವಲ್ಪ ಕಡಿಮೆ ಇರಬಹುದು. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಪಷ್ಟ ಆಕಾಶವಿದ್ದರೆ, ಅದ್ಭುತ ನೋಟ ಕಾಣಬಹುದು.

ನೀವು ತಪ್ಪದೇ ವೀಕ್ಷಿಸಿ: ರಾತ್ರಿ 11:00 ರಿಂದ 12:22 ರವರೆಗೆ ಚಂದ್ರನ ಕೆಂಪು-ಕಿತ್ತಳೆ ಬಣ್ಣದ ಮಾಂತ್ರಿಕ ದೃಶ್ಯವನ್ನು ಆನಂದಿಸಲು ಸಿದ್ಧರಾಗಿ!