ಬೆಂಗಳೂರಿನ ಜವಾಹರ್ ಲಾಲ್ ನೆಹರು ತಾರಾಲಯವು ಸೆಪ್ಟೆಂಬರ್ 7 ರಂದು ರಾಹುಗ್ರಸ್ತ ಚಂದ್ರಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಿದೆ. ಉಚಿತ ಪ್ರವೇಶ, ಟೆಲಿಸ್ಕೋಪ್‌ಗಳು, LCD ಪರದೆ ಮತ್ತು ಉಪನ್ಯಾಸ ಕಾರ್ಯಕ್ರಮಗಳು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ. 

ಬೆಂಗಳೂರು (ಸೆ.7): ರಾಹುಗ್ರಸ್ತ ಚಂದ್ರಗ್ರಹಣದ ಅಪರೂಪದ ಖಗೋಳ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಗರದ ಜವಾಹರ್ ಲಾಲ್ ನೆಹರು ತಾರಾಲಯ ಸಂಪೂರ್ಣ ಸಿದ್ಧತೆಯಾಗಿದೆ. ನಗರದ ಚಾಲುಕ್ಯ ವೃತ್ತದ ಬಳಿ ಇರುವ ಈ ತಾರಾಲಯವು ಸಾರ್ವಜನಿಕರಿಗೆ ಇಂದು ಅದ್ಭುತ ಗ್ರಹಣವನ್ನು ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಿದೆ.

ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಗ್ರಹಣ ವೀಕ್ಷಣೆಗೆ ಅವಕಾಶವಿದ್ದು, ಜನಸಾಮಾನ್ಯರಿಗೆ ಉಚಿತ ಪ್ರವೇಶವನ್ನು ಒದಗಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ಪೊಲೀಸರ ನಿಯೋಜಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು ಮುಂಜಾಗ್ರತಾ ಕ್ರಮವಾಗಿ ಅಗ್ನಿಶಾಮಕ ವಾಹನವನ್ನು ಸಹ ನಿಯೋಜಿಸಲಾಗಿದೆ. ತಾರಾಲಯದ ಸಿಬ್ಬಂದಿಯು 6 ಟೆಲಿಸ್ಕೋಪ್‌ಗಳು ಮತ್ತು ಒಂದು LCD ಪರದೆಯನ್ನು ಸ್ಥಾಪಿಸಿದ್ದು, ಗ್ರಹಣದ ಸೂಕ್ಷ್ಮ ದೃಶ್ಯಗಳನ್ನು ಸ್ಪಷ್ಟವಾಗಿ ವೀಕ್ಷಿಸಲು ಸಹಾಯ ಮಾಡಲಿದೆ.

ರಾತ್ರಿ 8:30 ರಿಂದ 9:30 ರವರೆಗೆ ಚಂದ್ರಗ್ರಹಣದ ಕುರಿತು ಒಂದು ಗಂಟೆಯ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಗ್ರಹಣದ ವೈಜ್ಞಾನಿಕ ಮಹತ್ವವನ್ನು ತಿಳಿಸಲಾಗುವುದು. ರಾತ್ರಿ 9:30 ರ ನಂತರ ಟೆಲಿಸ್ಕೋಪ್ ಮೂಲಕ ಗ್ರಹಣವನ್ನು ನೋಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಿಸಬಹುದು ಎಂದು ತಾರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಗ್ರಹಣವು ಪ್ರಪಂಚದ ಶೇಕಡಾ 88ರಷ್ಟು ಜನರಿಗೆ ಗೋಚರವಾಗಲಿದ್ದು, ಭಾರತದಿಂದ ಸಂಪೂರ್ಣವಾಗಿ ಕಾಣಬಹುದಾಗಿದೆ. ಮುಂದಿನ ಚಂದ್ರಗ್ರಹಣವು ಮಾರ್ಚ್ 3, 2026 ರಂದು ಕಾಣಲಿದ್ದು, ಈ ಖಗೋಳ ವಿದ್ಯಮಾನವು ಜನರಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ನೆಹರು ತಾರಾಲಯದ ಈ ಕಾರ್ಯವು ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿರುವ ಎಲ್ಲರಿಗೂ ಅಪರೂಪದ ಅವಕಾಶವನ್ನು ಒದಗಿಸಲಿದೆ. ಗ್ರಹಣದ ರೋಮಾಂಚಕ ಕ್ಷಣಗಳನ್ನು ಕಾಣಲು ತಾರಾಲಯಕ್ಕೆ ಭೇಟಿ ನೀಡಿ ಕಣ್ತುಂಬಿಕೊಳ್ಳಬಹುದಾಗಿದೆ.